ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ದಾಖಲೆಯ ಲಾಭ

ಜಿಲ್ಲೆಯ ಸಹಕಾರ ಸಂಘಗಳಿಗೆ, ಶೇರುದಾರರಿಗೆ ಡಿವಿಡೆಂಟ್‌ ಭಾಗ್ಯ
Last Updated 12 ಅಕ್ಟೋಬರ್ 2021, 11:57 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ 2020–21ನೇ ಸಾಲಿನಲ್ಲಿ ₹ 18.46 ಕೋಟಿ ನಿವ್ವಳ ಲಾಭ ಗಳಿಸಿದ್ದು, ಪ್ರಸಕ್ತ ವರ್ಷ ಜಿಲ್ಲೆಯ ಸಹಕಾರ ಸಂಘಗಳಿಗೆ, ಶೇರುದಾರರಿಗೆ ಡಿವಿಡೆಂಟ್‌ ನೀಡಲಾಗುವುದು ಎಂದು ಬ್ಯಾಂಕ್‌ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಹೇಳಿದರು.

ಬ್ಯಾಂಕ್‌ನ ಗಾಂಧಿ ಬಜಾರ್‌ ಶಾಖೆಯಲ್ಲಿ 2014ರಲ್ಲಿ ನಡೆದ ಹಗರಣದ ನಂತರ ಬ್ಯಾಂಕ್‌ ಮುಳುಗಿ ಹೋಯಿತು ಎಂಬಂತೆ ಬಿಂಬಿಸಲಾಯಿತು. ₹ 200 ಕೋಟಿಗೂ ಹೆಚ್ಚು ಠೇವಣಿ ಹಿಂಪಡೆಯಲಾಗಿತ್ತು. ನಂತರ ಬ್ಯಾಂಕ್‌ ಸಾಕಷ್ಟು ಚೇತರಿಕೆ ಕಂಡಿದೆ. ₹ 23 ಕೋಟಿ ಲಾಭದಲ್ಲಿ ತೆರೆಗೆ ಕಳೆದು ₹ 18.46 ಕೋಟಿ ಉಳಿದಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬ್ಯಾಂಕಿನ ಸಾಧನೆ ಗುರುತಿಸಿ ಲೆಕ್ಕ ಪರಿಶೋಧಕರು ಆಡಿಟ್ ವರ್ಗೀಕರಣದಲ್ಲಿ ‘ಎ’ ಗ್ರೇಡ್ ನೀಡಿದ್ದಾರೆ. ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 1,01,970 ರೈತರಿಗೆ ₹ 943.19 ಕೋಟಿ ಬೆಳೆಸಾಲ ನೀಡಿದೆ. 9,700 ಹೊಸ ರೈತರಿಗೆ ₹ 91.06 ಕೋಟಿ ಹಾಗೂ 31,547 ರೈತರಿಗೆ ಹೆಚ್ಚುವರಿ ₹ 149.74 ಕೋಟಿ ಬೆಳೆಸಾಲ ನೀಡಲಾಗಿದೆ. 748 ರೈತರಿಗೆ 38.61 ಕೋಟಿ ಮಧ್ಯಮವಾದಿ ಸಾಲ ನೀಡಲಾಗಿದೆ ಎಂದು ವಿವರ ನೀಡಿದರು.

2,700 ಸ್ವಸಹಾಯ ಗುಂಪುಗಳಿಗೆ ₹ 86 ಕೋಟಿ ಸಾಲ ನೀಡಲಾಗಿದೆ. ಸರ್ಕಾರದ ಕಾಯಕ ಯೋಜನೆ ಅಡಿ ₹1.20 ಕೋಟಿವರೆಗೆ ಸಾಲ ನೀಡುತ್ತಿದೆ. 44 ಗುಂಪುಗಳಿಗೆ ₹ 3.21 ಕೋಟಿ ನೀಡಲಾಗಿದೆ. ವಾಸೂಲಾತಿ ಪ್ರಮಾಣ ಶೇ 99.32ರಷ್ಟಿದೆ. ಸರ್ಕಾರದ ಬಡವರ ಬಂಧು ಯೋಜನೆ ಮೂಲಕ ಸುಮಾರು 144 ಬೀದಿಬದಿ ವ್ಯಾಪಾರಿಗಳಿಗೆ ₹ 11.12 ಲಕ್ಷಗಳಷ್ಟು ಅಸಲು, ಬಡ್ಡಿ ಮನ್ನಾ ಮಾಡಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘದ 1156 ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸುಮಾರು ₹ 1.74 ಕೋಟಿ ಸಾಲ ವಿತರಿಸಲಾಗಿದೆ ಎಂದರು.

2020-21ನೇ ಸಾಲಿನಲ್ಲಿ ಬ್ಯಾಂಕಿನಿಂದ ಕಾರು ಖರೀದಿಸಲು ರಿಯಾಯಿತಿ ಬಡ್ಡಿ ದರದಲ್ಲಿ 420 ಜನರಿಗೆ ₹ 31.02 ಕೋಟಿ ಸಾಲ ನೀಡಲಾಗಿದೆ. ದೀಪಾವಳಿ ಮತ್ತು ದಸರಾ ಅಂಗವಾಗಿ ವಿಶೇಷ ವಾಹನ ಸಾಲ ನೀಡಲಾಗುತ್ತಿದೆ. ಕೇವಲ 75 ಪೈಸೆ ಬಡ್ಡಿ ವಿಧಿಸಲಾಗುತ್ತಿದೆ. ಈ ಅವಕಾಶವನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ ಅರಕೆರೆ, ನಿರ್ದೇಶಕರಾದ ಎಸ್.ಪಿ.ದಿನೇಶ್, ಜೆ.ಪಿ.ಯೋಗೀಶ್, ಎನ್‌.ಬಿ.ಶ್ರೀಧರ್, ಎನ್.ಎಸ್.ಶ್ರೀಪಾದರಾವ್, ಜಿ.ಎಸ್.ಸುಧೀರ್, ದುಗ್ಗಪ್ಪಗೌಡ, ವ್ಯವಸ್ಥಾಪಕ ನಿರ್ದೇಶಕ ಟಿ.ಮಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT