ಭಾನುವಾರ, ಮೇ 29, 2022
21 °C

ಬಿಟ್ ಕಾಯಿನ್ ಪ್ರಕರಣ: ಶ್ರೀಕಿಗೆ ಕಾಂಗ್ರೆಸ್ ಮುಖಂಡರ ನಂಟು- ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶ್ರೀಕಿಗೆ ಕಾಂಗ್ರೆಸ್ ಮುಖಂಡರ ಜೊತೆ ನಂಟು ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.

ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ವಿರುದ್ಧ ಆರೋಪ ಮಾಡಲು ಯಾವುದೇ ಪ್ರಮುಖ ವಿಷಯ ಇಲ್ಲದ ಕಾರಣ ಕಾಂಗ್ರೆಸ್ ಮುಖಂಡರು ಬಿಟ್ ಕಾಯಿನ್ ವಿಷಯದಲ್ಲಿ ಏನೋ ಆಗಿದೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯ ಯಾವುದೇ ಮುಖಂಡರು ಭಾಗಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯುಬಿ ಸಿಟಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮಗನ ಜೊತೆ ಶ್ರೀಕಿ ಕಾಣಿಸಿಕೊಂಡಿದ್ದ. ನಂತರ ಗೋವಾದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕರ ಮಗನೊಬ್ಬನ ಜೊತೆ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕಿ ಸಿಕ್ಕಿಬಿದ್ದಿದ್ದ. ಆಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಆತನ ಮೇಲೆ ಮೊಕದ್ದಮೆ ದಾಖಲಿಸದೆ ಬಿಟ್ಟು ಕಳುಹಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಆನ್‌ಲೈನ್‌ನಲ್ಲಿ ನಡೆದಿತ್ತು. ಒಬ್ಬರೇ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬಂದಾಗ ಮತಗಳು ಹ್ಯಾಕ್ ಆಗಿರುವ ಅನುಮಾನ ಮೂಡಿತ್ತು. ಅಭ್ಯರ್ಥಿಯೊಬ್ಬರ ಜೊತೆಗೆ ಶ್ರೀಕಿ ಇರುವುದು ಬೆಳಕಿಗೆ ಬಂದರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಕಾಂಗ್ರೆಸ್ ಮುಂದಾಗಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದಿದ್ದರೆ ಕಾಂಗ್ರೆಸ್ ಆಗಲೇ ದೂರು ನೀಡುತ್ತಿತ್ತು’ ಎಂದರು.

‘ಒಂದು ಬಿಟ್ ಕಾಯಿನ್‌ನ ಮೊತ್ತ ₹ 49 ಲಕ್ಷ ಆಗಿದೆ. 5 ಸಾವಿರ ಬಿಟ್ ಕಾಯಿನ್ ಹ್ಯಾಕ್ ಆಗಿದೆ ಎಂದು ಕಾಂಗ್ರೆಸ್ ಮುಖಂಡರು ತಲೆಬುಡವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಹುರುಳಿದ್ದರೆ ಹಣ ಕಳೆದುಕೊಂಡಿದ್ದ ಯಾರಾದರೂ ದೂರು ನೀಡುತ್ತಿರಲಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು