ಗುರುವಾರ , ಜನವರಿ 28, 2021
15 °C

ಕೆಳದಿ ನಾಯಕರ ಅವಧಿಯ ಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ಸಮೀಪದ ಶಿವಪುರ (ಶಿವಳ್ಳಿ) ಗ್ರಾಮದ ವರದಾಂಜನೇಯ ದೇವಾಲಯದ ಬಳಿ ಇರುವ ಅಲ್ಲಮಪ್ರಭುಗಳ ಗದ್ದುಗೆಯ ದಿಕ್ಕಿನಲ್ಲಿ ಕೆಳದಿ ಸೋಮಶೇಖರ ನಾಯಕರ ಅವಧಿಯ ಶಾಸನ ಪತ್ತೆಯಾಗಿದೆ.

ಶಾಸನವು 14 ಸಾಲುಗಳ ಪಾಠವನ್ನು ಹೊಂದಿದ್ದು, 60 ಸೆಂ.ಮೀ. ಎತ್ತರ ಹಾಗೂ 40 ಸೆಂ.ಮೀ ಅಗಲವಾಗಿದೆ. ಇತಿಹಾಸ ಸಂಶೋಧಕ ರಮೇಶ ಬಿ. ಹಿರೇಜಂಬೂರು ಶಾಸನ ಪತ್ತೆ ಮಾಡಿದ್ದಾರೆ.

ಕೆಳದಿಯ ಮಂತ್ರಿ ಹಾಗೂ ಇಮ್ಮಡಿ ಸೋಮಶೇಖರ ನಾಯಕನ ಮಾವ ನಿರ್ವಾಣಯ್ಯ ಶಿವಪುರದ ಗ್ರಾಮದಲ್ಲಿರುವ ಮಹಾಂತ ದೇವರಿಗೆ ಸೇರಿದ ಮಠಕ್ಕೆ ಭೂದಾನ ಮಾಡಬೇಕು ಎಂದು ಮನವಿ ಮಾಡುತ್ತಾನೆ. ಮಹಾಂತ ದೇವರು ಪುರಾಣದ ಬಸವಲಿಂಗಪ್ಪ ಅವರ ಶಿಷ್ಯ. ಅವರ ಕೋರಿಕೆಯಂತೆ ಇಮ್ಮಡಿ ಸೋಮಶೇಖರ ನಾಯಕ ಭೂದಾನ ಮಾಡುತ್ತಾನೆ. ಅದರ ವಿವರ ಶಾಸನದಲ್ಲಿದೆ. 

ಈ ಶಾಸನದಿಂದ ಈಗಿನ ಶಿವಳ್ಳಿ ಗ್ರಾಮವು ಹಿಂದೆ ಶಿವಪುರ ಎಂದು ಕರೆಸಿಕೊಳ್ಳುತ್ತಿದ್ದು, ಇಲ್ಲೊಂದು ಸ್ವತಂತ್ರ ಮಠವಿದ್ದ ಮಾಹಿತಿಯನ್ನು ನೀಡುತ್ತದೆ. ಅದರ ಸ್ಥಾಪಕ ಪುರಾಣದ ಬಸವಲಿಂಗಪ್ಪ ಅವರ ಶಿಷ್ಯ ಮಹಾಂತ ದೇವರು ಎಂಬುದು ವಿಶೇಷ. ಶಿವಪುರ ಸೀಮೆಯ ಉಲ್ಲೇಖ ಶಿಕಾರಿಪುರ ತಾಲ್ಲೂಕಿನ ಹರಗಿ ಗ್ರಾಮದ ಶಾಸನಗಳಲ್ಲೂ ಕಂಡುಬರುತ್ತದೆ. ಶಿವಪುರ ಕಂದಾಯ ಸಂಗ್ರಹ ಕೇಂದ್ರವಾಗಿ ಕಂಡುಬರುತ್ತದೆ. ಶಾಸನದಲ್ಲಿ ಉಲ್ಲೇಖವಾದ ಊಳಿಗದ ಚನ್ನಮಲ್ಲನು ಕೆಳದಿ ಚನ್ನಮ್ಮನ ಅವಧಿಯಲ್ಲಿಯೂ ಊಳಿಗದ ಅಧಿಕಾರಿಯಾಗಿದ್ದು, ಚಿಕ್ಕಜಂಬೂರಿನ ಶಾಸನದಲ್ಲಿ ಆತನ ಉಲ್ಲೇಖವಿದೆ.

ಈ ಶಾಸನವನ್ನು ಪತ್ತೆ ಮಾಡಲು ಅಶೋಕ ತಾಳಗುಂದ, ಮಾರುತೆಪ್ಪ, ದಿನೇಶ್, ದೇವರಾಜ್ ಮತ್ತು ಸುರೇಶ ಸಹಕರಿಸಿದ್ದಾರೆ. ಶಾಸನವನ್ನು ಓದಲು ಶಾಸನ ತಜ್ಞ ಡಾ. ಜಗದೀಶ್ ಮಾರ್ಗದರ್ಶನ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.