ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಿಢೀರನೆ ಕಣ್ಮರೆಯಾದ ಮಲೆನಾಡಿನ ‘ಜಂಟಲ್ ಮನ್’ ರಾಜಕಾರಣಿ ಎಂ.ಬಿ.ಭಾನುಪ್ರಕಾಶ್

Published 17 ಜೂನ್ 2024, 9:59 IST
Last Updated 17 ಜೂನ್ 2024, 9:59 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡು ರಾಜಕಾರಣದಲ್ಲಿ ತಮ್ಮ ಜೆಂಟಲ್ ಮನ್ ವ್ಯಕ್ತಿತ್ವದಿಂದ ಅಜಾತಶತ್ರು ಆಗಿ ಗುರುತಿಸಿಕೊಂಡಿದ್ದವರು ಎಂ.ಬಿ.ಭಾನುಪ್ರಕಾಶ್.

ಮೂಲತಃ ಇಲ್ಲಿನ ಆರ್ ಎಸ್ ಎಸ್ ನ ಶಕ್ತಿ ಕೇಂದ್ರ, ಸಂಸ್ಕೃತ ಗ್ರಾಮ ಮತ್ತೂರಿನವರು.

ಸಹಜವಾಗಿಯೇ ಬಾಲ್ಯದಿಂದಲೂ ಸಂಘದ ನಂಟಿನಲ್ಲಿಯೇ ಬೆಳೆದುಬಂದ ಭಾನುಪ್ರಕಾಶ್, ಜನಸಂಘದಲ್ಲೂ ಸಕ್ರಿಯರಾಗಿದ್ದರು.

2001ರಲ್ಲಿ ಗಾಜನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡ ಭಾನುಪ್ರಕಾಶ್, ಬಂಗಾರಪ್ಪ 2004ರಲ್ಲಿ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದಾಗ ಬಿಜೆಪಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಪ್ರಚಾರದ ವೇಳೆ ಮುಖಾಮುಖಿಯಾದಾಗ ಬಂಗಾರಪ್ಪ ಅವರು- 'ಭಾನುಜಿ ನೀವು ಜೆಂಟಲ್ ಮನ್. ನಾನು ಗೆಲ್ಲಲಿಲ್ಲ ಎಂದರೆ ಗೆಲುವು ನಿಮ್ಮದಾಗಲಿ" ಎಂದು ಹಾರೈಸಿದ್ದರಂತೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಲು ತಯಾರಿ ನಡೆಸಿದ್ದಾಗ ಶಿಕಾರಿಪುರದ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು.

ಕೆಡಿಪಿ ಸಭೆಗಳಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು 'ಸರ್ ನಾನು ನಿಮ್ಮ ಕ್ಷೇತ್ರದ ಮತದಾರ. ನನ್ನ ಸ್ವಗ್ರಾಮ ಮತ್ತೂರು ತೀರ್ಥಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ನನ್ನ ಊರಿನ ಕೆಲಸವನ್ನು ಆದ್ಯತೆ ಮೇಲೆ ಮಾಡಿಕೊಡಬೇಕು ಎನ್ನುತ್ತಿದ್ದರು. ಕಿಮ್ಮನೆ ಕೂಡಾ ಅವರ ಊರಿನ ಬಹುತೇಕ ಬೇಡಿಕೆಗಳಿಗೆ ನಗು- ನಗುತ್ತಲೇ ಅಸ್ತು ಅನ್ನುತ್ತಿದ್ದರು.

ಇನ್ನು ಜೆಡಿಎಸ್ ನ ಅಪ್ಪಾಜಿ ಗೌಡರ ಜೊತೆ ಕೂಡಾ ಇವರದು ಅದೇ ಪಿತ್ಯಾದರ. ಮಧು ಬಂಗಾರಪ್ಪ ಮೊದಲ ಬಾರಿ ಜೆಡಿಎಸ್ ನಿಂದ ಶಾಸಕರಾದಾಗ, ಅವರು ಸಭೆಗಳಲ್ಲಿ ವಿಷಯ ಮಂಡಿಸಿದಾಗ, ಭಾನುಪ್ರಕಾಶ್ ಅವರನ್ನು ಬೆಂಬಲಿಸಿ ಮಾತನಾಡುತ್ತಿದ್ದರು.

ಕಾಗೋಡು ತಿಮ್ಮಪ್ಪನವರು ಅವರನ್ನು ಪ್ರೀತಿಯಿಂದ 'ಭಾನು ಭಟ್ರೇ' ಅನ್ನುತ್ತಿದ್ದರು.

ಇವೆಲ್ಲವೂ ಪಕ್ಷ ರಾಜಕಾರಣದ ಆಚೆ ಭಾನುಪ್ರಕಾಶ್ ಅವರಿಗೆ ಎಲ್ಲರೊಂದಿಗೆ ಇದ್ದ ಆಪ್ತತೆಗೆ ನಿದರ್ಶನ ಎಂದು ನಿಕಟವರ್ತಿ ವೀರೇಂದ್ರ ಹೇಳುತ್ತಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಎಂ.ಬಿ.ಭಾನುಪ್ರಕಾಶ್, 2013ರಿಂದ 19ರವರೆಗೆ ಒಂದು ಅವಧಿಗೆ ವಿಧಾನಪರಿಷತ್ ಸದಸ್ಯ ಆಗಿದ್ದರು.

ಶಿವಮೊಗ್ಗದಲ್ಲಿ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹಾಗೂ ಡಿ.ಎಚ್.ಶಂಕರಮೂರ್ತಿ ಅವರೊಂದಿಗೆ ಸಮಾನ ಸಲುಗೆ ಹೊಂದಿದ್ದ ಅವರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ವೇಳೆ ಮೂವರ ನಡುವೆಯೂ ಸಮನ್ವಯ ಸಾಧಿಸಿ ಮಲೆನಾಡಿನಲ್ಲಿ ಪಕ್ಷದ ಬೇರು ವಿಸ್ತರಣೆಗೆ ನೆರವಾಗಿದ್ದರು.

ಬಂಗಾರಪ್ಪ ಅವರನ್ನು ಬಿಜೆಪಿಗೆ ಕರೆತರುವಲ್ಲಿ, ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಜೆಪಿಯಿಂದ ವಾಪಸ್ ಬಿಜೆಪಿಗೆ ಕರೆತರುವಲ್ಲಿ ಎಂ.ಬಿ.ಭಾನುಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದರು.

ಎಂ.ಬಿ.ಭಾನುಪ್ರಕಾಶ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ 6 ಗಂಟೆಗೆ ಮತ್ತೂರಿನಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಗ್ರಾಮದಲ್ಲಿಯೇ ಶ್ರದ್ಧಾಂಜಲಿ ಸಭೆ ನಡೆಯಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT