ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಹಿಂಸೆಗೆ ತಿರುಗಿದ ಈದ್ ಮಿಲಾದ್ ಮೆರವಣಿಗೆ, ವಾಹನಗಳ ಮೇಲೆ ಕಲ್ಲು ತೂರಾಟ

Published 1 ಅಕ್ಟೋಬರ್ 2023, 15:41 IST
Last Updated 1 ಅಕ್ಟೋಬರ್ 2023, 15:41 IST
ಅಕ್ಷರ ಗಾತ್ರ

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಇಲ್ಲಿನ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಭಾನುವಾರ ಕಟೌಟ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಿಂಸೆಗೆ ತಿರುಗಿದೆ.

ಈ ವೇಳೆ ಹಿಂದೂ ಸಮುದಾಯದ 6ಕ್ಕೂ ಹೆಚ್ಚು ಮನೆಗಳು ಹಾಗೂ ವಾಹನಗಳ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಮನೆಗಳ ಕಿಟಕಿ, ವಸ್ತುಗಳು ಹಾಗೂ ಮಾರುತಿ ಒಮ್ನಿ ಸೇರಿದಂತೆ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಶಾಂತಿನಗರ 9ನೇ ಕ್ರಾಸ್ ನಲ್ಲಿ ಪೊಲೀಸರ ಮೇಲೂ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎಎಫ್) ಕರೆಸಲಾಗಿದ್ದು, ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ರಾಗಿಗುಡ್ಡ ಪ್ರದೇಶದ ಎಲ್ಲ ವಾರ್ಡ್ ಗಳು ಹಾಗೂ ಶಾಂತಿನಗರ ಭಾಗದಲ್ಲಿ ಮುಂದಿನ ಆದೇಶದವರೆಗೂ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಈದ್ ಮಿಲಾದ್ ಹಿನ್ನೆಲೆಯಲ್ಲಿ ರಾಗಿಗುಡ್ಡದಲ್ಲಿ ಹಾಕಿದ್ದ ಕಟೌಟ್‌ನ ಕೆಲವು ಭಾಗಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ ಎಂದು ಆರೋಪಿಸಿ ಗುಂಪೊಂದು ಭಾನುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿತ್ತು. ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿ ಅಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಿದ್ದರು.

ಸಂಜೆ ರಾಗಿಗುಡ್ಡದ ಬಳಿ ಹಾದುಹೋದ ಈದ್ ಮಿಲಾದ್ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎಂಬ ಸುದ್ದಿ ಹರಡಿದ್ದು, ಇದರಿಂದ ಉದ್ವಿಗ್ನಗೊಂಡ ಗುಂಪೊಂದು ಈ ವೇಳೆ ಹಿಂಸಾಚಾರ ನಡೆಸಿ ಆಸ್ತಿಪಾಸ್ತಿ ನಷ್ಟ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದ ಗಾಂಧಿ ಬಜಾರ್ ಬಳಿ ಯುವಕರು ಮಾರಕಾಸ್ತ್ರ ಹಿಡಿದು ಸಾಗಿದರು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಪೊಲೀಸರು ಅದನ್ನು ಖಚಿತಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT