ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಬೆಳೆ ನಷ್ಟದ ಆತಂಕದಲ್ಲಿ ಅನ್ನದಾತರು

ಸಾಗರ ತಾಲ್ಲೂಕಿನಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ
Last Updated 17 ನವೆಂಬರ್ 2021, 4:45 IST
ಅಕ್ಷರ ಗಾತ್ರ

ಸಾಗರ: ನಾಲ್ಕು ದಿನಗಳಿಂದ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭತ್ತ, ಜೋಳ ಹಾಗೂ ಅಡಿಕೆ ಬೆಳೆಗಾರರಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ಸಾಮಾನ್ಯವಾಗಿ ಈ ಭಾಗದಲ್ಲಿ ದೀಪಾವಳಿ ಹಬ್ಬದ ನಂತರ ಭತ್ತ ಹಾಗೂ ಅಡಿಕೆ ಕೊಯ್ಲು ಆರಂಭವಾಗುತ್ತದೆ. ಆದರೆ, ಈ ಬಾರಿ ಅಕಾಲಿಕವಾಗಿ ಮಳೆ ಸುರಿಯುತ್ತಿರುವುದು ಕೊಯ್ಲಿಗೆ ಅಡ್ಡಿಯಾಗಿರುವ ಜೊತೆಗೆ ಬೆಳೆ ನಷ್ಟದ ಭೀತಿ ಎದುರಾಗಿದೆ.

ಸಾಗರ ತಾಲ್ಲೂಕಿನಲ್ಲಿ 13,300 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕೃಷಿ ಇಲಾಖೆ ಮೂಲಗಳ ಪ್ರಕಾರ ಕೇವಲ ನಾಲ್ಕು ದಿನದ ಮಳೆಗೆ ಈವರೆಗೆ ತಾಳಗುಪ್ಪ ಹಾಗೂ ಆನಂದಪುರಂ ಹೋಬಳಿಯ 17 ಹೆಕ್ಟೇರ್ ಪ್ರದೇಶದಲ್ಲಿನ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

ಶೇ 20ರಷ್ಟು ಭತ್ತದ ಬೆಳೆಗಾರರು ಕೊಯ್ಲು ಮಾಡಿ ಭತ್ತದ ತೆನೆಗಳನ್ನು ಗದ್ದೆಗಳಲ್ಲಿ ಬಿಟ್ಟಿದ್ದಾರೆ. ಗದ್ದೆಯಲ್ಲಿ ನೀರು ನಿಂತ ಕಾರಣ ಹಾಗೂ ಸತತವಾಗಿ ಮಳೆಯಾಗುತ್ತಿರುವುದರಿಂದ ಕೊಯ್ಲು ಮಾಡಿದ ಭತ್ತದ ತೆನೆಗಳನ್ನು ಮನೆಗೆ ಸಾಗಿಸಿ ಗೊಣಬೆ ಕಟ್ಟಿ ಸಂಗ್ರಹಿಸಿಡಲು ಸಾಧ್ಯವಾಗುತ್ತಿಲ್ಲ.

ಶೇ 80ರಷ್ಟು ಭತ್ತದ ಬೆಳೆಗಾರರು ಇನ್ನೂ ಭತ್ತದ ಕೊಯ್ಲು ಮಾಡಬೇಕಿದ್ದು, ಮಳೆ ನಿಲ್ಲುವುದನ್ನೇ ಕಾಯುತ್ತಿದ್ದಾರೆ. ಆದರೆ, ಈಗ ಸುರಿಯುತ್ತಿರುವ ಮಳೆಯ ಪ್ರಮಾಣಕ್ಕೆ ಗದ್ದೆಗಳಲ್ಲಿನ ಭತ್ತದ ಸಸಿ ಕುಗ್ಗಿ ಹೋಗುತ್ತಿದ್ದು, ತೆನೆಗಳಲ್ಲಿನ ಭತ್ತ ಉದುರಿ ಹೋಗುವ ಅಪಾಯ ಎದುರಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಬೆಳೆ ಸಂಪೂರ್ಣವಾಗಿ ರೈತರ ಕೈ ತಪ್ಪುವ ಸಾಧ್ಯತೆ ಇದೆ.

ತಾಲ್ಲೂಕಿನಲ್ಲಿ 2,290 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಸದ್ಯಕ್ಕೆ ಜೋಳಕ್ಕೆ ತೊಂದರೆ ಕಾಣಿಸಿಕೊಳ್ಳದೆ ಇದ್ದರೂ ಮಳೆ ಮುಂದುವರಿದಲ್ಲಿ ತೆನೆಯೊಳಗೆ ನೀರಿನ ಪ್ರಮಾಣ ಹೆಚ್ಚಾಗಿ ಫಂಗಸ್ ಕಾಣಿಸಿಕೊಳ್ಳುವ ಅಪಾಯವಿದೆ. ಹೀಗಾದಲ್ಲಿ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಮಲೆನಾಡಿನ ಆರ್ಥಿಕ ವಹಿವಾಟಿನ ಮೂಲವಾಗಿರುವ ಅಡಿಕೆ ಬೆಳೆಗಾರರು ಕೂಡ ಅಕಾಲಿಕ ಮಳೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಕೊಯ್ಲು ಮಾಡಿರುವ ಅಡಿಕೆಯನ್ನು ಒಣಗಿಸುವ ಹಾಗೂ ಇತರೆ ಸಂಸ್ಕರಣೆ ಕಾರ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದೆ.

ಅಡಿಕೆ ಕೊಯ್ಲು ಮಾಡಲು ಸಿದ್ಧರಾಗಿರುವ ಬೆಳೆಗಾರರಿಗೆ ಮಳೆ ಕಂಟಕವಾಗಿದೆ. ಹಾಲಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ಬೆಲೆ ಇದ್ದು, ಶೀಘ್ರವಾಗಿ ಕೊಯ್ಲು ಮಾಡಿ ಸಂಸ್ಕರಣೆ ಕಾರ್ಯ ನಡೆಸಿ
ಅಡಿಕೆಯನ್ನು ಮಾರುಕಟ್ಟೆಗೆ ಕೊಂಡೊಯ್ಯಬೇಕು ಎಂಬ ಉತ್ಸಾಹದಲ್ಲಿದ್ದ ಬೆಳೆಗಾರರಿಗೆ ಮಳೆ ನಿರಾಶೆ ಮೂಡಿಸಿದೆ. ಅಡಿಕೆ ಕೊಯ್ಲು ನಿಗದಿತ ಅವಧಿಗಿಂತ ಮುಂದೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.

***

ಈಗಿನ ಮಳೆ ನೋಡಿದರೆ ಅಡಿಕೆ ಕೊಯ್ಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇದೆ. ಇದೇ ರೀತಿ ಮಳೆಯಾದರೆ ಅಡಿಕೆ ಮರದ ಹಿಂಗಾರದಲ್ಲಿ ನೀರು ತುಂಬಿ ಮುಂದಿನ ವರ್ಷದ ಫಸಲಿಗೆ ಹೊಡೆತ ಬೀಳಲಿದೆ.

- ಕೆ.ಎಂ. ಸೂರ್ಯನಾರಾಯಣ, ಅಧ್ಯಕ್ಷರು, ಆಪ್ಸ್ ಕೋಸ್ ಸಂಸ್ಥೆ

***

ಭತ್ತದ ಬೆಳೆ ಲಾಭದಾಯಕವಲ್ಲದಿದ್ದರೂ ಸಾಂಪ್ರದಾಯಿಕ ಬೆಳೆ ಎನ್ನುವ ಕಾರಣಕ್ಕೆ ತಾಲ್ಲೂಕಿನಲ್ಲಿ ಒಂದಿಷ್ಟು ಜನರು ಇನ್ನೂ ಭತ್ತ ಬೆಳೆಯುತ್ತಿದ್ದಾರೆ. ಈ ವರ್ಷದ ಅಕಾಲಿಕ ಮಳೆ ಭತ್ತದ ಬೆಳೆಗಾರರಿಗೆ ಶಾಪವಾಗುವಂತೆ ಕಾಣುತ್ತಿದೆ.

- ಬಿ. ತ್ಯಾಗಮೂರ್ತಿ,ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT