ಶಿವಮೊಗ್ಗ: ರಾಷ್ಟ್ರದ್ರೋಹದ ಕೆಲಸಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ಕೊಡಬಾರದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ. ಇತ್ತೀಚಿನ ರಾಗಿಗುಡ್ಡದ ಘಟನೆಗೆ ಸಂಬಂಧಿಸಿದಂತೆ ಸಾಂತ್ವನ ಹೇಳಲು ಬಂದ ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್ ಅವರನ್ನು ಗಡಿಪಾರು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ದಸರಾವನ್ನು ಇಡೀ ದೇಶವೇ ನೋಡುತ್ತದೆ. ಅದಕ್ಕೆ ಪರ್ಯಾಯವಾಗಿ ಆಚರಿಸುವ ಮಹಿಷ ದಸರಾಕ್ಕೆ ಅನುಮತಿ ಕೊಡುತ್ತಾರೆ. ಯಾರನ್ನು ಪೂಜೆ ಮಾಡಬೇಕು ಎಂಬುದೇ ಗೊತ್ತಿಲ್ಲ ಎಂದರು.
ಬೆಂಗಳೂರು ನಗರದಲ್ಲಿ ಪ್ಯಾಲೆಸ್ಟೀನ್ ಭಯೋತ್ಪಾದಕರ ಪರವಾಗಿ ಪ್ರತಿಭಟನೆ ಮಾಡುವವರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತದೆ. ಇದು ದೇಶ ದ್ರೋಹದ ಕೆಲಸವಲ್ಲವೇ. ಇನ್ನೂ ಎಷ್ಟು ದಿನ ವೋಟ್ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ಮಾಡುತ್ತದೆ. ಇದನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ ಎಂದ ಅವರು, ಬಹುತ್ವ ಕರ್ನಾಟಕ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪಕ್ಷದ ನಗರ ಘಟಕದ ಅಧ್ಯಕ್ಷ ಜಗದೀಶ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಬಾಲು, ಶಶಿಧರ್, ಕೆ.ವಿ. ಅಣ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.