ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಾವಶ್ಯಕವಾಗಿ ನಾಲಿಗೆ ಹರಿಬಿಡುವ ಚಾಳಿ ನನಗಿಲ್ಲ: ಬಿವೈಆರ್

Published : 9 ಆಗಸ್ಟ್ 2024, 16:25 IST
Last Updated : 9 ಆಗಸ್ಟ್ 2024, 16:25 IST
ಫಾಲೋ ಮಾಡಿ
Comments

ಶಿವಮೊಗ್ಗ: ‘ಅನಾವಶ್ಯಕವಾಗಿ ನಾಲಿಗೆ ಹರಿಬಿಡುವ ಚಾಳಿ ನನಗಿಲ್ಲ. ಸಂಸತ್‌ ಕಲಾಪದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾವಾಗ ಮಾತಾನಾಡಬೇಕು ಎನ್ನುವ ಸಾಮಾನ್ಯ ಜ್ಞಾನ ನನಗಿದೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿ.ವೈ.ರಾಘವೇಂದ್ರ ಅವರು ಸಂಸತ್ ಕಲಾಪದಲ್ಲಿ ಮಾತನಾಡುವುದಿಲ್ಲ’ ಎನ್ನುವ ಸಚಿವ ಮಧುಬಂಗಾರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

‘ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನ್ನ ಕೊಡುಗೆ ಏನು ಅನ್ನುವುದನ್ನು ಅರಿತುಕೊಂಡೇ ಜನರು ಮತ್ತೊಮ್ಮೆ ಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುತ್ತಲೇ ಬಂದಿದ್ದೇವೆ. ಮಧು ಬಂಗಾರಪ್ಪ ಅವರಿಗೆ ನಾಚಿಕೆ ಆಗಬೇಕು. ಈ ರೀತಿ ಹೇಳಿಕೆ ನೀಡುವ ಮುನ್ನ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಹೇಳಿಕೆ ನೀಡಲಿ’ ಎಂದರು.

‘ಮುಂದಿನ ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬೀಗ ಹಾಕುವ ಸ್ಥಿತಿ ಎದುರಾದರೆ, ಅದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಸಂಸದ ರಾಘವೇಂದ್ರ ಕುಟುಕಿದರು. ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಿಲ್ಲ. ಆದ್ದರಿಂದ, ಕಾಮಗಾರಿ ವಿಳಂಬ ಆಗುತ್ತಿದೆ’ ಎಂದು ಹೇಳಿದರು.

‘ಬೈಂದೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ದವಿದೆ. ಇಲ್ಲಿ ಭೂಮಿ ಕೂಡ ಗುರುತಿಸಲಾಗಿದೆ. ಈ ಬಗ್ಗೆ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆಯಲಾಗಿದೆ’ ಎಂದರು.

‘ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ- ಜೆಡಿಎಸ್‌ನಿಂದ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಸತತ ಏಳನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯಲ್ಲಿ ಪ್ರತಿ ದಿನ ಜನ ಸಂಖ್ಯೆ ಹೆಚ್ಚಾಗುತ್ತಿದೆ. ಪಾದಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

‘ವಕ್ಫ್‌ ಆಸ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುವ ಅವಕಾಶ ಇಲ್ಲ. ಅಂತಹ ಅಧಿಕಾರವನ್ನು ವಕ್ಪ್ ಮಂಡಳಿಗೆ ಕಾಂಗ್ರೆಸ್ ಸರ್ಕಾರ ನೀಡಿತ್ತು. ಇಲ್ಲಿ ಬಡವರಿಗೂ ಅವಕಾಶ ಲಭಿಸಬೇಕು. ಸ್ವಾತಂತ್ರ್ಯಾ ನಂತರ ರಚನೆಯಾದ ವಕ್ಫ್‌ ಸಮಿತಿಗೆ ಮಹಿಳೆಯರಿಗೂ ಅವಕಾಶ ಮಾಡಿಕೊಡಬೇಕು. ಇದರ ಮರುಪರಿಶೀಲನೆ ಆಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT