ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ವರದಾ, ದಂಡಾವತಿ ನದಿ: ಕುಡಿಯುವ ನೀರಿಗಾಗಿ ಹಾಹಾಕಾರ

ಸೊರಬ ತಾಲ್ಲೂಕಿನಲ್ಲಿ ಇಲ್ಲ ಶಾಶ್ವತ ನೀರಾವರಿ ಯೋಜನೆ; ರೈತರ ಪರದಾಟ
Last Updated 17 ಮಾರ್ಚ್ 2023, 10:41 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನಲ್ಲಿ ವರದಾ ಹಾಗೂ ದಂಡಾವತಿ ನದಿಗಳು ಹರಿದರೂ ಕುಡಿಯುವ ನೀರಿಗಾಗಿ ಶಾಶ್ವತ ಯೋಜನೆ ರೂಪಿಸದ್ದರಿಂದ ಬೇಸಿಗೆ ಪ್ರಾರಂಭವಾಗುವ ಮುನ್ನವೇ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ.

ಹಲವು ವರ್ಷಗಳ ಹಿಂದೆಯೇ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬವಣೆ ಮನಗಂಡು ವರದಾ ನದಿಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಮಳೆಗಾಲ ಹೊರತುಪಡಿಸಿ ನದಿಯ ನೀರನ್ನು ಕೇವಲ ಎರಡು ತಿಂಗಳಲ್ಲಿ ಮಾತ್ರ ಬಳಸಬಹುದು. ಬೇಸಿಗೆ ಆರಂಭವಾಗುವ ಮುನ್ನವೇ ನದಿಯ ಒಡಲು ಬರಿದಾಗಿದ್ದು, ಮುಂಜಾಗ್ರತೆಗಾಗಿ ಪುರಸಭೆ ಬದಲಿ ವ್ಯವಸ್ಥೆ ಮಾಡಿಕೊಂಡಿಲ್ಲ ಎಂಬುದು ರೈತರ ಆರೋಪ.

ಪಟ್ಟಣದಲ್ಲಿ 13,000 ಜನಸಂಖ್ಯೆ ಇದೆ. ಇನ್ನೂ 3 ತಿಂಗಳು ಕಡು ಬೇಸಿಗೆ ಇರುವುದರಿಂದ ಕುಡಿಯುವ ನೀರಿಗೆ ಮತ್ತಷ್ಟು ಅಭಾವ ಎದುರಾಗಲಿದೆ. ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಚಂದ್ರಗುತ್ತಿ ಬಳಿ ಹರಿಯುವ ವರದಾ ನದಿಗೆ ಒಡ್ಡು ನಿರ್ಮಿಸಿ ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತಿದೆ. ವರದಾ ನದಿಯಿಂದ ಸೊರಬಕ್ಕೆ ನೀರು ಪೂರೈಕೆ ಮಾಡುತ್ತಿರುವುದರಿಂದ ಬಹುಬೇಗ ನೀರಿನ ಮೂಲ ಬತ್ತಿಹೋಗಿ ಚಂದ್ರಗುತ್ತಿ ಸುತ್ತಲಿನ ಗ್ರಾಮಗಳಿಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ರೈತ ಈಶ್ವರ್‌ ಹೇಳುತ್ತಾರೆ.

ವರದಾ ನದಿಯಲ್ಲಿ ನೀರು ಬತ್ತಿ, ಪೂರೈಕೆ ಸ್ಥಗಿತಗೊಂಡ ಮೇಲೆ ಪುರಸಭೆ ಅಧಿಕಾರಿಗಳು ಕೊಳವೆಬಾವಿ ಕೊರೆಸಲು ಮುಂದಾಗಿದ್ದಾರೆ. ಸದ್ಯ ಪುರಸಭೆ ಆಡಳಿತ ಟ್ಯಾಂಕರ್‌ ಮೂಲಕ ನೀರು ‌ಪೂರೈಸುತ್ತಿದೆ.

‘ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲ್ಲೂಕು ಎನ್ನುವ ಅಪಕೀರ್ತಿಗೆ ಒಳಗಾಗಿರುವ ಸೊರಬದಲ್ಲಿ ಮೂಲಸೌಕರ್ಯ ಕೊರತೆ ಇದೆ. ತಾಲ್ಲೂಕಿನಲ್ಲಿ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಶಾಶ್ವತವಾದ ಯೋಜನೆ ಕಾರ್ಯಗತಗೊಂಡಿಲ್ಲ. ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ತೋರಿಸಿದ ಉತ್ಸಾಹ ಅಭಿವೃದ್ಧಿ ಬಗ್ಗೆ ತೋರಿಸುತ್ತಿಲ್ಲ’ ಎಂದು ಆರೋಪಿಸುತ್ತಾರೆ ರೈತ ನಾರಾಯಣಪ್ಪ.

ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲದೆ ಚಂದ್ರಗುತ್ತಿ ಹೋಬಳಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಕೊಳವೆಬಾವಿಗಳು ವಿಫಲವಾಗುತ್ತಿವೆ. ಫಸಲು ನೀಡುವ ಅಡಿಕೆ ತೋಟ ಕಣ್ಣೆದುರಿಗೆ ಒಣಗುತ್ತಿರುವುದನ್ನು ನೋಡಿ ಸಂಕಟವಾಗುತ್ತಿದೆ ಎಂದು ಅವರು ಹೇಳಿದರು.

ವರದಾ ನದಿ ಪ್ರವಾಹದಿಂದ ಪ್ರತಿ ವರ್ಷ ಬೆಳೆಹಾನಿ ಉಂಟಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ನದಿಗೆ ಬ್ಯಾರೇಜ್ ನಿರ್ಮಿಸಿದ್ದರೆ ಬೇಸಿಗೆಯಲ್ಲಾದರೂ ಬೆಳೆ ಬೆಳೆಯಲು ಅನುಕೂಲವಾಗುತ್ತಿತ್ತು. ಸಂಬಂಧಪಟ್ಟವರು ರೈತರ ಹಿತದೃಷ್ಟಿಯಿಂದ ಶಾಶ್ವತ ನೀರಾವರಿ ಕಲ್ಪಿಸುವ ಬಗ್ಗೆ ಗಮನ ಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯೆ ತುಳಸಮ್ಮ ಚಂದ್ರಪ್ಪ ಒತ್ತಾಯಿಸಿದರು.

ಪುರಸಭೆ ಸಮೀಪದ ಹಳೇಸೊರಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಕೊಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಪುರಸಭೆಗೆ ಸೇರಿಸಲಾಗಿದೆ. ಇಲ್ಲಿನ ಗ್ರಾಮಗಳಲ್ಲಿ ಮೊದಲೇ ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೊಳವೆಬಾವಿ ಕೊರೆಸಿ ನೀರು ಪೂರೈಸಲಾಗುತ್ತಿದೆ. ಇಲ್ಲವಾದರೆ ಕುಡಿಯುವ ನೀರಿನ ವಿಷಯದಲ್ಲಿ ಪಟ್ಟಣದ ಸ್ಥಿತಿಯೇ ಈ ಗ್ರಾಮಗಳಿಗೂ ಎದುರಾಗುತ್ತಿತ್ತು ಎಂದು ಅವರು ಹೇಳಿದರು.

ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯಲ್ಲಿ ಕೃಷಿಗೆ ಹಾಗೂ ಸೊರಬ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ₹ 196 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುವ ಬಗ್ಗೆ ಶಾಸಕ ಕುಮಾರ್ ಬಂಗಾರಪ್ಪ ಭರವಸೆ ನೀಡಿದ್ದರಾದರೂ ಇದುವರೆಗೂ ಅನುದಾನ ಬಿಡಿಗಡೆಯಾಗಿಲ್ಲ. ಐತಿಹಾಸಿಕ ಚಂದ್ರಗುತ್ತಿ ಕ್ಷೇತ್ರಕ್ಕೆ ಪ್ರತಿ ಹುಣ್ಣಿಮೆ, ಅಮಾವಾಸ್ಯೆಗೆ ಸಾವಿರಾರು ಭಕ್ತರು ಬರುತ್ತಾರೆ. ಕುಡಿಯುವ ನೀರು ಹಾಗೂ ಈ ಭಾಗದ ರೈತರಿಗೆ ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ ಅಂಗಡಿ ಕೋರಿದರು.

***

ಬೇಸಿಗೆಯಲ್ಲಿ ನೀರಿಲ್ಲದೇ ‌ಅಡಿಕೆ ತೋಟಗಳು ಒಣಗುತ್ತಿವೆ. ಕೇವಲ ಭರವಸೆ ನೀಡುವ ಜನಪ್ರತಿನಿಧಿಗಳು ತುರ್ತಾಗಿ ಬ್ಯಾರೇಜ್ ನಿರ್ಮಾಣ ಮಾಡುವಲ್ಲಿ ಇಚ್ಛಾಶಕ್ತಿ ತೋರಿಸಬೇಕು.

– ಈಶ್ವರ್, ರೈತ, ಹೊಳೆಜೋಳದಗುಡ್ಡೆ

***

ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿಗಾಗಿ ₹ 196 ಕೋಟಿ ಅನುದಾನ ಬಿಡುಗಡೆಯಾಗಿದೆ. ವರದಾ ನದಿಗೆ ಬ್ಯಾರೇಜ್ ನಿರ್ಮಾಣಕ್ಕೆ ₹ 100 ಕೋಟಿ. ಉಳಿದ ₹ 96 ಕೋಟಿ ಪುರಸಭೆ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರಿಗೆ ಮೀಸಲಿರಿಸಲಾಗಿದೆ.

– ಈರೇಶ್ ಮೇಸ್ತ್ರಿ, ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT