ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂಸಿ: 3 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ

ಅರೆ ಮಲೆನಾಡು ಪ್ರದೇಶ ಕುಂಸಿ ಸುತ್ತಮುತ್ತ ಹಾಹಾಕಾರ
ವರುಣ್ ಕುಮಾರ್ ಡಿ.
Published 5 ಮಾರ್ಚ್ 2024, 6:33 IST
Last Updated 5 ಮಾರ್ಚ್ 2024, 6:33 IST
ಅಕ್ಷರ ಗಾತ್ರ

ಕುಂಸಿ: ಕಳೆದ ವರ್ಷ ಮಳೆ ಕೊರತೆಯ ಕಾರಣ ಈ ಬಾರಿ ಬೇಸಿಗೆಯಲ್ಲಿ ಅರೆ ಮಲೆನಾಡು ಪ್ರದೇಶದಲ್ಲೂ ಕುಡಿಯುವ ನೀರಿಗೆ ಬರ ಎದುರಾಗಿದೆ.

ಕುಂಸಿ ಸೇರಿದಂತೆ ಸುತ್ತಮುತ್ತಲ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 63 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ  ಹಾಹಾಕಾರ ಕಂಡುಬಂದಿದೆ. ಕುಂಸಿ ಹಾಗೂ ಹಾರನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮಸ್ಯೆ ಗಂಭೀರವಾಗಿದೆ.

ರೈತರು ತಮ್ಮ ತಮ್ಮ ಜಮೀನು ಮತ್ತು ತೋಟದ ಬೆಳೆಗಳಿಗೆ ನೀರಿನ ಅಭಾವ ಉಂಟಾಗದಂತೆ ಕೊಳವೆಬಾವಿಗಳನ್ನು ಕೊರೆಯಿಸಿದ್ದು, ಶೇ 90ರಷ್ಟು ಕೊಳವೆಬಾವಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ. ಬಿಸಿಲ ತಾಪ ಏರುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳೆಗಳಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಮಂಡಘಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿರುವ 32, ಸಿರಿಗರೆ ಪಂಚಾಯಿತಿಯ 16, ಕೋಹಳ್ಳಿ ಪಂಚಾಯಿತಿಯ 14, ಆಯನೂರು ಪಂಚಾಯಿತಿಯ 32, ತುಪ್ಪೂರು ಪಂಚಾಯಿತಿಯ 16ರ ಪೈಕಿ 13, ಚೋರಡಿ ಪಂಚಾಯಿತಿಯ 19, ಬಾಳೆಕೊಪ್ಪದ 10, ತಮ್ಮಡಿಹಳ್ಳಿ ಪಂಚಾಯಿತಿಯ 25 ಕೊಳವೆಬಾವಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಸದ್ಯ ಜನರಿಗೆ ಕುಡಿಯಲು ಪೂರೈಸಲಾಗುತ್ತಿದೆ. ಕುಂಸಿ ಹಾಗೂ ಹಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ದಿನಕ್ಕೊಮ್ಮೆ ನೀರು ಬರುತ್ತಿದೆ. ಬಾಳೆಕೊಪ್ಪ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲೂ 2 ದಿನಕ್ಕೊಮ್ಮೆ ಕುಡಿಯುವ ನೀರು ಕೊಡಲಾಗುತ್ತಿದೆ.

ಕುಂಸಿ ಗ್ರಾಮದಲ್ಲಿ ಮೂರು ದಿನಗಳಿಗೊಮ್ಮೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಸಮಯದಲ್ಲಿಯೂ ಮಕ್ಕಳು ನೀರಿಗಾಗಿ ಕೊಡ ಹಿಡಿದು ಸಾಗುತ್ತಿರುವ ದೃಶ್ಯ
ಕುಂಸಿ ಗ್ರಾಮದಲ್ಲಿ ಮೂರು ದಿನಗಳಿಗೊಮ್ಮೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಸಮಯದಲ್ಲಿಯೂ ಮಕ್ಕಳು ನೀರಿಗಾಗಿ ಕೊಡ ಹಿಡಿದು ಸಾಗುತ್ತಿರುವ ದೃಶ್ಯ

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುಂಸಿಯಲ್ಲಿ 16 ಕೊಳವೆಬಾವಿಗಳಲ್ಲಿ 5ರಲ್ಲಿ ಮಾತ್ರ ನೀರು ಬರುತ್ತಿದೆ. ಉಳಿದ 11ರಲ್ಲಿ ಅತಿ ಕಡಿಮೆ ನೀರು ಬರುತ್ತಿದೆ. ಮೂರು ದಿನಕ್ಕೊಮ್ಮೆ ಜನರಿಗೆ ಕುಡಿಯುವ ನೀರು ಪೂರೈಸುವುದರಿಂದ ಶೇಖರಿಸಿಟ್ಟುಕೊಂಡು ಉಪಯೋಗಿಸಬೇಕಿದೆ. ಕುಂಸಿಯಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಇದ್ದು, ಶಿಥಿಲಗೊಂಡಿದೆ. ಇದರಿಂದಾಗಿ ಜನರಿಗೆ ನೀರು ಸರಬರಾಜು ಸವಾಲಾಗಿ ಪರಿಣಮಿಸಿದೆ. ಗ್ರಾಮದಲ್ಲಿ 5 ಲಕ್ಷ ಲೀಟರ್‌ ಸಂಗ್ರಹ ಸಾಮರ್ಥ್ಯದ ಓವರ್ ಹೆಡ್‌ ಟ್ಯಾಂಕ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲೂ ಹೆಚ್ಚು ಜನಸಂಖ್ಯೆ ಇದ್ದು, 24 ಕೊಳವೆಬಾವಿಗಳಿವೆ. ಅದರಲ್ಲಿ 10 ದುರಸ್ತಿಯಲ್ಲಿದ್ದು, 14 ಮಾತ್ರವೇ ಕಾರ್ಯ ನಿರ್ವಹಿಸುತ್ತಿವೆ. ನಾಲ್ಕು ಓವರ್ ಹೆಡ್‌ ಟ್ಯಾಂಕ್‌ಗಳಿದ್ದು, ಆರೆನಕೊಪ್ಪದ ಟ್ಯಾಂಕ್ ಶಿಥಿಲಗೊಂಡಿದೆ. ಹೊಸ ಟ್ಯಾಂಕ್‌ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಆದರೆ, ಕಾಮಗಾರಿ ಗುತ್ತಿಗೆದಾರ ಅರ್ಧಭಾಗ ಪೈಪ್‌ಲೈನ್‌ ಕಾಮಗಾರಿ ಮುಗಿಸಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಪಂಚಾಯಿತಿ ಸಿಬ್ಬಂದಿ ದೂರಿದ್ದಾರೆ.

ಶಾರದಾ ಪೂರ‍್ಯಾನಾಯ್ಕ
ಶಾರದಾ ಪೂರ‍್ಯಾನಾಯ್ಕ
ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗುವುದು. ನೀರಿನ ಅಭಾವದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
-ಶಾರದಾ ಪೂರ‍್ಯಾನಾಯ್ಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT