ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಅಧಃಪತನ: ಸಂಸದ ಬಿ.ವೈ. ರಾಘವೇಂದ್ರ

Published 1 ಅಕ್ಟೋಬರ್ 2023, 14:41 IST
Last Updated 1 ಅಕ್ಟೋಬರ್ 2023, 14:41 IST
ಅಕ್ಷರ ಗಾತ್ರ

ಆನಂದಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲೂ ಗೆಲ್ಲಲಿದೆ. ಗೆಲುವಿನ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಧಃಪತನ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇಲ್ಲಿ ಭಾನುವಾರ ನಡೆದ ಬೂತ್ ಸಶಕ್ತೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಅನೇಕ ಸವಾಲುಗಳು ಇರುವ ಸಂದರ್ಭದಲ್ಲಿ ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ವಿರೋಧಿ ಮತಗಳನ್ನು ಕ್ರೋಢಿಕರಿಸುವ ಉದ್ದೇಶದಿಂದ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಇದರಿಂದ ಮುಂಬರುವ ಲೋಕಸಭೆಸಭಾ ಚುನಾವಣೆಯಲ್ಲಿ ರಾಜ್ಯ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ಮುಖಂಡರು ಒಳಗೊಂದು ಹೊರಗೊಂದು ಮಾತನಾಡುತ್ತಿದ್ದಾರೆ. ನಾಲ್ಕು ಗೋಡೆಯ ಮಧ್ಯೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಂಸದರು ಹಾಗೂ ಕೇಂದ್ರ ಸಚಿವರನ್ನು ಪ್ರಶಂಸೆ ಮಾಡಿದ್ದಾರೆ. ಆದರೆ ಸಾರ್ವಜನಿಕರ ಎದುರು ಸಂಸದರನ್ನು ದೂರುತ್ತಿದ್ದಾರೆ. ಸಭೆಯಲ್ಲಿ ನಡೆದ ವಿಷಯವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

‘ಮಧುಮಗನಂತೆ ತಮಿಳುನಾಡು ಮುಖ್ಯಮಂತ್ರಿಯನ್ನು ಕರೆಸಿ ಸನ್ಮಾನ ಮಾಡಿದ್ದಾರೆ. ಇಂತಹ ಪರಿಸ್ಥಿಯಲ್ಲಿ ರಾಜಕಾರಣವನ್ನು ಬದಿಗಿಟ್ಟು, ರಾಜ್ಯದ ಜನರ ಹಿತದೃಷ್ಟಿಯಿಂದ ಕಾವೇರಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವ ದಕ್ಷತೆ ತೋರಿಸಬೇಕಿತ್ತು. ಅದನ್ನು ಬಿಟ್ಟು ವಿರೋಧಪಕ್ಷಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ದೂರಿದರು.

‘ಸರ್ಕಾರ ಅರಣ್ಯ ಇಲಾಖೆಯ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಹೊರಟಿದೆ. ₹ 5 ಲಕ್ಷದ ಪರಿಹಾರಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕೃಷಿ ಸಚಿವರ ಹೇಳಿಕೆ ಅವರ ಅಧಿಕಾರದ ದರ್ಪ ತೋರಿಸುತ್ತದೆ. 3,000 ಜನಸಂಖ್ಯೆಗೆ ಒಂದು ಮದ್ಯದಂಗಡಿ ತೆರೆಯುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಈ ಮೂಲಕ ಬಡವರಿಗೆ ಮದ್ಯ ಕುಡಿಸಿ ಹಾಳು ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

‘ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಔಷಧ ದಾಸ್ತಾನು ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯಲ್ಲಿ ಆಯುಷ್ಮಾನ್ ಕಾರ್ಡ್ ಮೂಲಕ 2.65 ಲಕ್ಷ ಜನ ಚಿಕಿತ್ಸೆ ಪಡೆದಿದ್ದಾರೆ. ಭಾಗ್ಯಲಕ್ಷಿ ಬಾಂಡ್ ಮಾಡಿದ ಮಕ್ಕಳ ತಾಯಂದಿರಿಗೆ ಜನವರಿಗೆ ₹ 1.25 ಲಕ್ಷ ಹಣ ಬರುತ್ತದೆ. ಇದರಿಂದ ಮಕ್ಕಳ ಮುಂದಿನ ವಿದ್ಯಭ್ಯಾಸಕ್ಕೆ ಅನುಕೂಲವಾಗುತ್ತದೆ. ಅನೇಕ ಪ್ರಗತಿಪರ ಯೋಜನೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿದೆ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ, ಲೋಕಸಭೆ, ವಿಧಾನಪರಿಷತ್, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು, ಗೆಲ್ಲುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ದೇಶ ವಿಶ್ವದ ಆರ್ಥಿಕತೆಯಲ್ಲಿ ಎರಡನೇ ಸ್ಥಾನ ತಲುಪಬೇಕಾದರೆ ಮೋದಿ ಅವರನ್ನು ಗೆಲ್ಲಿಸಬೇಕು’ ಎಂದು ಮಾಜಿ ಸಚಿವ ಎಚ್. ಹಾಲಪ್ಪ ಹರತಾಳು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಲೋಕನಾಥ್ ಬಿಳಿಸಿರಿ, ಶಾಂತಕುಮಾರ್, ರತ್ನಾಕರ ಹೊನಗೋಡು, ಪ್ರಮುಖರಾದ ಮಾಲತೇಶ್, ಮೋಹನ್ ಕುಮಾರ್, ಪ್ರಸನ್ನ ಕೆರೆಕೈ, ನಾಸಿರ್, ರೇಣುಕಮ್ಮ, ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT