ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಬಸ್‌ ಮೂಲಕ ಮಲೆನಾಡಿಗೆ ಬಂತು ಕೊರೊನಾ

ಹಸಿರು ವಲಯದ ಜಿಲ್ಲೆಗೆ ಅಘಾತ, ಶಿವಮೊಗ್ಗಕ್ಕೆ ಅಹಮದಾಬಾದ್ ಬಳುವಳಿ
Last Updated 10 ಮೇ 2020, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಜಮಾನದಿಂದಲೂ ನಮ್ಮದು‘ಗ್ರೀನ್‌ಜೋನ್’ ಎಂದು ಬೀಗುತ್ತಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಕೊನೆಗೂಕೊರೊನಾ ವೈರಸ್‌ ಪ್ರವೇಶ ಪಡೆದಿದೆ. ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಅಳಿಸಿಹಾಕಿದೆ.

ಗುಜರಾತ್‌ನ ಅಹಮದಾಬಾದ್‌ನಿಂದ ಶನಿವಾರ ಖಾಸಗಿ ಬಸ್‌ನಲ್ಲಿ ಬಂದ 9 ಜನರನ್ನು ಮಡಕೆ ಚೀಲೂರಿನ ಜಿಲ್ಲಾ ಗಡಿಯಲ್ಲೇ ತಡೆದ ಪೊಲೀಸರು ಅವರನ್ನು ನೇರವಾಗಿ ಸಹ್ಯಾದ್ರಿ ಕಾಲೇಜಿನ ತಪಾಸಣಾ ಕೇಂದ್ರಕ್ಕೆ ಕರೆ ತಂದಿದ್ದರು. ನಂತರ ಅವರನ್ನು ಮಲ್ಲಿಗೇನಹಳ್ಳಿ ಬಳಿಯ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಭಾನುವಾರ ಬೆಳಿಗ್ಗೆ ಅವರಲ್ಲಿ 8 ಜನರಿಗೆ ಪಾಸಿಟಿವ್ ಇರುವುದು ಖಚಿತವಾಗುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾ ಕೇಂದ್ರದ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಮೂರು ದಿನಗಳ ಪ್ರಯಾಣ:ಗುರುವಾರ ರಾತ್ರಿ ಅಹಮದಾಬಾದ್‌ನಿಂದ 40ಕ್ಕೂ ಹೆಚ್ಚು ಜನರು ಖಾಸಗಿ ಬಸ್‌ನಲ್ಲಿ ಹೊರಟಿದ್ದಾರೆ. ಕೆಲವರು ಬೇರೆ ಬೇರೆ ಭಾಗಗಳಿಗೆ ತೆರಳಿದರೆ, ಜಿಲ್ಲೆಯ 9 ಜನರು ಮಹಾರಾಷ್ಟ್ರದ ಮೂಲಕ ರಾಜ್ಯ ತಲುಪಿದ್ದಾರೆ. ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಹರಿಹರ, ಹೊನ್ನಾಳಿ ಮಾರ್ಗವಾಗಿ ಶನಿವಾರ ಬೆಳಗಿನ ಜಾವಶಿವಮೊಗ್ಗ ಪ್ರವೇಶ ಪಡೆದಿದ್ದಾರೆ. ದಾರಿಯಲ್ಲಿ ಮೂರು ದಿನವೂ ಸ್ನಾನ ಮಾಡದೇ, ಸರಿಯಾಗಿ ಊಟವಿಲ್ಲದೆ ಪ್ರಯಾಣ ಮಾಡಿರುವುದಾಗಿ ತಪಾಸಣಾಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ.

ಖಚಿತಗೊಳ್ಳದ ತಬ್ಲಿಗಿ ನಂಟು:ಅಹಮದಾಬಾದ್‌ಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದಾಗಿ ಅವರು ಹೇಳಿಕೊಂಡರೂ, ತಬ್ಲಿಗಿ ಸಮಾವೇಶದಲ್ಲಿ ಭಾಗವಹಿಸಿದ ಮಾಹಿತಿ ಲಭ್ಯವಾಗಿಲ್ಲ. ಸಮಾವೇಶ ಮುಗಿದು ಈಗಾಗಲೇಎರಡುತಿಂಗಳಾಗುತ್ತಾ ಬಂದಿದೆ. ಹಾಗಾಗಿ, ಸಮಾವೇಶದಿಂದ ವೈರಸ್‌ ತಗುಲಿರುವ ಸಾಧ್ಯತೆ ಕಡಿಮೆ. ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪ್ರತಿಕ್ರಿಯಿಸಿದರು.

ದಾರಿಯುದ್ದಕ್ಕೂ ಅಂಗಡಿ, ಹೋಟೆಲ್‌ ಭೇಟಿ:ಅಹಮದಾಬಾದ್‌ನಿಂದ ಶಿವಮೊಗ್ಗದವರೆಗೂ ಪ್ರಯಾಣದ ಸಮಯದಲ್ಲಿ ಹೆದ್ದಾರಿಯ ಹಲವು ಅಂಗಡಿಗಳಲ್ಲಿ ತಿಂಡಿ, ಊಟ ಪಾರ್ಸಲ್ ಪಡೆದಿದ್ದಾರೆ. ಚಹಾ ಸೇವನೆ ಮಾಡಿದ್ದಾರೆ. ಎಲೆ, ಅಡಿಕೆ ಮತ್ತಿತರ ಪದಾರ್ಥ ಖರೀದಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪಯಣಿಸುವಾಗ ಬಿಸಿಲಿನ ತಾಪ ತಾಳದೇ ಪದೇ ಪದೇ ಬಸ್‌ ನಿಲ್ಲಿಸಿ, ನೆರಳಿನ ಆಶ್ರಯ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲೂ ಕೆಲ ಸಮಯ ನಿಲುಗಡೆ ಮಾಡಿದ್ದಾರೆ. ಈ ವೇಳೆ ಯಾರು, ಯಾರು ಅವರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಇಲ್ಲ.

ಹಾಸ್ಟೆಲ್‌, ವಾಹನಗಳ ಸ್ವಚ್ಛತೆ:ಅವರನ್ನು ಕ್ವಾರಂಟೈನ್‌ ಮಾಡಿದ್ದ ಹಾಸ್ಟೆಲ್‌, ಅಲ್ಲಿಗೆ ಕರೆದುಕೊಂಡು ಹೋಗಿದ್ದ, ಅಲ್ಲಿಂದ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ಕರೆತಂದ ವಾಹನಗಳನ್ನು ಔಷಧ ಸಿಂಪಡಿಸಿ, ಶುಚಿಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT