ಭಾನುವಾರ, ಮೇ 22, 2022
23 °C

ಯತ್ನಾಳ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತಂದಿವೆ, ಶೀಘ್ರವೇ ಕ್ರಮ: ವಿಜಯೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಪಕ್ಷ ಶೀಘ್ರವೇ ಕ್ರಮ ಜರುಗಿಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸ್ಥಾನಕ್ಕೆ ₹ 2,500 ಕೋಟಿ ನೀಡುವಂತೆ ಕೇಂದ್ರದ ನಾಯಕರೇ ಕೇಳಿದ್ದರು ಎಂದು ಯತ್ನಾಳ್‌ ಹೇಳಿದ್ದಾರೆ. ಅವರಿಗೆ ಈ ರೀತಿ ಒತ್ತಡ ಹಾಕಿದವರು ಯಾರು ಎಂಬುದನ್ನು ಬಹಿರಂಗಪಡಿಸಲಿ. ಅವರ ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತಂದಿವೆ. ಹೇಳಿಕೆಯನ್ನು ರಾಜ್ಯ, ರಾಷ್ಟ್ರೀಯ ನಾಯಕರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷದ ಹೈಕಮಾಂಡ್‌ ಯತ್ನಾಳ್‌ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ’ ಎಂದರು.

‘ಬಿಜೆಪಿ ಹಲವು ಸಚಿವರ ಮೇಲೆ ವಿರೋಧ ಪಕ್ಷಗಳು ವಿನಾಕಾರಣ ಕಮಿಷನ್ ಆರೋಪ ಮಾಡುತ್ತಿವೆ. ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಇಂತಹ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ’ ಎಂದು ಕುಟುಕಿದರು.

‘ಸಚಿವ ಸಂಪುಟ ಸೇರುವ ಬಗ್ಗೆ ಯಾವುದೇ ಒತ್ತಡ ಹಾಕಿಲ್ಲ. ಪಕ್ಷ ಈಗಾಗಲೇ ಸೂಕ್ತ ಸ್ಥಾನ ನೀಡಿದೆ. ಹಳೆ ಮೈಸೂರು ಭಾಗಗಳಲ್ಲಿ ಬಿಜೆಪಿ ಬಲವರ್ಧನೆಗೊಂಡಿದೆ. ಸ್ವಲ್ಪ ಶ್ರಮಪಟ್ಟರೆ ಬಿಜೆಪಿಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧ್ಯವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶಿವಮೊಗ್ಗದಲ್ಲಿ ಈಚೆಗೆ ನಡೆದ ಕೆಲವು ಘಟನೆಗಳ ಹಿಂದೆ ದುಷ್ಟ ಸಂಘಟನೆಗಳ ಕೈವಾಡವಿದೆ. ನಗರದ ಶಾಂತಿ ಹದಗೆಡಿಸಲು ಪ್ರಯತ್ನಿಸುತ್ತಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಇಂತಹ ಘಟನೆಗಳು ಸಂಭವಿಸಿರಲಿಲ್ಲ. ಈಗಿನ ಗೃಹ ಸಚಿವರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು