ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಗಲಾಟೆ: ಕಾನೂನುಬಾಹಿರ ಚಟುವಟಿಕೆ ಸಹಿಸಲ್ಲ– ಮುಖ್ಯಮಂತ್ರಿ ಸಿದ್ದರಾಮಯ್ಯ

Published 2 ಅಕ್ಟೋಬರ್ 2023, 5:32 IST
Last Updated 2 ಅಕ್ಟೋಬರ್ 2023, 5:32 IST
ಅಕ್ಷರ ಗಾತ್ರ

ಬೆಂಗಳೂರು: ‘ಬೇರೆಯವರು ಇನ್ನೊಬ್ಬರ ಧಾರ್ಮಿಕ ಕಾರ್ಯಕ್ರಮಕ್ಕೆ ಕಲ್ಲೆಸೆಯುವುದು, ಧಕ್ಕೆ ಮಾಡುವುದು ಕಾನೂನುಬಾಹಿರ. ಇಂತಹ ಚಟುವಟಿಕೆಯನ್ನು ನಮ್ಮ ಸರ್ಕಾರ ಸಹಿಸಲ್ಲ. ಹತ್ತಿಕ್ಕಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಶಿವಮೊಗ್ಗ ಹೊರವಲಯದ ರಾಗಿಗುಡ್ಡ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಅಲ್ಲಿ ಪೊಲೀಸರ ಮೇಲೂ ಕಲ್ಲು ಎಸೆದಿದ್ದಾರೆ’ ಎಂದರು.

‘ಪೊಲೀಸರು ಅನಿವಾರ್ಯವಾಗಿ ಅಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಗಲಾಟೆಗೆ ಕಾರಣರಾದ 40ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ. ಪೊಲೀಸರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈಗ ಅಲ್ಲಿ ಶಾಂತಿ ನೆಲೆಸಿದೆ’ ಎಂದರು. 

ದೊಡ್ಡ ಪ್ರಮಾಣದ ಗಲಾಟೆ ಪೊಲೀಸರು ತಪ್ಪಿಸಿದ್ದಾರೆ: ‘ಶಿವಮೊಗ್ಗದಲ್ಲಿ ದೊಡ್ಡ ಪ್ರಮಾಣದ ಗಲಾಟೆಯನ್ನು ಪೊಲೀಸರು ತಪ್ಪಿಸಿದ್ದಾರೆ. ಎರಡೂ ಗುಂಪಿನ ಜನರನ್ನು ಬಂಧಿಸಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಶಿವಮೊಗ್ಗದ ಘಟನೆಗೆ ಕಾರಣ ಏನು ಎಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ.  ಏನಾಗಿದೆ ಎಂದು ನಮಗೆ ಗೊತ್ತಿದೆ. ಹೇಳಿಕೆ ಕೊಡುವವರು ಕೊಡುತ್ತಾರೆ. ನಾವು ಮೊದಲೇ ಕಟ್ಟೆಚ್ಚರ ವಹಿಸಿದ್ದೆವು’ ಎಂದರು.

‘ಮೆರವಣಿಗೆಯ ವೇಳೆಯಲ್ಲಿ ಕಲ್ಲು ತೂರಾಟ ಮಾಡಿದರು ಎಂಬ ಮಾಹಿತಿ ಇದೆ, ಕತ್ತಿ ಬಳಕೆ ಮಾಡಿರುವ ಬಗ್ಗೆ ಎಂಬ ಮಾಹಿತಿ ಇಲ್ಲ. ಶಿವಮೊಗ್ಗ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ’ ಎಂದೂ ಹೇಳಿದರು.

‘ಬ್ಯಾನರ್ ಕಟ್ತಾರೆ, ಪೋಸ್ಟರ್ ಹಾಕ್ತಾರೆ. ಇದೆಲ್ಲ ಏನ್ ಹೊಸದಾಗಿ ಮಾಡ್ತಾರಾ? ಇದನ್ನು ಕೆಲವರು ಅಡ್ವಾನ್ಟೇಜ್ ಆಗಿ ತಗೋತಾರೆ’ ಎಂದರು.

‘ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ಆಗಲು ಬಿಟ್ಟಿಲ್ಲ’ ಎಂದೂ ಹೇಳಿದರು.

ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ: ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ‘ಶಿವಮೊಗ್ಗದಲ್ಲಿ ಈದ್ ಮಿಲಾದ್, ಗಣೇಶ ವಿಸರ್ಜನೆ ಎರಡೂ ಒಟ್ಟಿಗೆ ಬಂದಿತ್ತು. ನಾವು ಎರಡೂ ಕಡೆಯ ಮುಖಂಡರ ಸಭೆ ಮಾಡಿದ್ದೆವು. ಈದ್ ಮಿಲಾದ್ ಮೆರವಣಿಗೆ ಅ. 1ರಂದು ಮಾಡುತ್ತೇವೆಂದು ಹೇಳಿದ್ದರು. ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. 12 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ’ ಎಂದರು.

‘ರಾಗಿಗುಡ್ಡದಲ್ಲಿ ಮಾತ್ರ ಗೊಂದಲ ಆಗಿದೆ. ಉಳಿದ ಕಡೆ ಯಾವುದೇ ಗಲಾಟೆ ಆಗಿಲ್ಲ. ಯಾವುದೋ ಸ್ವಾರ್ಥಕ್ಕೆ ಗಲಾಟೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದರು.

‘ಟಿಪ್ಪು ಫೋಟೊ ಇರುವುದೇ ಘಟನೆಗೆ ಮೂಲ ಕಾರಣವೆಂದು ಹೇಳಲಾಗುತ್ತಿದೆ. ಅದಕ್ಕೆಲ್ಲ ಈಗ ಉತ್ತರ ಕೊಡಲು ಹೋಗುವುದಿಲ್ಲ. ಸ್ಥಳೀಯ ಶಾಸಕರಿಗೆ ಎಲ್ಲ ಮಾಹಿತಿ ಬಂದುಬಿಡುತ್ತಾ? ಕಾರ್ ನಂಬರ್ ಬಗ್ಗೆ ಅವರು ಹೇಳುತ್ತಿದ್ದಾರೆ.ಅವರಿಗೆ ಈ ಹಿಂದೆ ಇದೆಲ್ಲ ಮಾಡಿ ಅನುಭವ ಇತ್ತಂತೆಯಾ? ಜವಾಬ್ದಾರಿ ಸ್ಥಾನದಲ್ಲಿ ಇರುವವರು ಹಾಗೆಲ್ಲ ಮಾತನಾಡಬಾರದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT