ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day: ಕುರುಹು ಇಲ್ಲದೇ ನಶಿಸಿದ್ದ ‘ಕ್ಯಾದಿಗೆಕಟ್ಟೆ’ಗೆ ಮರುಜೀವ

Last Updated 4 ಜೂನ್ 2021, 19:46 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರೀಕರಣದ ಕಬಂಧಬಾಹುವಿಗೆ ಸಿಲುಕಿ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಕೆರೆಗಳು ಕಣ್ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕೆಲವು ಪರಿಸರಾಸಕ್ತರು ಸೇರಿ, ವಾಜಪೇಯಿ ಬಡಾವಣೆಯಲ್ಲಿ ಕುರುಹು ಇಲ್ಲದಂತೆ ನೆಲಸಮವಾಗಿದ್ದ ಕ್ಯಾದಿಗೆಕಟ್ಟೆ ಕೆರೆಗೆ ಮರುಜೀವ ನೀಡಿದ್ದಾರೆ.

ಶಿವಮೊಗ್ಗ–ಭದ್ರಾವತಿ ನಗಾರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ 6 ಎಕರೆ ಉದ್ಯಾನ ಇದ್ದ ಸ್ಥಳದಲ್ಲಿ ‘ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡ’ ಹಸಿರು ಬೆಳೆಸಲು ಮುಂದಾದಾಗ, ಮಲ್ಲಿಗೇನಹಳ್ಳಿ ಸರ್ವೆ ನಂಬರ್‌ 52ರದಾಖಲೆಗಳಲ್ಲಿ ಕ್ಯಾದಿಗೆಕಟ್ಟೆ ಕೆರೆ ಇರುವುದು ಗಮನ ಸೆಳೆದಿತ್ತು. ಗುರುತೇ ಸಿಗದಂತೆ ನಶಿಸಿ ಹೋಗಿದ್ದ ಪುರಾತನ ಕೆರೆಗೆ ಮರು ಜೀವ ನೀಡಬೇಕು ಎಂದು ಅಂದೇ ನಿರ್ಧರಿಸಿದ್ದರು.

ಅವರ ಈ ಕಾರ್ಯಕ್ಕೆ ಸ್ಫೂರ್ತಿಯಾದವರು ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪ, ಸುತ್ತಮುತ್ತಲ ಗ್ರಾಮಗಳ ಪರಿಸರಾಸಕ್ತ ತಂಡ. ಅಲ್ಲಿನ ಸಾರಾ ಸಂಸ್ಥೆಯ ಏಸು ಪ್ರಕಾಶ್ ನೇತೃತ್ವದಲ್ಲಿ ಗ್ರಾಮಸ್ಥರೇ ಶ್ರಮದಾನದ ಮೂಲಕ ಐದು ಕೆರೆಗಳಿಗೆ ಮರುಜೀವ ನೀಡಿದ್ದರು. ಅದೇ ರೀತಿ ಇಲ್ಲಿನ ಕ್ಯಾದಿಗೆಕಟ್ಟೆ ಕೆರೆಗೂ ಮರುಜೀವ ನೀಡಲು ನಿರ್ಧರಿಸಿದರು.

ಸಾರಾ ಸಂಸ್ಥೆಯು ಯೋಜನೆಯ ರೂಪುರೇಷೆ ಸಿದ್ಧಪಡಿಸಿತು. ತಂಡ ಸಿದ್ಧವಾಯಿತು. ಇದೇ ವರ್ಷ ಏ.30ರಂದು ಕೆರೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಒಂದು ಹಿಟಾಚಿ, ಎರಡು ಟಿಪ್ಪರ್ ಹಾಗೂ ತಾವೇ ಕೈಯಿಂದ ಹಾಕಿದ ಕೆಲವು ಸಾವಿರ ರೂಪಾಯಿ ಇಟ್ಟುಕೊಂಡು ಆರಂಭವಾದ ಕೆಲಸಕ್ಕೆ ನಂತರ ಹಲವು ದಾನಿಗಳು ನೆರವಾದರು. ಲಾಕ್‌ಡೌನ್‌ ಅಡತಡೆ, ಅಕಾಲಿಕ ಮಳೆಯ ಮಧ್ಯೆಯೂ ತಿಂಗಳ ಒಳಗೆ ಗುರಿ ಸಾಧಿಸುವಲ್ಲಿ ತಂಡ ಸಫಲತೆ ಕಂಡಿತು.

ಎರಡು ಎಕರೆ ವ್ಯಾಪ್ತಿಯ ಕೆರೆಯನ್ನು ಕಲ್ಯಾಣಿ ರೂಪದಲ್ಲಿ ನಿರ್ಮಿಸಲಾಗಿದೆ.10 ಅಡಿ ಆಳ ಹೂಳು ತೆಗೆದು ಸುತ್ತಲೂ ಕಟ್ಟೆ ಕಟ್ಟಲಾಗಿದೆ. ಆರು ಅಡಿಯವರೆಗೆ ನೀರು ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. ಸುತ್ತಲೂ ನಡಿಗೆ ಪಥ, ಅಪರೂಪದ ಸಸಿಗಳನ್ನು ನೆಡುವ ಕಾರ್ಯ ಬಾಕಿ ಇದೆ. ಜೌಗು ನೆಲಕ್ಕೆ ಸಾಕಷ್ಟು ಮಣ್ಣು ಹಾಕಲಾಗಿದೆ. ಕೆಲಸ ಮುಗಿಯುವ ಮೊದಲೇ ಆರಂಭವಾದ ಮುಂಗಾರುಪೂರ್ವ ಮಳೆ ಕೆರೆಗೆ ನೀರು ತುಂಬಿಸಿ, ಕಂಗೊಳಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ವಾಜಪೇಯಿ ಬಡಾವಣೆಯಲ್ಲಿ ನಿರ್ಮಾಣವಾಗುವ ಎಲ್ಲ ಮನೆಗಳ ಚಾವಣಿಯ ಮಳೆ ನೀರು ಪೈಪುಗಳ ಮೂಲಕ ನೇರವಾಗಿ ಕೆರೆ ಸೇರಿಸುವ ಗುರಿ ಹೊಂದಲಾಗಿದೆ.

‘ಕೆರೆಗಳು ಪರಿಸರದ ಜೀವಕೋಶಗಳು. ಅವುಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈಗಾಗಲೇ ಆರು ಕೆರೆಗಳಿಗೆ ಮರು ಜೀವ ನೀಡಿದ್ದೇವೆ’ ಎನ್ನುತ್ತಾರೆ ಸಾರಾ ಸಂಸ್ತೆಯ ಏಸು ಪ್ರಕಾಶ್.

‘ಕೆರೆಯಲ್ಲಿ ಎರಡು ಕೋಟಿ ಲೀಟರ್ ನೀರು ಸಂಗ್ರಹಿಸಲಾಗುವುದು. ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲೂ ನೀರು ದೊರಯುತ್ತದೆ. ಈ ಪ್ರದೇಶವು ಮೋಹಕ ಹಸಿರು ತಾಣವಾಗಿದೆ. ಬಡಾವಣೆಯ ತಾಪಮಾನ ಕಡಿಮೆಯಾಗಲಿದೆ’ ಎಂದು ಪರಿಸರತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

***

ಹಲವರು ಸೇರಿ ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡ ರಚಿಸಿಕೊಂಡು ಕೆರೆ ಪುನರುಜ್ಜೀವನಕ್ಕೆ ಶ್ರಮಿಸಿದ್ದೇವೆ. ಈ ಕೆರೆ ನಗರದಲ್ಲಿ ಈಗಾಗಲೇ ಕಣ್ಮರೆಯಾಗಿರುವ ಹಲವು ಕೆರೆಗಳ ಉಳಿವಿಗೆ ಮುನ್ನುಡಿ ಬರೆದಿದೆ

-ತ್ಯಾಗರಾಜ ಮಿತ್ಯಾಂತ, ಸದಸ್ಯ, ನಮ್ಮ ಶಿವಮೊಗ್ಗ ಪರಿಸರಾಸಕ್ತ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT