ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರ ‘ಅಭಿಮನ್ಯು’ ಆಗುವುದು ತಪ್ಪಿಸಿದರೇ ಬಿಎಸ್‌ವೈ?

ವರುಣಾ ಕ್ಷೇತ್ರ: ಸಿದ್ದರಾಮಯ್ಯ ವಿರುದ್ಧ ಬಿ.ವೈ. ವಿಜಯೇಂದ್ರ ಸ್ಪರ್ಧೆ ವಿಚಾರ
Last Updated 2 ಏಪ್ರಿಲ್ 2023, 8:25 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪುತ್ರ ಬಿ.ವೈ. ವಿಜಯೇಂದ್ರ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ಶಿಕಾರಿಪುರವೇ ನಮ್ಮ ಕರ್ಮಭೂಮಿ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಆ ಮೂಲಕ ತಮ್ಮ ಕುಟುಂಬದ ವಿರುದ್ಧ ಪಕ್ಷದೊಳಗಿನ ‘ಹಿತಶತ್ರು’ಗಳು ಹೆಣೆದಿದ್ದ ತಂತ್ರ ವಿಫಲಗೊಳಿಸಿ, ‘ವರುಣಾ’ದಲ್ಲಿ ವಿಧಾನಸಭೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧದ ಕುರುಕ್ಷೇತ್ರದಲ್ಲಿ ವಿಜಯೇಂದ್ರ ‘ಅಭಿಮನ್ಯು’ ಆಗುವುದನ್ನು ತಪ್ಪಿಸಿದ್ದಾರೆ. ಇನ್ನೊಂದೆಡೆ ಶಿಕಾರಿಪುರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬೆಂಬಲಿಗರೊಂದಿಗಿನ ದಶಕಗಳ ‘ಅಘೋಷಿತ ಸ್ನೇಹ’ವನ್ನು ಗಟ್ಟಿ ಮಾಡಿಕೊಂಡಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಆರು ತಿಂಗಳಿಂದ ಸಿದ್ಧತೆ: ಯಡಿಯೂರಪ್ಪ ಅವರ ಆಣತಿಯಂತೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲು ಬಿ.ವೈ. ವಿಜಯೇಂದ್ರ ಈಗಾಗಲೇ ರಂಗ ಸಜ್ಜು ಮಾಡಿಕೊಂಡಿದ್ದಾರೆ. 6 ತಿಂಗಳಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಹೋಬಳಿವಾರು ಸಂಚರಿಸಿ ಬೆಂಬಲಿಗರ ಪ್ರತ್ಯೇಕ ಸಭೆ ನಡೆಸಿದ್ದಾರೆ. ಎರಡೆರಡು ಬಾರಿ ಮತದಾರರನ್ನು ಸಂಪರ್ಕಿಸಿದ್ದಾರೆ. ಯಡಿಯೂರಪ್ಪ ಜನ್ಮದಿನದಂದು (ಫೆ. 27) ಕ್ಷೇತ್ರದಲ್ಲಿ ಮನೆಮನೆಗೆ ‘ಉಡುಗೊರೆ’ ಕಳುಹಿಸಿ ತಮ್ಮ ಉಮೇದುವಾರಿಕೆಯನ್ನು ಖಾತ್ರಿ ಪಡಿಸಿದ್ದರು.

ಸ್ಪರ್ಧೆಗೆ ಅಖಾಡ ಸಿದ್ಧಪಡಿಸಿಕೊಂಡಿರುವ ಹೊತ್ತಿನಲ್ಲೇ ‘ವರುಣಾ’ ವಿಚಾರ ಮುನ್ನೆಲೆಗೆ ಬಂದು ವಿಜಯೇಂದ್ರ ಬೆಂಬಲಿಗರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಅದಕ್ಕೆ ಯಡಿಯೂರಪ್ಪ ಶುಕ್ರವಾರ ಬೆಂಗಳೂರಿನಲ್ಲಿ ತೆರೆ ಎಳೆದಿದ್ದಾರೆ.

ವಿಜಯೇಂದ್ರ ಸಮರ್ಥ ಅಭ್ಯರ್ಥಿ: ವರುಣಾ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ವಿಜಯೇಂದ್ರ ಅವರೇ ಸಿದ್ದರಾಮಯ್ಯ ವಿರುದ್ಧ ಸಮರ್ಥ ಅಭ್ಯರ್ಥಿ ಎಂಬ ಲೆಕ್ಕಾಚಾರದಿಂದ ಬಿಜೆಪಿ ಕಣಕ್ಕಿಳಿಸಲು ಮುಂದಾಗಿದೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಕುಟುಂಬದವರಿಗೆ, ಇಲ್ಲವೇ ಅವರು ಸೂಚಿಸಿದವರಿಗೆ ಟಿಕೆಟ್ ಕೊಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕವಾಗಿ ‘ವರುಣಾ’ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬದ್ಧ ಎಂದು ಮಾರ್ಚ್‌ 24ರಂದು ಮೈಸೂರಿನಲ್ಲಿ ವಿಜಯೇಂದ್ರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದರು.

2018ರ ಚುನಾವಣೆಯಲ್ಲಿ ವಿಜಯೇಂದ್ರ, ವರುಣಾದಲ್ಲಿ ಅಖಾಡ ಸಿದ್ಧಪಡಿಸಿಕೊಂಡರೂ ಕೊನೆಯ ಗಳಿಗೆಯಲ್ಲಿ ಬಿಜೆಪಿ ವರಿಷ್ಠರು ಟಿಕೆಟ್‌ ನಿರಾಕರಿಸಿದ್ದರು. ಈಗ ದಿಢೀರ್‌ ಅವರತ್ತ ಆಸಕ್ತಿ ತಾಳಿದ್ದು, ಬೆಂಬಲಿಗರಲ್ಲೂ ಅಚ್ಚರಿ ಮೂಡಿಸಿತ್ತು.

ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯುವ ತಂತ್ರ: ‘ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸಬೇಕು ಎಂಬುದು ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳ ತಂತ್ರ. ಸಿದ್ದರಾಮಯ್ಯ ಅಲ್ಲಿ ಸೋತರೆ ಭವಿಷ್ಯದಲ್ಲಿ ಕಾಂಗ್ರೆಸ್ ಮುಗಿಯುತ್ತದೆ. ವಿಜಯೇಂದ್ರ ಪರಾಭವಗೊಂಡರೆ ಯಡಿಯೂರಪ್ಪ ಕುಟುಂಬಕ್ಕೆ ಹಿನ್ನಡೆಯಾಗಲಿದೆ. ಜೊತೆಗೆ ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ಕುಟುಂಬ ಹಾಗೂ ಸಿದ್ದರಾಮಯ್ಯ ಬೆಂಬಲಿಗರ ನಡುವಿನ ಸಖ್ಯಕ್ಕೂ ಕಲ್ಲು ಬೀಳಲಿದೆ. ಯಾರು ಸೋತರೂ ಲಾಭವಾಗಲಿದೆ ಎಂಬುದು ಯಡಿಯೂರಪ್ಪ ವಿರೋಧಿಗಳ ಲೆಕ್ಕಾಚಾರ. ಹೀಗಾಗಿಯೇ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತಿದ್ದರು’ ಎಂದು ಯಡಿಯೂರಪ್ಪ ಕುಟುಂಬದ ಆಪ್ತರೊಬ್ಬರು
ಹೇಳುತ್ತಾರೆ.

ವಿಜಯೇಂದ್ರ ವರುಣಾದಲ್ಲಿ ಸ್ಪರ್ಧಿಸಿದರೆ ಇತ್ತ ಶಿಕಾರಿಪುರದಲ್ಲೂ ಕುಟುಂಬದ ಹಿಡಿತ ಕೈತಪ್ಪಲಿದೆ. ಸಿದ್ದರಾಮಯ್ಯ ಅವರೊಂದಿಗಿನ ರಾಜಕೀಯ ಸ್ನೇಹಕ್ಕೂ ಎಳ್ಳುನೀರು ಬೀಳಲಿದೆ ಎಂಬುದು ಯಡಿಯೂರಪ್ಪ ಯೋಚನೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಡಳಿತ ವಿರೋಧಿ ಅಲೆ ಇತ್ತು. ಈ ಬಾರಿ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ವರುಣಾದಲ್ಲಿ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ. ಹೀಗಾಗಿ ಅಲ್ಲಿ ಗೆಲುವು ಸುಲಭವಲ್ಲ. ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ನಿಂತರೆ, ತಮ್ಮ ಕುಟುಂಬಕ್ಕೆ ಹಿಂದುಳಿದ ವರ್ಗಗಳ ವಿರೋಧಿ ಎಂಬ ಹಣೆಪಟ್ಟಿ ಬೀಳಲಿದೆ ಎಂಬ ಆತಂಕವೂ ಯಡಿಯೂರಪ್ಪ ಅವರಿಗಿದೆ. ಹೀಗಾಗಿಯೇ ‘ಹರ್ಷದ ಔತಣಕ್ಕೆ ವರ್ಷದ ತುತ್ತು’ ಕಳೆದುಕೊಳ್ಳಲು ಅವರು ಸಿದ್ಧರಿಲ್ಲ‘ ಎಂದು ಯಡಿಯೂರಪ್ಪ ಅವರ ಆಪ್ತರು
ಹೇಳುತ್ತಾರೆ.

............

ಬಿ.ವೈ. ವಿಜಯೇಂದ್ರ ಅವರು ಶಿಕಾರಿಪುರದಲ್ಲಿಯೇ ಸ್ಪರ್ಧಿಸಬೇಕು ಎಂಬುದು ತಾಲ್ಲೂಕಿನ ಜನರ ಒತ್ತಾಸೆ. ನಮ್ಮ (ಕಾರ್ಯಕರ್ತರ) ಒತ್ತಾಯದ ಮೇರೆಗೆ ಅವರನ್ನು ಯಡಿಯೂರಪ್ಪ ಇಲ್ಲಿನ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

ವೀರೇಂದ್ರ ಪಾಟೀಲ್, ಶಿಕಾರಿಪುರ ತಾಲ್ಲೂಕು ಬಿಜೆಪಿ ಅಧ್ಯಕ್ಷ

................

ಯಡಿಯೂರಪ್ಪ ಮಾತು, ವರಿಷ್ಠರು ಮೌನ..?

‘ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಗನ (ಬಿ.ವೈ. ವಿಜಯೇಂದ್ರ) ನಿಲ್ಲಿಸಲೇಬೇಕು ಎಂದಾದರೆ, ನಾನು ಅಲ್ಲಿಯೇ ಕೂತು ಗೆಲ್ಲಿಸಿಕೊಂಡು ಬರುವೆ. ಬೇರೆ ಎಲ್ಲಿಗೂ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಯಡಿಯೂರಪ್ಪ ಹೈಕಮಾಂಡ್‌ಗೆ ಖಡಕ್ಕಾಗಿ ಹೇಳಿದ್ದಾರೆ. ಹೀಗಾಗಿ ವರಿಷ್ಠರು ಮೌನಕ್ಕೆ ಜಾರಿದ್ದಾರೆ’ ಎಂದು ಆಪ್ತರೊಬ್ಬರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT