ಭದ್ರಾವತಿ: ಭದ್ರಾವತಿ– ಶಿವಮೊಗ್ಗ ನಗರಗಳ ಮಧ್ಯೆ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ನಿಲ್ದಾಣಗಳಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ.
ಬೆಳಿಗ್ಗೆ 8ರಿಂದ 10ರವರೆಗೆ ಮತ್ತು ಸಂಜೆ 5ರಿಂದ 7ರವರೆಗೆ ಅಧಿಕ ಸಂಖ್ಯೆಯ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ, ಈ ಸಮಯದಲ್ಲಿಯೇ ಅತಿ ಕಡಿಮೆ ಸಂಖ್ಯೆಯ ಬಸ್‌ಗಳು ಸಂಚರಿಸುತ್ತವೆ.
ಭದ್ರಾವತಿ– ಶಿವಮೊಗ್ಗ ನಡುವೆ ಶಾಲೆ– ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ವ್ಯಾಪಾರಿಗಳು, ಜಿಲ್ಲಾ ಆಸ್ಪತ್ರೆಗೆ ಹೋಗುವ ರೋಗಿಗಳು, ಕೆಲಸ ಅರಸಿ ತೆರಳುವ ಕೂಲಿ ಕಾರ್ಮಿಕರು ಮತ್ತು ಇನ್ನಿತರ ಕೆಲಸ ಕಾರ್ಯಗಳಿಗೆಂದು ನಾಗರಿಕರು ಸಂಚಿಸುತ್ತಿರುತ್ತಾರೆ.
ಶಿವಮೊಗ್ಗ ನಗರ ಜಿಲ್ಲಾ ಕೇಂದ್ರವಾದ್ದರಿಂದ ಭದ್ರಾವತಿ ಮತ್ತು ಸುತ್ತಮುತ್ತಲ ಗ್ರಾಮೀಣ ಭಾಗದ ಜನರು ಹಬ್ಬ ಹರಿದಿನಗಳಿಗೆ, ಮದುವೆ ಸಮಾರಂಭಗಳಿಗೆ ಹೊಸ ಬಟ್ಟೆ ಮತ್ತಿತರ ವಸ್ತುಗಳ ಖರೀದಿಗೆಂದು ಬೆಳಗ್ಗೆ ಹೊರಟು ಸಂಜೆ ಹಿಂತಿರುಗುತ್ತಾರೆ. ಹೀಗಾಗಿ ಬಸ್‌ಗಳು ಕಿಕ್ಕಿರಿದು ತುಂಬುತ್ತವೆ.
ಇವರೆಲ್ಲರಿಗೂ ಬೆಳಿಗ್ಗೆ ಮತ್ತು ಸಂಜೆ ಬಸ್ ವ್ಯವಸ್ಥೆಯ ಅವಶ್ಯಕತೆ ಇದೆ. ಆದರೆ, ಈ ಸಮಯದಲ್ಲಿ ದೂರದ ಊರುಗಳ ಬಸ್ ಹೆಚ್ಚು ಸಂಚರಿಸುತ್ತವೆ. ಆದರೆ, ಅವು ಶಿವಮೊಗ್ಗ ನಗರದೊಳಗೆ ಹೋಗುವುದಿಲ್ಲ.
‘ಬೆಳಿಗ್ಗೆ 10ರಿಂದ 4ಗಂಟೆವರೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ, ಈ ಸಮಯದಲ್ಲಿ ಒಂದರ ಹಿಂದೆ ಒಂದರಂತೆ ಹೆಚ್ಚು ಬಸ್‌ಗಳು ಖಾಲಿ ಸಂಚರಿಸುತ್ತವೆ’ ಎಂದು ಪ್ರತಿದಿನ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೋಗಿಬರುವ ವಕೀಲ ಸುರೇಶ್ ಹೇಳುತ್ತಾರೆ.
‘ಶಕ್ತಿ ಯೋಜನೆ ಪರಿಚಯಿಸಿದ ನಂತರ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ವೇಳೆ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳು ಸರ್ಕಾರಿ ಬಸ್‌ನಲ್ಲಿಯೇ ಸಂಚರಿಸುತ್ತಿದ್ದಾರೆ. ಮೊದಲು ಅವರಲ್ಲಿ ಬಹುತೇಕರು ರೈಲಿನಲ್ಲಿ, ಖಾಸಗಿ ವಾಹನಗಳಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಈ ವರ ದಟ್ಟಣೆಯಿಂದಾಗಿ ಈಗ ಬಸ್‌ಗಳನ್ನು ಒದಗಿಸುವುದು ಹೆಚ್ಚು ಸಮಸ್ಯೆಯಾಗಿದೆ’ ಎಂದು ಸಾರಿಗೆ ಸಂಸ್ಥೆ ಬಸ್‌ನ ನಿರ್ವಾಹಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ನಿಂತಿದ್ದರೆ ಬಸ್‌ಗಳು ನಿಲ್ದಾಣದಲ್ಲಿ ನಿಲ್ಲದೆ ಹಾಗೆಯೇ ಹೋಗುತ್ತವೆ. ಇದರಿಂದ ಎಷ್ಟೋ ಬಾರಿ ಪರೀಕ್ಷೆ ಮತ್ತು ತರಗತಿಗಳು ತಪ್ಪಿವೆ.
–ಬಾಲದೀಪ್ ವಿದ್ಯಾರ್ಥಿ
ಇದು ಕೇವಲ ಭದ್ರಾವತಿ– ಶಿವಮೊಗ್ಗ ಮಾರ್ಗದ ಸಮಸ್ಯೆಯಲ್ಲ. ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲೂ ಬಸ್‌ಗಳ ಸೌಲಭ್ಯ ಸರಿಯಾಗಿಲ್ಲ. ಜಿಲ್ಲಾ ಆಸ್ಪತ್ರೆಗೆ ಬರಲು ಬಸ್‌ಗಾಗಿ ಎರಡು ಗಂಟೆ ಕಾಯಬೇಕಿದೆ.
–ಪುಷ್ಪಾ ಕಾರೆಹಳ್ಳಿ ನಿವಾಸಿ
ಸಿಬ್ಬಂದಿ ರಜೆ ಹೋದರೆ ಬಸ್ ಇರಲ್ಲ..
ಭದ್ರಾವತಿ ಡಿಪೋದಿಂದ ಶಿವಮೊಗ್ಗಕ್ಕೆ ಪ್ರತಿದಿನ 14 ಬಸ್‌ಗಳನ್ನುಓಡಿಸಲಾಗುತ್ತಿದೆ. ಪ್ರತಿ ಬಸ್ ದಿನಕ್ಕೆ 5 ಟ್ರಿಪ್‌ನಂತೆ 15 ನಿಮಿಷಕ್ಕೊಮ್ಮೆ ಓಡಾಡುತ್ತವೆ ಎಂದು ಕೆಎಸ್‌ಆರ್‌ಟಿಸಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ ಮಾಹಿತಿ ನೀಡಿದರು. ‘ತಲಾ 14 ಚಾಲಕರು ನಿರ್ವಾಹಕರು ಕೆಲಸ ಮಾಡುತ್ತಿದ್ದಾರೆ. ಕಾರಣಾಂತರಗಳಿಂದ ಚಾಲಕರಾಗಲಿ ನಿರ್ವಾಹಕರಾಗಲಿ ರಜೆ ತೆಗೆದುಕೊಂಡರೆ ಆ ಬಸ್‌ಗಳು ಡಿಪೋದಲ್ಲಿಯೇ ಉಳಿಯುತ್ತವೆ. ಇದರಿಂದಾಗಿ ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ರೀತಿ ದಿನಕ್ಕೆ 2ರಿಂದ 3 ಬಸ್ ಓಡಾಟ ನಿಲ್ಲಿಸಿದರೆ ಪ್ರಯಾಣಿಕರಿಗೆ ಸಮಸ್ಯೆ ಆಗಬಹುದು. ಇದಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.