ಮಂಗಳವಾರ, ಜೂನ್ 28, 2022
26 °C
ಮೆಗ್ಗಾನ್ ಆಸ್ಪತ್ರೆ ಒಂದರಲ್ಲೇ ಪ್ರತಿ ನಿತ್ಯ 5 ಕ್ವಿಂಟಲ್‌ ತ್ಯಾಜ್ಯ ಸಂಗ್ರಹ

ಶಿವಮೊಗ್ಗ: ಕೋವಿಡ್‌ ಕಸ ವಿಲೇವಾರಿಗೆ ಸಾಹಸ

ಗಣೇಶ್ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆ, ಪರೀಕ್ಷೆ, ಲಸಿಕೆ ನೀಡುವ ಒತ್ತಡದ ಮಧ್ಯೆ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ, ವಿಲೇವಾರಿಯೂ ಬಹುದೊಡ್ಡ ಸವಾಲಾಗಿದೆ.

ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ವಿಷಯದಲ್ಲಿ ಸರ್ಕಾರ ಚೂರು ಎಡವಿದರೂ ಅನಾಹುತ ಕಟ್ಟಿಟ್ಟಬುತ್ತಿ. ಸೋಂಕಿತರ ಚಿಕಿತ್ಸೆಗೆ ನೀಡಿದಷ್ಟೇ ಮಹತ್ವ ತ್ಯಾಜ್ಯದ ನಿರ್ವಹಣೆಗೂ ನೀಡಬೇಕಿದೆ. ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಸೇರಿದಂತೆ ಕೊರೊನಾ ಕೇಂದ್ರಗಳಲ್ಲಿನ ತ್ಯಾಜ್ಯವನ್ನು ಮೆಗ್ಗಾನ್ ಆಸ್ಪತ್ರೆಯ ಮೂಲಕ ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದರ ಜವಾಬ್ದಾರಿ ಶುಶ್ರೂಷಕ ಅಧಿಕಾರಿಗಳಿಗೆ ನೀಡಲಾಗಿದೆ. ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ತಾಲ್ಲೂಕು ಮಟ್ಟದಲ್ಲಿಯೂ ಕೋವಿಡ್‌ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ರೂಪಿಸಲಾಗಿದೆ. ಆಸ್ಪತ್ರೆಗಳು, ಕೊರೊನಾ ಕೇಂದ್ರಗಳನ್ನು ಹೊರತುಪಡಿಸಿ ನಗರದ ಕಂಟೈನ್‌ಮೆಂಟ್ ವಲಯದಲ್ಲಿ ಉತ್ಪತ್ತಿಯಾಗುತ್ತಿರುವ ಕೊರೊನಾ ತ್ಯಾಜ್ಯವನ್ನು ನಗರ ಪಾಲಿಕೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಸೋಂಕಿನಿಂದ ರಕ್ಷಣೆಗೆ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರು, ವಿವಿಧ ಇಲಾಖೆಯ ಸಿಬ್ಬಂದಿ ಬಳಸುತ್ತಿರುವ ಪಿಪಿಇ ಕಿಟ್‌, ಮಾಸ್ಕ್‌ ಜಾಗೃತಿ ಇಲ್ಲದಿರುವುದು ಪಾಲಿಕೆ ಅಧಿಕಾರಿಗಳಿಗೆ ತಲೆನೋವು ತಂದಿದೆ.

ಕೋವಿಡ್‌ ತ್ಯಾಜ್ಯ ವಿಲೇವಾರಿ ಮೇಲುಸ್ತುವಾರಿಗಳ ಮಾಹಿತಿ ಪ್ರಕಾರ ಮೆಗ್ಗಾನ್ ಅಸ್ಪತ್ರೆಯೊಂದರಲ್ಲೇ ಮೇ ತಿಂಗಳಲ್ಲಿ 15 ಟನ್‌ ತ್ಯಾಜ್ಯ ಸಂಗ್ರಹವಾಗಿದೆ. ಪ್ರತಿ ನಿತ್ಯ 450ರಿಂದ 500 ಕೆ.ಜಿ.ಯಷ್ಟು ಉತ್ಪತ್ತಿಯಾಗುತ್ತಿದೆ. ಶಿವಮೊಗ್ಗದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಮಾಚೇನಹಳ್ಳಿ ಬಳಿ ಇರುವ ‘ಶುಶ್ರುತಾ’ ಕೇಂದ್ರದಲ್ಲಿ ನೀಡಲಾಗುತ್ತಿದೆ. ಇಲ್ಲಿಯೇ ಕೊರೊನಾ ಪರೀಕ್ಷೆ, ಚಿಕಿತ್ಸೆ ಸಮಯದಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ಮತ್ತೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ವಿಲೇವಾರಿ ಹೇಗೆ?:

ಕೊರೊನಾಗೆ ಚಿಕಿತ್ಸೆ ನೀಡುವ ಸಮಯದಲ್ಲಿ ಸಂಗ್ರಹವಾಗುವ ತ್ಯಾಜ್ಯ ಮತ್ತು ಸುರಕ್ಷತೆಗಾಗಿ ಬಳಸುವ ಪರಿಕರ, ಸೋಂಕಿತರ ಬಟ್ಟೆ, ಟಿಶ್ಯೂ, ಬಳಸಿದ ವಸ್ತುಗಳು ಸೇರಿ ಇತರೆ ಕೋವಿಡ್‌ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪ್ರತ್ಯೇಕ ವಾಹನದ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಅವರ ಸುರಕ್ಷತೆಗೂ ಗಮನ ನೀಡಲಾಗಿದೆ. ತ್ಯಾಜ್ಯದಲ್ಲಿರುವ ಬಳಸಿದ ಹತ್ತಿ, ಡ್ರೆಸ್ಸಿಂಗ್‌ ಬಟ್ಟೆಗಳು, ಮಾಸ್ಕ್‌, ಸ್ವಾಬ್‌ ಸ್ಟಿಕ್‌, ಮಾತ್ರೆ, ಮಲಿನಗೊಂಡ ಹಾಸಿಗೆ, ಹೊದಿಕೆ, ಬಳಸಿದ ಔಷಧ ಬಾಟಲಿ ಇತ್ಯಾದಿಗಳನ್ನು ಹಳದಿ ಬಣ್ಣದ ಕವರ್‌ನಲ್ಲಿ, ಫೇಸ್‌ ಶೀಲ್ಡ್‌, ಏಪ್ರನ್‌, ಪ್ಲಾಸ್ಟಿಕ್‌ ಪ್ಲೇಟ್‌, ಕನ್ನಡಕ, ಯೂರಿನ್‌ ಬ್ಯಾಗ್‌, ಗ್ಲೌಸ್‌ಗಳನ್ನು ಕೆಂಪು ಬಣ್ಣದ ಕವರ್‌ನಲ್ಲಿ, ಸಿರಿಂಜ್‌, ಸೂಜಿ, ಬ್ಲೇಡ್‌ಗಳನ್ನು, ಗಾಜಿನ ಕಸ, ಸಿರಿಂಜ್‌ ಇತ್ಯಾದಿಗಳನ್ನು ಬಿಳಿ ಬಣ್ಣದ ಕವರ್‌ನಲ್ಲಿ ಹಾಕಿ ವಿಲೇವಾರಿ ಮಾಡಲಾಗುತ್ತಿದೆ.

ಸೋಂಕು ಹರಡುವಿಕೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಕೋವಿಡ್‌ ಚಿಕಿತ್ಸೆಯ ಸಮಯದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯದ ಪ್ರಮಾಣವೂ ಅಧಿಕವಾಗಿದೆ. ಆಸ್ಪತ್ರೆಗಳಲ್ಲಿ ಬೇರೆಲ್ಲಾ ರೋಗಗಳಿಗೆ ಹೋಲಿಸಿದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಕೆಲವೊಮ್ಮೆ 15 ಪಟ್ಟು ಹೆಚ್ಚು ಎನ್ನುತ್ತಿದ್ದಾರೆ ತ್ಯಾಜ್ಯ ವಿಲೇವಾರಿ ಮೇಲ್ವಿಚಾರಕರು.

***

ಕೋವಿಡ್‌ ತ್ಯಾಜ್ಯ ಎಸೆದರೆ ಅಪಾಯ

ಅಧ್ಯಯನದ ಪ್ರಕಾರ ಕೋವಿಡ್‌–19 ವೈರಾಣು ಪ್ಲಾಸ್ಟಿಕ್‌ ಕವರ್‌ಗಳಲ್ಲಿ 24 ಗಂಟೆ ಜೀವಂತವಾಗಿ ಇರಬಲ್ಲದು. ಸೋಂಕಿತರ ತ್ಯಾಜ್ಯದ ವಿಲೇವಾರಿ ಮಾಡುವಾಗ ಅತಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಸೋಂಕಿನ ಶಂಕಿತರು ತಾವು ಬಳಸಿದ ವಸ್ತುಗಳನ್ನು ಬಿಸಾಕುವುದಿದ್ದರೆ, ಅದನ್ನು ಒಂದೆರಡು ದಿನ ಮನೆಯಲ್ಲಿಯೇ ಸುರಕ್ಷಿತವಾಗಿ ಸಂಗ್ರಹಿಸಿಟ್ಟು ನಂತರ ವಿಲೇವಾರಿ ಮಾಡುವುದು ಉತ್ತಮ. ಇಲ್ಲದಿದ್ದರೆ, ಇದನ್ನು ಸಂಗ್ರಹಿಸುವ ಪೌರಕಾರ್ಮಿಕರು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ವಾರ್ಡ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಇದರ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಕೆಲವೊಮ್ಮೆ ಹಳದಿ ಬಣ್ಣದ ಕವರ್‌ಗೆ ಹಾಕುವ ತ್ಯಾಜ್ಯವನ್ನು ಕೆಂಪು ಬಣ್ಣದ ಕವರ್‌ಗೆ ಹಾಕುತ್ತಿದ್ದಾರೆ. ಹೀಗೆ ಮಾಡಿದಾಗ ನಾವು ಅದನ್ನು ವಿಂಗಡಿಸದೇ ಇದ್ದರೆ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ತ್ಯಾಜ್ಯ ವಿಂಗಡನೆ ದೊಡ್ಡ ಸಮಸ್ಯೆ. ಸೋಂಕಿತರು ಬಳಸಿದ ಯಾವುದೇ ವಸ್ತುಗಳನ್ನು ಬೇರೆ ತ್ಯಾಜ್ಯಗಳೊಂದಿಗೆ ಸೇರಿಸಬಾರದು. ಇದರ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿರುತ್ತದೆ. ಇದಕ್ಕಾಗಿ ‌ಸಹಾಯವಾಣಿ ಸಂಖ್ಯೆಗೆ ಕರೆ (08182–269523) ಮಾಡಬಹುದು ಎನ್ನುತ್ತಾರೆ ಮೆಗ್ಗಾನ್ ಆಸ್ಪತ್ರೆ ಕೊರೊನಾ ತ್ಯಾಜ್ಯ ಮೇಲುಸ್ತುವಾರಿ ಚಂದ್ರಿಕಾ.

***

ಕೈಗೂಡದ ಸಮರ್ಪಕ ಕಸ ವಿಲೇವಾರಿ

ಶಿವಮೊಗ್ಗ ನಗರ ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿಯಾಗುತ್ತಿದ್ದರೂ ಕಸ ವಿಲೇವಾರಿ ಸಮಸ್ಯೆ‌ಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ನಗರದ ವ್ಯಾಪ್ತಿಯಲ್ಲಿ ನಿತ್ಯ 160 ಟನ್‌ನಷ್ಟು ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ವಿಲೇವಾರಿ ಮಾಡಲು ಬೇಕಾಗುವ ವಾಹನ ಸೌಲಭ್ಯವನ್ನು ಮಹಾನಗರ ಪಾಲಿಕೆ ಮಾಡಿದೆ, ಇದಕ್ಕಾಗಿ ಲಕ್ಷಾಂತರ ರೂಪಾಯಿಯ ಖರ್ಚು ಮಾಡುತ್ತಿದೆ. ಆದರೆ, ಸರಿಯಾಗಿ ಕಸ ವಿಲೇವಾರಿ ಮಾಡುವಲ್ಲಿ ಪಾಲಿಕೆ ವಿಫಲವಾಗಿದೆ.

ಸಿಬ್ಬಂದಿ ಸಮಸ್ಯೆ: ನಗರ ಪಾಲಿಕೆ ಸಿಬ್ಬಂದಿ ಮನೆ, ಮನೆಗೆ ತೆರಳಿ ಕಸ ಪಡೆಯಲಾಗುತ್ತಿದೆ. ವಾಣಿಜ್ಯ ಕಟ್ಟಡಗಳ ತ್ಯಾಜ್ಯವನ್ನು ಪಾಲಿಕೆಯಿಂದಲೇ ಪಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದರೂ, ಸರಿಯಾದ ರೀತಿಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ನಿತ್ಯ ಮನೆ ಕಸ ಹಾಗೂ ವಾಣಿಜ್ಯ ಕಟ್ಟಡಗಳ ತ್ಯಾಜ್ಯವನ್ನು ಸಂಗ್ರಹಿಸಲು ಕಸದ ವಾಹನಗಳು ಸರಿಯದ ಸಮಯಕ್ಕೆ ಬಾರದ ಕಾರಣ. ಜನರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಇದರಿಂದ ನಗರದ ಬಹುತೇಕ ರಸ್ತೆಗಳ ಬದಿ ಕಸದ ರಾಶಿ ಬೀಳುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ:

‘ಕಸ ವಿಲೇವಾರಿ ಮಾಡಲು ಪಾಲಿಕೆಯಲ್ಲಿ ಸಾಕಷ್ಟು ವಾಹನಗಳ ಸೌಲಭ್ಯವಿದೆ. ಸಿಬ್ಬಂದಿಯೂ ಇದ್ದಾರೆ. ಇದಕ್ಕಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದರೆ. ವಿಲೇವಾರಿ ಸಮಸ್ಯೆಯಿಂದ ಬೀದಿಬದಿಯಲ್ಲಿ ಕಸ ಬೀಳುತ್ತಿದೆ. ಇದು ಹೀಗೆ ಮುಂದುವರಿದರೆ ನಗರದ ಜನತೆ ಕೊರೊನಾ ಜತೆ ಸಾಂಕ್ರಾಮಿಕ ರೋಗವನ್ನು ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್.

‘ನಗರದ ಜನಸಂಖ್ಯೆಗೆ ಅನುಸಾರವಾಗಿ ತ್ಯಾಜ್ಯ ವಿಲೇವಾರಿಗೆ 520 ಪೌರಕಾರ್ಮಿಕರನ್ನು  ನಗರ ಪಾಲಿಕೆ ನೇಮಕ ಮಾಡಿಕೊಂಡಿದೆ. ಸದ್ಯ 400 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 120 ಹುದ್ದೆ ಖಾಲಿ ಇವೆ. ಕೋವಿಡ್‌ ಸಮಯದಲ್ಲಿ  ಬೆಳಿಗ್ಗೆ 6ರಿಂದ 11ರವರೆಗೆ ಕಸ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಕಸ ವಿಲೇವಾರಿಯಲ್ಲಿ ಸಮಸ್ಯೆಯಾಗಿದೆ’ ಎಂದು ಪ್ರತಿಕ್ರಿಯಿಸಿದರು ಪಾಲಿಕೆ ಪರಿಸರ ವಿಭಾಗದ ಎಂಜಿನಿಯರ್ ಅಮೋಘ್‌ ಎಸ್.ಕವಲಗಿ.

ಕೋವಿಡ್ ಕೇಂದ್ರದಲ್ಲಿ ತ್ಯಾಜ್ಯವೇ ಸಮಸ್ಯೆ

ಜಿಲ್ಲಾಡಳಿತದಿಂದ ಸ್ಥಾಪಿತ ಕೋವಿಡ್ ಕೇರ್ ಸೆಂಟರ್‌ಗಳು ಅವ್ಯವಸ್ಥೆಯ ಆಗರವಾಗಿವೆ. ನಗರದ ಮಲ್ಲಿಗೆಹಳ್ಳಿಯ ದೇವರಾಜ ಅರಸ್ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಹಾಗೂ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇವು ಅವ್ಯವಸ್ಥೆಯ ಆಗರವಾಗಿವೆ. ಕೋವಿಡ್ ಕೇಂದ್ರದ ಮುಂದೆ ರಾಶಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸೋಂಕಿತರು ಆಹಾರ ಸೇವಿಸಿದ ನಂತರ ಹಾಕಿರುವ ಅಳಿದುಳಿದ ಆಹಾರ ಪದಾರ್ಥಗಳನ್ನು ನಾಯಿಗಳು, ದನಕರುಗಳು ತಿನ್ನುತ್ತಿವೆ ಎಂದು ಸೋಂಕಿತರೊಬ್ಬರು ಆರೋಪಿಸಿದರು.

***

ರಸ್ತೆ ಬದಿ ಎಸೆದ ಬಳಸಿದ ಮಾಸ್ಕ್‌ಗಳು!

ರಾಘವೇಂದ್ರ ಟಿ.

ಸೊರಬ: ಪುರಸಭೆ ವ್ಯಾಪ್ತಿಯ 12 ವಾರ್ಡ್‌ಗಳಲ್ಲಿ ಕೆಲವು ವಾರ್ಡ್‌ಗಳಲ್ಲಿ ಮಾತ್ರ ಕಸ ವಿಲೇವಾರಿ ಮಾಡಲಾಗುತ್ತಿದೆ. ಧರಿಸಿ ಬಿಸಾಡಿದ ಮಾಸ್ಕ್‌ಗಳನ್ನು ರಸ್ತೆಯುದ್ದಕ್ಕೂ ಎಸೆದಿರುತ್ತಾರೆ.

ಪಟ್ಟಣದ ಮುಖ್ಯ ರಸ್ತೆ, ಕೆಇಬಿ ಕಾಲೊನಿ, ಚಾಮರಾಜಪೇಟೆ, ಚಿಕ್ಕಪೇಟೆ, ಮಾರ್ಕೆಟ್ ರಸ್ತೆ,
ರಾಘವೇಂದ್ರ ಬಡವಾಣೆ ಹೊರತುಪಡಿಸಿ ಇನ್ನುಳಿದ ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಕಾನಕೇರಿ ಬಡಾವಣೆಯ ಬಹುತೇಕ ಭಾಗದ ರಸ್ತೆ ಇಕ್ಕೆಲಗಳಲ್ಲಿ ಬೆಳೆದಿರುವ ಪೊದೆ ಹಾಗೂ ಚರಂಡಿ ಸ್ವಚ್ಛಗೊಳಿಸಿಲ್ಲ. ಸ್ನಾನ, ಪಾತ್ರೆ ತೊಳೆದ ನೀರು ಚರಂಡಿಯಲ್ಲಿ ತಿಂಗಳುಗಟ್ಟಲೆ ನಿಂತು ವಾಸನೆ ರಾಚುತ್ತಿದ್ದರೂ ಕೆಸರನ್ನು ಚರಂಡಿಯಿಂದ ಮೇಲೆತ್ತಿ ವಿಲೇವಾರಿ ಮಾಡುತ್ತಿಲ್ಲ ಎಂದು ಕಾನಕೇರಿ ಬಡವಾಣೆಯ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪಟ್ಟಣದಲ್ಲಿ 12 ಸಾವಿರಕ್ಕಿಂತ ಹೆಚ್ಚು ಜನ ವಾಸವಾಗಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಪರಿಸರವೂ ಮಲಿನಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಪುರಸಭೆ ಆಡಳಿತ ಯೋಜನೆ ಸಿದ್ಧಪಡಿಸಿಕೊಂಡು ಸಮರ್ಪಕ ಕಸ ವಿಲೇವಾರಿ ಮಾಡುವಲ್ಲಿ ವಿಫಲಗೊಂಡಿದೆ. ಕಸ ವಿಲೇವಾರಿಗಾಗಿ ಪುರಸಭೆಗೆ ಕೇವಲ ಎರಡು ವಾಹನಗಳು ಇರುವುದರಿಂದ ವಾರಕ್ಕೊಮ್ಮೆ ಕಸ ವಿಲೇವಾರಿ ಮಾಡಲಾಗುತ್ತಿದೆ. ಇನ್ನೂ ಕೆಲವು ಭಾಗಗಳಲ್ಲಿ 15 ದಿನವಾದರೂ ಪೌರಕಾರ್ಮಿಕರು ಹಾಗೂ ವಾಹನ ಅತ್ತ ಮುಖ ಮಾಡುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.

***

ವಿಂಗಡಣೆಯೇ ಬಲು ದುಸ್ತರ

ಕೆ.ಎನ್‌.ಶ್ರೀಹರ್ಷ

ಭದ್ರಾವತಿ: ನಗರಸಭೆ ಸ್ವಚ್ಛ ಭಾರತ ಅಭಿಯಾನ ಯೋಜನೆ ಹಾಗೂ ಸ್ವಚ್ಛತಾ ಅಭಿಯಾನದ ಎಲ್ಲ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉತ್ತಮ ಸಾಧನೆಯ ಚಿತ್ರಣ ತೆರೆದಿಟ್ಟರೂ ಕಸ ವಿಂಗಡಣೆಯ ಗೊಂದಲಕ್ಕೆ ಪರಿಹಾರ ದೊರೆತಿಲ್ಲ.

ಸಂಪೂರ್ಣ ಪ್ಲಾಸ್ಟಿಕ್ ನಿರ್ಮೂಲನೆ, ಮನೆಮನೆ ಕಸ ಸಂಗ್ರಹಣೆ ವಾಹನ, ಪ್ರಮುಖ ರಸ್ತೆಯಲ್ಲಿ ದಿನಕ್ಕೆರಡು ಬಾರಿ ಕಸ ಸಂಗ್ರಹಣೆಯಂತಹ ಕೆಲಸಗಳು ನಡೆದಿದ್ದರೂ ಕಸದ ವಿಂಗಡಣೆಗೆ ಯೋಜಿಸಿದ್ದ ಬಕೆಟ್ ವಿತರಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. 

2015–16ನೇ ಸಾಲಿನಲ್ಲಿ ಹಸಿ ಹಾಗೂ ಒಣಗಿದ ಕಸ ವಿಂಗಡಣೆ ಮಾಡಿ ಹಾಕುವ ಸಲುವಾಗಿ ಪ್ರತಿ ಮನೆಗೆ ಕೆಂಪು, ನೀಲಿ ಬಣ್ಣದ ಬಕೆಟ್ ನೀಡಬೇಕೆಂಬ ಯೋಜನೆ ನಗರದ ಎಲ್ಲ ವಾರ್ಡ್ ತಲುಪುವಲ್ಲಿ ವಿಫಲವಾಗಿದೆ.

‘ನನ್ನ ಅವಧಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಹಣಕಾಸಿನ ತೊಂದರೆಯಿಂದ ಇದು ಪೂರ್ಣವಾಗಿ ನಗರದ ಎಲ್ಲ ಮನೆಗಳಿಗೆ ವಿತರಣೆ ಮಾಡಲು ಸಾಧ್ಯವಾಗಿಲ್ಲ’ಎನ್ನುತ್ತಾರೆ ನಗರಸಭೆ ಮಾಜಿ ಅಧ್ಯಕ್ಷೆ ಸುಧಾಮಣಿ.

ನಗರದ ವಿವಿಧ ಬಡಾವಣೆಗಳಿಂದ ಕಸ ಸಂಗ್ರಹಿಸಿ ಹಿರಿಯೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಯ್ದು ಅಲ್ಲಿ ಅದನ್ನು ವಿಂಗಡಿಸಿ ಗೊಬ್ಬರ ಮಾಡುವ ಪ್ರಕ್ರಿಯೆ ನಡೆದಿದೆ. ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯ ಪ್ರಸ್ತಾವ ಸಹ ಸಲ್ಲಿಕೆಯಾಗಿದೆ. ಆಸ್ಪತ್ರೆ ತ್ಯಾಜ್ಯ ನಿರ್ವಹಣೆಗೆ ಮಾಚೇನಹಳ್ಳಿ ಬಳಿಯಲ್ಲಿ ಖಾಸಗಿ ಸಂಸ್ಥೆ ಕೆಲಸ ಮಾಡುತ್ತಿದೆ.

***

ಸಂಗ್ರಹಣೆಗೆ ಅಡ್ಡಿಯಾಗದ ಕೊರೊನಾ

ಎಂ.ರಾಘವೇಂದ್ರ

ಸಾಗರ: ನಗರ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ ಹೊತ್ತಿನಲ್ಲೂ ಮನೆ ಮನೆಗಳಿಂದ ಕಸ ಸಂಗ್ರಹಿಸುವ ನಗರಸಭೆಯ ಕಾರ್ಯ ನಿಂತಿಲ್ಲ. ಆದರೆ, ಕೊರೊನಾಕ್ಕೆ ಹೆದರಿ ಸ್ವಚ್ಛತಾ ಸಿಬ್ಬಂದಿ ಎಂದಿನಂತೆ ಕೆಲಸದಲ್ಲಿ ತೊಡಗಲು ಹಿಂಜರಿಯುತ್ತಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಪ್ರತಿ ದಿನ 31 ಟನ್ ಕಸ ಸಂಗ್ರಹವಾಗುತ್ತದೆ. ನಗರಕ್ಕೆ ಹೊಂದಿಕೊಂಡಂತೆ ಇರುವ ಸಂಗಳ ಗ್ರಾಮದಲ್ಲಿನ 18 ಎಕರೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಈ ಕಸವನ್ನು ರವಾನಿಸಲಾಗುತ್ತಿದೆ. ನಗರದ 31 ವಾರ್ಡ್‌ಗಳಲ್ಲಿನ ಮನೆಗಳಿಂದ ಕಸವನ್ನು ಸಂಗ್ರಹಿಸಲು ನಗರಸಭೆ 21 ವಾಹನಗಳನ್ನು ಬಳಸುತ್ತಿದೆ. ನಿತ್ಯ ಸಂಗ್ರಹವಾಗುವ 31 ಟನ್ ಕಸದ ಪೈಕಿ 12 ಟನ್‌ಗಳಷ್ಟು ಹಸಿ ಕಸ ಇರುತ್ತದೆ. ಈ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗೊಬ್ಬರವಾಗಿ ಪರಿವರ್ತಿಸಿ ಅದನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಗುತ್ತಿದೆ. ಒಣ ಕಸದದಲ್ಲಿ ಮರುಬಳಕೆಯ ಕಸಗಳನ್ನು ಪ್ರತ್ಯೇಕಿಸುವ ಸ್ವಚ್ಛತಾ ಸಿಬ್ಬಂದಿ ಅದನ್ನು ಗುಜರಿ ವ್ಯಾಪಾರದವರಿಗೆ ಮಾರಾಟ ಮಾಡುತ್ತಾರೆ. ನಂತರ ಉಳಿದ ಕಸ ವಿಲೇವಾರಿ ಮಾಡಲಾಗುತ್ತದೆ.

ಸ್ವಚ್ಛತಾ ಕಾರ್ಯದಲ್ಲಿ 123 ಪೌರಕಾರ್ಮಿಕರು ಭಾಗಿಯಾಗಿದ್ದಾರೆ. ಸಂಗಳ ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೊರರಾಜ್ಯದ ಏಳು ಕಾರ್ಮಿಕರು ಕಾರ್ಯನಿರ್ವಹಿಸುತಿದ್ದಾರೆ.

‘ಈ ಸಲ ಒಂಬತ್ತು ಸ್ವಚ್ಛತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರಿಗೆಲ್ಲ ಸೂಕ್ತ ಚಿಕಿತ್ಸೆ ಕೊಡಲಾಗಿದೆ. ಗುಣಮುಖರಾಗಿದ್ದಾರೆ’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ.

ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30ರವರೆಗೆ ಸ್ವಚ್ಛತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಕೊರೊನಾ ಮಾರ್ಗಸೂಚಿ ಪ್ರಕಾರ ಅವರ ಕೆಲಸದ ಅವಧಿಯನ್ನು ಬೆಳಿಗ್ಗೆ ಹನ್ನೊಂದಕ್ಕೆ ಸೀಮಿತಗೊಳಿಸಲಾಗಿದೆ. ನಗರದ ಆಸ್ಪತ್ರೆಗಳ ತ್ಯಾಜ್ಯಗಳನ್ನು ಶಿವಮೊಗ್ಗದ ಮೆಡಿಕಲ್ ಬಯೋವೇಸ್ಟ್ ಘಟಕಕ್ಕೆ ಅಲ್ಲಿನ ಸಿಬ್ಬಂದಿಯೇ ಇಲ್ಲಿಗೆ ಬಂದು ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳ ತ್ಯಾಜ್ಯನಿರ್ವಹಣೆ ಜವಾಬ್ದಾರಿ ಇಲ್ಲಿನ ಸ್ವಚ್ಛತಾ ಸಿಬ್ಬಂದಿಗೆ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು