ಕಾಲುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಎಚ್. ಹಾಲಪ್ಪ ಹರತಾಳು

ಸಾಗರ: ನಗರದ ಗಣಪತಿ ಕೆರೆಯ ಪಕ್ಕದಲ್ಲಿರುವ ಶಾಶ್ವತ ಧ್ವಜಸ್ತಂಭದ ಸುತ್ತಲೂ ನಗರಸಭೆಗೆ ಸೇರಿದ 5.20 ಎಕರೆ ಪ್ರದೇಶದಲ್ಲಿ ಗಾಜಿನಮನೆ ಉದ್ಯಾನ ನಿರ್ಮಿಸಲಾಗುವುದು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಗಣಪತಿ ಕೆರೆ ಪಕ್ಕದಲ್ಲಿರುವ ಶಾಶ್ವತ ಧ್ವಜಸ್ತಂಭದ ಬಳಿ ₹. 1.45 ಕೋಟಿ ವೆಚ್ಚದಲ್ಲಿ ಕೆರೆಗೆ ನೀರೊದಗಿಸುವ ಕಾಲುವೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಾಶ್ವತ ಧ್ವಜಸ್ತಂಭವಿರುವ ಪ್ರದೇಶವನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ರೂಪಿಸಲಾಗುವುದು. ಗಣಪತಿ ಕೆರೆ ಮೇಲ್ಭಾಗದಿಂದ ಬರುವ ಕೊಳಚೆ ನೀರು ಕೆರೆಗೆ ಸೇರಬಾರದು ಎನ್ನುವ ಕಾರಣಕ್ಕೆ ಕೆರೆಯ ಸುತ್ತಲೂ ಚರಂಡಿ ನಿರ್ಮಿಸಲಾಗುತ್ತಿದೆ. ಜ.26ರೊಳಗೆ ಚರಂಡಿ ಕಾಮಗಾರಿ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜ. 26ರಂದು ಕೆರೆ ಹಬ್ಬದ ಜೊತೆಗೆ ಗಣರಾಜ್ಯೋತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಬಿ.ಎಚ್. ರಸ್ತೆ ವಿಸ್ತರಣೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಗಣಪತಿ ಕೆರೆ ಮೇಲ್ಭಾಗದ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿಕೊಡಲಿದೆ. ಕೆರೆಯ ಅಸ್ತಿತ್ವಕ್ಕೆ ಧಕ್ಕೆ ಬರದ ರೀತಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಾಮ್, ಸದಸ್ಯರಾದ ಟಿ.ಡಿ. ಮೇಘರಾಜ್, ಲಿಂಗರಾಜ್ ಬಿ.ಎಚ್. ಶ್ರೀನಿವಾಸ್ ಮೇಸ್ತ್ರಿ, ಶ್ರೀರಾಮ್, ಪೌರಾಯುಕ್ತ ರಾಜು ಡಿ. ಬಣಕಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಕೆ. ನಾಗಪ್ಪ, ಎಂಜಿನಿಯರ್ ರಾಜೇಶ್, ವಿಠ್ಠಲ್ ಹೆಗಡೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.