ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ವಿಚಾರದಲ್ಲೂ ಸ್ಪಷ್ಟತೆ ಇಲ್ಲದ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಬಸವರಾಜ ಬೊಮ್ಮಾಯಿ
Last Updated 20 ಏಪ್ರಿಲ್ 2022, 5:17 IST
ಅಕ್ಷರ ಗಾತ್ರ

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದೊಂದು ದಿಕ್ಕಿಗೆ ಮುಖ ಮಾಡಿದ್ದಾರೆ. ಹಿಜಾಬ್‌ ಸೇರಿ ಯಾವ ವಿಚಾರದಲ್ಲೂ ಸ್ಪಷ್ಟತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಪಿಇಎಸ್‌ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಸ್ಪಷ್ಟ ನಿಲುವು ಇಲ್ಲ. ಸಿದ್ಧಾಂತವೂ ಇಲ್ಲ. ಕಾರ್ಯಕರ್ತರ ಪಡೆಯೂ ಕ್ಷೀಣಿಸಿದೆ. ಕೆ.ಜಿ.ಹಳ್ಳಿ, ಡಿ.ಜಿ. ಹಳ್ಳಿ ಪ್ರಕರಣದಲ್ಲಿ ಅವರದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಇಟ್ಟರೂ ಧ್ವನಿ ಎತ್ತಲಿಲ್ಲ. ಹಿಂದೂ ಕಾರ್ಯಕರ್ತರನ್ನು ಕೊಂದ ಆರೋಪಿಗಳ ಮೇಲಿನ ಪ್ರಕರಣ ವಾಪಸ್‌ ಪಡೆದದ್ದೇ ಅವರ ಸಾಧನೆ. ಇಂಥವರ ಕೈಗೆ ರಾಜ್ಯಕೊಟ್ಟರೆ ಏನಾಗುತ್ತದೆ’ ಎಂದು ಕುಟುಕಿದರು.

ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ರಾಜ್ಯ ಭ್ರಷ್ಟಾಚಾರದ ಕೂಪವಾಗಿತ್ತು. ಕುಡಿಯುವ ನೀರು, ಬಡವರ ಮನೆ ನಿರ್ಮಾಣ, ಪರಿಶಿಷ್ಟರ ಹಾಸ್ಟೆಲ್‌ಗಳ ದಿಂಬು, ಇಂದಿರಾ ಕ್ಯಾಂಟೀನ್ ಆಹಾರದಲ್ಲೂ ಭ್ರಷ್ಟಾಚಾರ ನಡೆಸಿದರು. ಜನರಿಗೆ ಅವರ ಒಂದು ‘ಭಾಗ್ಯವೂ ಸಿಗಲಿಲ್ಲ. ಇವರ ಆಡಳಿತ ದೌರ್ಬಲ್ಯ ಅರಿತ ಜನರೇ ಅವರನ್ನು ಮನೆಗೆ ಕಳುಹಿಸಿದರು.

ಯಡಿಯೂರಪ್ಪ ಅವರಿಗೆ ಹೊಗಳಿಕೆಯ ಸುರಿಮಳೆ:

ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರ ಶ್ರಮದ ಫಲವಾಗಿ ಕೋವಿಡ್ ಕಾಲದಲ್ಲಿ ಒಬ್ಬರೂ ಉಪವಾಸ ಬೀಳಲಿಲ್ಲ. ಯಡಿಯೂರಪ್ಪ ಅವರು 25 ವರ್ಷಗಳು ಹೋರಾಟ ಮಾಡಿದರು. ಸೈಕಲ್‌ ತುಳಿದು ಪಕ್ಷ ಕಟ್ಟಿದರು. ಅವರ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದೆ. ಜನರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಎಷ್ಟು ಬಾರಿ ರಾಜ್ಯಕ್ಕೆ ಬಂದರೆ ಸ್ವಾಗತಿಸೋಣ. ಏಕೆಂದರೆ ಅವರು ಎಲ್ಲಿ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್‌ ಸೋಲುತ್ತದೆ. ಬಿಜೆಪಿ ಗೆಲ್ಲುತ್ತದೆ. ಒಂದು ವರ್ಷ ಶ್ರಮಿಸದೇ ಕೆಲಸ ಮಾಡುವೆ. ಪಕ್ಷ ಪತ್ತೆ ಅಧಿಕಾರಕ್ಕೆ ತರುವೆ ಎಂದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ‘ರಾಜ್ಯದಲ್ಲೂ ಗುಜರಾತ್ ಮಾದರಿ ಆಡಳಿತ ಬರಬೇಕು. ನಿಗಮ ಮಂಡಳಿಗಳ ಸ್ಥಾನ ಪಕ್ಷದ ಕಾರ್ಯಕರ್ತರಿಗೆ ಮೀಸಲಿಡಬೇಕು. ಕಾರ್ಯಕರ್ತರ ಅಪೇಕ್ಷೆಯಂತೆ ಅಧಿಕಾರಿಗಳ ನಿಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು. ಸಾಧಕ ಬಾಧಕ ನೋಡಿಕೊಂಡು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಈ ಕುರಿತು ನಿರ್ಧರಿಸಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಇಂದು ಸಿಎಂ ಕಾರ್ಯಕ್ರಮ:

ಹೊಟೆಲ್ ಹರ್ಷದಲ್ಲಿ ಬುಧವಾರ ಬೆಳಿಗ್ಗೆ 10ಕ್ಕೆ ಹಮ್ಮಿಕೊಂಡಿರುವ ಬಿಜೆಪಿ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸುವರು. ರಾತ್ರಿ 8ಕ್ಕೆ ಶುಭಶ್ರಿ ಸಮುದಾಯ ಭವನದಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರನದಲ್ಲಿ ಭಾಗವಹಿಸುವರು. ರಾತ್ರಿ ವಾಸ್ತವ್ಯ ಹೂಡುವರು.

ಮುಖಂಡರಾದ ಸಚಿವ ಸದಾನಂದಗೌಡ, ಶಾಸಕ ಕುಮಾರ ಬಂಗಾರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ‌. ಮೇಘರಾಜ್, ಡಿ.ಎಸ್. ಅರುಣ್, ಪಾಲಿಕೆ ಆಯುಕ್ತೆ ಸುನಿತಾ ಅಣ್ಣಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT