ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ಮುಚ್ಚಿದರೂ ಪರಿಹಾರ ಶ್ಲಾಘನೀಯ: ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್

Last Updated 1 ನವೆಂಬರ್ 2021, 6:27 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾರ್ಖಾನೆ ಮುಚ್ಚಿದ ನಂತರವೂ ಕಾರ್ಮಿಕರಿಗೆ ಸೇರಬೇಕಿದ್ದ ಪರಿಹಾರವನ್ನು ತಲುಪಿಸಿದ್ದು ಇದೇ ಮೊದಲು. ತುಂಗಭದ್ರಾ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಕ್ರಮ ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಭಾನುವಾರ ಇಲ್ಲಿನ ಸಂತ ಥಾಮಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಕ್ಕರೆ ಕಾರ್ಖಾನೆಯ ಕಾರ್ಮಿಕರಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸತ್ತುಹೋದ ಎಮ್ಮೆಯಿಂದ 25 ಲೀಟರ್ ಹಾಲು ಕರೆದಂತೆ, ಕಾರ್ಖಾನೆ ಮುಚ್ಚಿದ 26 ವರ್ಷ ಕಳೆದ ಬಳಿಕ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. ಕಾನೂನಿನ ಪ್ರಕಾರ ಈ ಪರಿಹಾರ ನೀಡುವುದು ಅಸಾಧ್ಯವಾಗಿತ್ತು. ಆದರೆಈಗ ಸಾಧ್ಯವಾಗಿದೆ.ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದ 350ಕ್ಕೂ ಅಧಿಕ ಕಾರ್ಮಿಕರು ಈಗಾಗಲೇ ಮೃತಪಟ್ಟಿದ್ದಾರೆ. ಹೀಗಾಗಿ ಅವರ ವಾರಸುದಾರರಿಗೆ ಪರಿಹಾರ ನೀಡಲಾಗಿದೆ. ಈ ಹಿಂದೆ ವಿತರಿಸಿದ ₹ 7 ಕೋಟಿ ಸೇರಿ ₹ 25 ಕೋಟಿ ಪರಿಹಾರವನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯವರನ್ನು ಕರೆದುಕೊಂಡು ತ್ರಿಪಕ್ಷೀಯ ಒಪ್ಪಂದ ಮಾಡಲಾಗಿದೆ. ಇನ್ನೂ ಒಂದು ತಿಂಗಳ ಅವಧಿಯ ಒಳಗೆ ಯಾವುದೇ ಸಂದರ್ಭದಲ್ಲಿಯೂ ಕಾರ್ಮಿಕರು ದಾಖಲಾತಿ ತೆಗೆದುಕೊಂಡು ಬಂದರೂ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

‘ಕಾರ್ಖಾನೆಯಲ್ಲಿ ಸಲ್ಲಿಸಿದ ಸೇವೆ, ಹುದ್ದೆಗೆ ಅನುಗುಣವಾಗಿ ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಒಪ್ಪಂದ ಮಾಡಿಕೊಂಡಿದ್ದು, ಕಾನೂನಿನ ಚೌಕಟ್ಟಿನಲ್ಲಿ ನೊಂದ ಕಾರ್ಮಿಕರಿಗೆ ಗರಿಷ್ಠ ಪರಿಹಾರ ಸಿಗುವಂತೆ ಮಾಡಿದ್ದೇವೆ. ₹ 25 ಕೋಟಿ ಪರಿಹಾರವನ್ನು ಕಾರ್ಮಿಕರಿಗೆ ಕೊಡಿಸುವ ಕೆಲಸ ಮಾಡಿದ್ದೇನೆ. ಆದರೆ, ಕೆಲವರು ಅದನ್ನೂ ಟೀಕೆ ಮಾಡುತ್ತಿದ್ದಾರೆ. ನೊಂದ ಕಾರ್ಮಿಕರಿಗೆ ಸಾಮರ್ಥ್ಯ ಇದ್ದವರು ಇನ್ನೂ ಹೆಚ್ಚಿನ ಪರಿಹಾರ ಕೊಡಿಸಿದರೂ ಸ್ವಾಗತಿಸುತ್ತೇನೆ’ ಎಂದು ಕುಟುಕಿದರು.

‘ಕೆಲವರಿಗೆ ಕಡಿಮೆ ನೀಡಲಾಗಿದೆ. ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನನಗಿಂತಲೂ ಹೆಚ್ಚಿನ ಪರಿಹಾರವನ್ನು ಸಂಸ್ಥೆಯ ಮ್ಯಾನೇಜ್‍ಮೆಂಟ್‍ನಿಂದ ಕೊಡಿಸಬಹುದು’ ಎಂದು ಹೇಳಿದರು.

ಮಂಗಳೂರು ವಿಭಾಗದ ಕಾರ್ಮಿಕ ಇಲಾಖೆಯ ಸಹಾಯಕ ಅಯುಕ್ತ ಶಿವಕುಮಾರ ಮಾತನಾಡಿ, ‘26 ವರ್ಷಗಳ ಜಟಿಲ ಸಮಸ್ಯೆಯನ್ನು ಬಗೆಹರಿಸುವುದು ಹೇಳಿದಷ್ಟು ಸುಲಭವಾಗಿರಲಿಲ್ಲ. ಇದರ ಹೆಚ್ಚಿನ ಶ್ರಮ ಶಾಸಕ ಆಯನೂರು ಮಂಜುನಾಥ್ ವಹಿಸಿದ್ದಾರೆ’ ಎಂದರು.

ಕಾರ್ಮಿಕ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ‘26 ವರ್ಷದ ನಂತರ 926 ಕಾರ್ಮಿಕರಿಗೆ ಗ್ರ್ಯಾಜ್ಯುಟಿ, ಬೋನಸ್ ಎಲ್ಲವನ್ನೂ ಸೇರಿಸಿ ಪರಿಹಾರ ನೀಡಲಾಗುತ್ತಿದೆ ಎಂದರು.

ಸಾಂಕೇತಿಕವಾಗಿ 15 ಕಾರ್ಮಿಕರಿಗೆ ಚೆಕ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT