ಗುರುವಾರ , ಡಿಸೆಂಬರ್ 3, 2020
20 °C
ವಿವಿಧ ರಾಜಕೀಯ ಪಕ್ಷಗಳ ಮುಖಂಡರ ತುರ್ತು ಸಭೆ

ಸಿಗಂದೂರು ಸಮಿತಿ ರದ್ದತಿಗೆ 15 ದಿನಗಳ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸರ್ಕಾರ ನೇಮಿಸಿರುವ ಮೇಲ್ವಿಚಾರಣ ಹಾಗೂ ಸಲಹಾ ಸಮಿತಿಯನ್ನು 15 ದಿನಗಳ ಒಳಗೆ ರದ್ದು ಮಾಡಬೇಕು ಎಂದು ಸಿಗಂದೂರು ಉಳಿಸಿ ಹೋರಾಟದ ಪೂರ್ವಭಾವಿ ಸಭೆ ಒಮ್ಮತದ ನಿರ್ಣಯ ತೆಗೆದುಕೊಂಡಿತು.

ಆರ್ಯ ಈಡಿಗ ಭವನದಲ್ಲಿ ಸೋಮವಾರ ನಡೆದ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ನಿರ್ಧಾರ ಪ್ರಕಟಿಸಿದರು.

ಜಿಲ್ಲಾಡಳಿತ ತಕ್ಷಣ ಸಮಿತಿ ರದ್ದು ಮಾಡಬೇಕು. ಹಿಂದಿನಂತೆ ಧರ್ಮದರ್ಶಿ ರಾಮಪ್ಪ ಅವರ ಟ್ರಸ್ಟ್ ಅಡಿಯಲ್ಲೇ ದೇವಸ್ಥಾನದ ನಿರ್ವಹಣೆಗೆ ಅನುವು ಮಾಡಿಕೊಡಬೇಕು. ಸಮಿತಿ ರದ್ದು ಮಾಡಲು 15 ದಿನಗಳ ಗಡುವು ನೀಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ಈಡಿಗ ಸಮಾಜದ ಗುರುಗಳ ನೇತೃತ್ವದಲ್ಲಿ ಸರ್ವಜಾತಿ ಹಾಗೂ ಸರ್ವ ಪಕ್ಷಗಳ ನೇತೃತ್ವದಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.

ಸಿಗಂದೂರು ದೇವಸ್ಥಾನ ಎಲ್ಲ ಜಾತಿಯ ಭಕ್ತರ ಧಾರ್ಮಿಕ ಅಸ್ಮಿತೆ. ಈ ಹೋರಾಟವನ್ನು ರಾಜ್ಯಮಟ್ಟದ ಒಂದು ಆಂದೋಲನವಾಗಿ ರೂಪಿಸಲಾಗುವುದು. ಈಡಿಗ-ಬಿಲ್ಲವ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲ ಹಿಂದುಳಿದ ವರ್ಗಗಳ ಸ್ವಾಮೀಜಿಗಳು, ಈಡಿಗ ಸಮುದಾಯವನ್ನು ಪ್ರತಿನಿಧಿಸುವ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲೆಯ ಎಲ್ಲ ಜಾತಿಗಳ ಮುಖಂಡರನ್ನೂ ಹೋರಾಟ ಸಮಿತಿ ಒಳಗೊಳ್ಳಬೇಕು ಎನ್ನುವುದು ಸಭೆಯ ಆಶಯ ಎಂದರು.

ಮಾಜಿ ಶಾಸಕ ಮಧು ಬಂಗಾರಪ್ಪ, ‘ಮುಜರಾಯಿಗೆ ಸೇರಿಸಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಸಮಿತಿ ನೇಮಕದ  ಉದ್ದೇಶವೇನು? ಸಿಗಂದೂರು ದೇವಿ ಭಕ್ತರ ಭಾವನೆಗಳಿಗೆ ಧಕ್ಕೆ ತರಬಾರದು. ಸರ್ಕಾರ ಜೇನುಗೂಡಿಗೆ ಕೈ ಹಾಕುವುದಿಲ್ಲ ಎಂಬ ಭರವಸೆ ಇದೆ’ ಎಂದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ‘ಹೋರಾಟದ ಪೂರ್ವಭಾವಿ ಸಭೆಗೆ ಎಲ್ಲ ಸಮಾಜದ ಮುಖಂಡರು ಬಂದಿದ್ದಾರೆ.  ದೇವಿಯ ಎಲ್ಲ ಭಕ್ತರೂ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ’ ಎಂದರು.

ಸರ್ವಜಾತಿ ಮುಖಂಡರ ಬೆಂಬಲ: ಈಡಿಗ, ಬಿಲ್ಲವ, ಲಿಂಗಾಯತ, ಒಕ್ಕಲಿಗ, ಕುರುಬ, ಉಪ್ಪಾರ, ದೇವಾಂಗ, ಮಡಿವಾಳ, ಬಣಜಾರ, ಮರಾಠ, ದಲಿತ, ಕುಂಚಟಿಗ, ವಾಲ್ಮೀಕಿ, ಸವಿತಾ ಸಮಾಜ ,ಸಾಧುಶೆಟ್ಟಿ ಸೇರಿ ಅನೇಕ ಜಾತಿಯ ಮುಖಂಡರು ಭಾಗವಹಿಸಿದ್ದರು.

ಶಾರದಾ ಪೂರ್‍ಯಾನಾಯ್ಕ, ಡಾ.ಜಿ.ಡಿ.ನಾರಾಯಣಪ್ಪ, ಮಂಗಳೂರಿನ ಸತ್ಯಜಿತ್ ಸುರತ್ಕಲ್, ರಾಜು ತಲ್ಲೂರ್, ದೇವಾಂಗ ಸಮಾಜ ಗಿರಿಯಪ್ಪ, ಎನ್. ರಮೇಶ್, ಗೋಣಿ ಮಾಲತೇಶ್,  ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಎಂ.ಗುರುಮೂರ್ತಿ, ಕೆ.ಪಿ.ಶ್ರೀಪಾಲ್, ಭೀಮಣ್ಣನಾಯ್ಕ, ಹುಲ್ತಿಕೊಪ್ಪ ಶ್ರೀಧರ್, ಮಂಜುನಾಥ್ ನಾಯ್ಕ,  ವಿ.ರಾಜು, ಎಚ್.ಸಿ.ಯೋಗಿಶ್, ಪಾಲಾಕ್ಷಿ, ಗೀತಾಂಜಲಿ ದತ್ತಾತ್ರೇಯ, ಭುಜಂಗಯ್ಯ, ಪ್ರವೀಣ್ ಹಿರೇಗೋಡು ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು