ಗುರುವಾರ , ಜೂಲೈ 9, 2020
23 °C
ತಮಿಳುನಾಡಿನಿಂದ ಮಾಹಿತಿ ನೀಡದೇ ಬಂದಿದ್ದವರಿಗೆ ಕೊರೊನಾ, 30ಕ್ಕೇರಿದ ಕೋವಿಡ್‌ ಪೀಡಿತರು

ಐವರಿಗೆ ಸೋಂಕು: ಮೇಲಿನ ತುಂಗಾ ನಗರ ಸೀಲ್‌ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 6 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಒಟ್ಟು ಸಂಖ್ಯೆ 30ಕ್ಕೇರಿದೆ.

ಸೋಂಕಿತರಲ್ಲಿ ಐವರು ಮೂರು ದಿನಗಳ ಹಿಂದೆ ತಮಿಳುನಾಡಿನಿಂದ ನೇರವಾಗಿ ಮೇಲಿನ ತುಂಗಾನಗರದ ತಮ್ಮ ಮನೆಗೆ ಬಂದಿದ್ದರು. ಆರೋಗ್ಯ ಕಾರ್ಯಕರ್ತರ ಮಾಹಿತಿ ಆಧರಿಸಿ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಸೋಂಕು ಇರುವುದು ದೃಢಪಡುತ್ತಿದ್ದಂತೆ ತುಂಗಾ ನಗರದ ಸೋಂಕಿತರ ಮನೆಯ ಸುತ್ತಲ 100 ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಶಿವಮೊಗ್ಗ ನಗರದ ಬಡಾವಣೆ ಸೀಲ್‌ಡೌನ್ ಆಗುತ್ತಿರುವುದು ಇದೇ ಮೊದಲು.

ತಮಿಳುನಾಡಿನಿಂದ ಬಂದ ಸೋಂಕಿತರಲ್ಲಿ 21 ವರ್ಷದ ಮಹಿಳೆ (ಪಿ–1499), 3 ವರ್ಷದ ಗಂಡು ಮಗು (ಪಿ–1,500), 3 ವರ್ಷದ ಹೆಣ್ಣು ಮಗು (ಪಿ–1501), 56 ವರ್ಷದ ಪುರುಷ  (ಪಿ–1502) ಹಾಗೂ 52 ವರ್ಷದ ಪುರುಷರು  (ಪಿ–1503) ಇದ್ದಾರೆ. ಅತ್ಯಂತ ಚಿಕ್ಕ ಮಕ್ಕಗಳಿಗೆ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿರುವುದು ಪೋಷಕರಲ್ಲೂ ಆತಂಕ ಮೂಡಿಸಿದೆ.

ಮಾಹಿತಿ ನೀಡದೇ ಬಂದಿದ್ದರು: ತಮಿಳುನಾಡಿನಲ್ಲಿ ಕೆಲಸ ಅರಸಿ ಹೋಗಿದ್ದ ಈ ಕುಟುಂಬಗಳು ಹೊರ ರಾಜ್ಯದಿಂದ ಬಂದ ಮಾಹಿತಿ ನೀಡಿರಲಿಲ್ಲ. ನೇರವಾಗಿ ಮನೆಗೆ ಹೋಗಿದ್ದರು. ಎರಡು ದಿನ ಅರಾಮಾಗಿ ಮನೆಯ ಸುತ್ತಮುತ್ತ ತಿರುಗಾಡುತ್ತಾ ಕಾಲ ಕಳೆದಿದ್ದಾರೆ. ನೆರೆಹೊರೆಯವರು ನೀಡಿದ ಮಾಹಿತಿ ಆಧಾರದ ಮೇಲೆ ಆರೋಗ್ಯ ಕಾರ್ಯಕರ್ತರು ಅವರನ್ನು ಕ್ವಾರಂಟೈನ್‌ ಮಾಡಿದ್ದರು. ಗಂಟಲು ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳಹಿಸಿದ್ದರು. ಫಲಿತಾಂಶ ಹೊರಬರುತ್ತಿದ್ದಂತೆ ಇಡೀ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ. 

ತುಂಗಾನಗರ ಸೀಲ್‌ಡೌನ್: ಐವರಿಗೆ ಕೊರೊನಾ ಪಾಸಿಟಿವ್ ಇರುವುದು ಖಚಿತವಾದ ತಕ್ಷಣ ಪೊಲೀಸರು ತುಂಗಾ ನಗರವನ್ನು ಸೀಲ್‌ಡೌನ್ ಮಾಡಿದರು. ರಸ್ತೆಗಳಿಗೆ ಬ್ಯಾರಿಕೇಡ್‌ ಅಳವಡಿಸಿದರು. ಆ ಮೂಲಕ ತುಂಗಾನಗರ ಶಿವಮೊಗ್ಗದ ಮೊದಲ ಕಾಂಟೋನ್ಮೆಂಟ್ ಝೋನ್ ಆಗಿ ಪರಿವರ್ತಿತವಾಯಿತು. ಸುತ್ತಮುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡುಬಿಟ್ಟಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವೀಕ್ಷಣೆ: ತುಂಗಾನಗರ ಪ್ರದೇಶಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನರಲ್ಲಿ ಧೈರ್ಯ ತುಂಬಿದರು. ಅನವಶ್ಯಕವಾಗಿ ತರುಗಾಟ ನಡೆಸದಂತೆ ಸೂಚಿಸಿದರು. ಕಂದಾಯ ಇಲಾಖೆ ನೌಕರರು, ಪೊಲೀಸ್‌ ಅಧಿಕಾರಿಗಳ ಜತೆ ಚರ್ಚಿಸಿದರು. ಮುಂದಿನ ಕ್ರಮಗಳ ಕುರಿತು ಸಲಹೆ ನೀಡಿದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು