ಆಂಧ್ರಪ್ರದೇಶಕ್ಕೆ ಸಕ್ರೆಬೈಲು ಆನೆ?
ಆಂಧ್ರಪ್ರದೇಶದಲ್ಲಿ ಆನೆಗಳು ಹಾಗೂ ಮಾನವರ ನಡುವಿನ ಸಂಘರ್ಷ ಹೆಚ್ಚಿದೆ. ಆನೆ ದಾಳಿಯಿಂದ ಒಂದು ವರ್ಷದ ಅವಧಿಯಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ. ಈ ಸಂಘರ್ಷ ತಪ್ಪಿಸಿ ಕಾಡಾನೆಗಳ ಸೆರೆ ಹಿಡಿಯಲು ಆಂಧ್ರಪ್ರದೇಶ ಸರ್ಕಾರ ಕರ್ನಾಟಕದ ಕುಮ್ಮಿ (ತರಬೇತಿ ಪಡೆದ) ಆನೆಗಳ ನೆರವು ಪಡೆಯಲು ಮುಂದಾಗಿದೆ. ಮೊದಲ ಹಂತದಲ್ಲಿ ಕಳೆದ ಆಗಸ್ಟ್‌ನಲ್ಲಿ ಎಂಟು ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ ನಾಲ್ಕು ಆನೆಗಳಿಗೆ ಆಂಧ್ರ ಸರ್ಕಾರ ಬೇಡಿಕೆ ಸಲ್ಲಿಸಿದೆ. ಹೀಗಾಗಿ ಸಕ್ರೆಬೈಲು ಆನೆ ಕ್ಯಾಂಪಿನಿಂದಲೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮಾಹಿತಿ ಕೇಳಿದ್ದಾರೆ. ‘ನಮಗೆ ಪಿಸಿಸಿಎಫ್ ಪತ್ರ ಬಂದಿದೆ. ಕ್ಯಾಂಪ್‌ನಿಂದ ಕೊಂಡೊಯ್ಯಲು ಆನೆ ಆಯ್ಕೆ ಮಾಡಲು ಆಂಧ್ರಪ್ರದೇಶದಿಂದಲೇ ಅಧಿಕಾರಿಗಳ ತಂಡ ಬಂದು ಪರಿಶೀಲಿಸಬೇಕಿದೆ. ನಂತರ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಕ್ರೆಬೈಲು ಆನೆ ಕ್ಯಾಂಪ್‌ನ ಆರ್‌ಎಫ್‌ಒ ವಿನಯ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.