ಮಂಗಳವಾರ, ಸೆಪ್ಟೆಂಬರ್ 28, 2021
21 °C
ಬ್ರಿಟಿಷರ ವಿರುದ್ಧ ಮಹಿಳೆಯರ ‘ಕರ ನಿರಾಕರಣೆ ಚಳವಳಿ’ l ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಬಾಣಂತಿಯರು

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಿರಸ್ಥಾಯಿ ಮಾವಿನಗುಂಡಿ ಸತ್ಯಾಗ್ರಹ

ವಿ. ಸಂತೋಷ್ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತೀಯರ ವಿಮೋಚನೆಗಾಗಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ರಾಜ್ಯದಲ್ಲಿ ನಡೆದ ಅನೇಕ ಹೋರಾಟ ಸ್ಮರಣೀಯ. ಆ ಹೋರಾಟದಲ್ಲಿ ಕಾರ್ಗಲ್ ಸಮೀಪದ ಮಾವಿನ ಗುಂಡಿಯ ಮಹಿಳಾ ಸತ್ಯಾಗ್ರಹ ಚಿರಸ್ಥಾಯಿಯಾಗಿ ಉಳಿಯುತ್ತದೆ.

ವಿಶ್ವವಿಖ್ಯಾತ ಜೋಗ ಜಲಪಾತದ ಸಮೀಪದ ಮಾವಿನಗುಂಡಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಹಂಚಿಕೊಂಡಿರುವ ಗಡಿಭಾಗ. ಇಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಾ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ತಿಳಿಸುವ ಪ್ರಾಚೀನ ಮಾದರಿಯ ಭವನವೇ ‘ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ’ದ ಸ್ಮಾರಕ.

ಸ್ವಾತಂತ್ರ್ಯ ಸಂಗ್ರಾಮದ ಸುವರ್ಣ ಪುಟದಲ್ಲಿ ಕರ ನಿರಾಕರಣೆ ಸತ್ಯಾಗ್ರಹ ಅವಿಸ್ಮರಣೀಯ. ಅದರಲ್ಲಿ ಮಾವಿನಗುಂಡಿಯ ಮಹಿಳೆಯರ ಉಪವಾಸ ಸತ್ಯಾಗ್ರಹ ಅವರ ದೇಶ ಭಕ್ತಿ, ಛಲ, ಸಂಕಲ್ಪ, ಸಹನೆ, ತ್ಯಾಗ ಹಾಗೂ ಧೈರ್ಯಗಳಿಗೆ ನಿದರ್ಶನವಾಗಿದೆ.

1932ರ ಮೇ 18ರಂದು ಕರ ನೀಡದ ರೈತರ ಎಮ್ಮೆಗಳನ್ನು ಬ್ರಿಟಿಷರ ಪರವಾಗಿ ರಸ್ತೆ ಕೆಲಸದ ಕಾರಕೂನ ಹಾಗೂ ಒಬ್ಬ ಹವಾಲ್ದಾರ ಬಲಾತ್ಕಾರವಾಗಿ ಪಡೆದುಕೊಂಡು ದಬ್ಬಾಳಿಕೆ ನಡೆಸಿದಾಗ ಅವುಗಳನ್ನು ಮರಳಿ ಪಡೆಯಲು ಇಲ್ಲಿನ ಗ್ರಾಮೀಣ ಮಹಿಳೆಯರು ಕೆಚ್ಚೆದೆಯಿಂದ ಸೆಟೆದು ನಿಂತು ಪ್ರತಿಭಟಿಸುತ್ತಾರೆ. ಪ್ರತಿಭಟನೆಯ ಭಾಗವಾಗಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಾರೆ. ಈ
ಸತ್ಯಾಗ್ರಹದಲ್ಲಿ ಬಾಣಂತಿಯರು, ಹೆಣ್ಣುಮಕ್ಕಳು, ವಯಸ್ಕರು ಭಾಗಿ ಯಾದುದು ವಿಶೇಷ. ಇವರಲ್ಲಿ ಪ್ರಮುಖವಾಗಿ ತ್ಯಾಗಲಿ ಭುವನೇಶ್ವರಮ್ಮ 32 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕುಳಿತರೆ, ಕಲ್ಲಾಳ ಲಕ್ಷ್ಮಮ್ಮ 22 ದಿನ ಕಾಲ ಉಪವಾಸ ಸತ್ಯಾಗ್ರಹ ಕುಳಿತು ಹೋರಾಟಕ್ಕೆ ಸ್ಫೂರ್ತಿಯಾದರು.

ಅವರೊಂದಿಗೆ ದೊಡ್ಮನೆ ಮಹಾದೇವಮ್ಮ, ಕುಳಿಬೀಡು ಗಣಪಮ್ಮ, ಪಣಜಿ ಬೈಲು ದುಗ್ಗಮ್ಮ, ಕುಳಿಬೀಡು ಭಾಗೀರಥಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡ ಮಹದೇವಮ್ಮ, ಹೆಗ್ಗಾರ ದೇವಮ್ಮ ಪ್ರಮುಖರು.

ಮಹಾತ್ಮ ಗಾಂಧಿ ಅವರ ಸತ್ಯಾಗ್ರಹದಿಂದ ಪ್ರೇರಿತರಾದ ಈ ಮಹಿಳೆಯರು ತಮ್ಮದೇ ಆದ ಶೈಲಿಯಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಮೊಳಗಿಸಿದ ‘ಕರ ನಿರಾಕರಣೆ’ ಸತ್ಯಾಗ್ರಹ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಣ ಕಹಳೆಯನ್ನು ಮೊಳಗಿಸಿದ್ದು ಮಾತ್ರವಲ್ಲದೇ ಮಹತ್ತರ ಪಾತ್ರ ವಹಿಸಿದ್ದು ಗಮನಾರ್ಹ.

ಇಂತಹ ಮಹತ್ವಪೂರ್ಣ ಹೋರಾಟವನ್ನು ಜನಮಾನಸದ ನೆನಪಿನ ಅಂಗಳದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಿರ್ಮಿಸಿರುವ ಯೋಜನೆಯೇ ಮಹಿಳಾ ಸತ್ಯಾಗ್ರಹ ಸ್ಮಾರಕ ಭವನ.

ಇಲ್ಲಿನ ಸ್ಮಾರಕ ಭವನದಲ್ಲಿ ಮಹಿಳೆಯರು ಸತ್ಯಾಗ್ರಹ ಕುಳಿತ ಮಾದರಿಯ ಆಕೃತಿಗಳನ್ನು ಸುಂದರವಾಗಿ ಕೆತ್ತಿಸಲಾಗಿದೆ. ಮಹಿಳೆಯರಿಗೆ ಕೋಳ ತೊಡಿಸಿ ಬ್ರಿಟಿಷರು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು, ಪ್ರಮುಖ ಮಹಿಳಾ ಹೋರಾಟಗಾರರನ್ನು ಜೈಲಿನಲ್ಲಿ ಬಂಧಿಸಿಟ್ಟಿರುವ ರೀತಿಯ ಕಲಾಕೃತಿಗಳು, ಜೀವಂತ ಆಕೃತಿಗಳ ರೀತಿಯಲ್ಲಿ ಗಮನ ಸೆಳೆಯುತ್ತದೆ. ಸ್ವಾತಂತ್ರ್ಯ ಹೋರಾಟದ ಪ್ರಮುಖ ಕಷ್ಟಕರ ಘಟ್ಟಗಳನ್ನು ನೆನಪಿಸುತ್ತಾ ರೋಮಾಂಚನ ಮೂಡಿಸುವಂತಿದೆ.

ಇದಕ್ಕೆ ಬೆಟ್ಟದ ಮೇಲಿನಿಂದ ಹರಿದು ಬರುವ ಸುಂದರ ಝರಿಗಳು, ಕೃತಕ ಬೆಟ್ಟ ಗುಡ್ಡಗಳು, ಆಕರ್ಷಕವಾದ ಹೂದೋಟ, ಕೋಟೆ ಮಾದರಿಯ ಕಾಂಪೌಂಡ್ ನಿಸರ್ಗದ ಮಡಿಲಿನಲ್ಲಿ ಲೀನವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.

‘75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈಗಾಗಲೇ ಜೋಗ ನಿರ್ವಹಣಾ ಪ್ರಾಧಿಕಾರ ₹ 165 ಕೋಟಿ ವೆಚ್ಛದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಜೋಗ ಜಲಪಾತದ ಸನಿಹದಲ್ಲಿರುವ ಈ ಮಹಿಳಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಜೋಗಕ್ಕೆ ಬರುವ ಪ್ರವಾಸಿಗರಿಗೆ ಉಪಯುಕ್ತ ಮಾಹಿತಿ ದೊರಕಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಇನ್ನಷ್ಟು ಅಭಿವೃದ್ಧಿ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಸಿಗಂದೂರು ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ
ಎನ್‌. ಕೃಷ್ಣಮೂರ್ತಿ ಬಿಳಗಲ್ಲೂರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.