ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಶಿಕ್ಷಣ ಸಂಸ್ಥೆಗೂ ಸ್ವಾಯತ್ತತೆ, ವಿಕೇಂದ್ರೀಕರಣ

ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಸಚಿವ ಸಿ.ಎಸ್‌.ಅಶ್ವತ್ಥ ನಾರಾಯಣ ಅಭಿಮತ
Last Updated 6 ಅಕ್ಟೋಬರ್ 2021, 13:48 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಸ್ವಾಯತ್ತತೆಯತ್ತ ಸಾಗಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಲಿದೆ. ಸರ್ಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎಸ್‌.ಅಶ್ವತ್ಥ ನಾರಾಯಣ ಹೇಳಿದರು.

ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ–2020 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಎನ್ನುವುದು ಸಂಸ್ಥೆ ಕಟ್ಟಿದ ಸುಂದರ ಕಟ್ಟಡಳಿಂದ ನಿರ್ಧಾರವಾಗುವುದಿಲ್ಲ. ಶಿಕ್ಷಣದ ಗುಣಮಟ್ಟವೇ ಪ್ರಧಾನವಾಗಬೇಕು. ಬರಿ ಸಾಮ್ರಾಜ್ಯ ಕಟ್ಟಿದರೆ ಸಾಲದು. ಸೂಕ್ತ ಗುರಿ ಇಟ್ಟು ಕೊಳ್ಳಬೇಕು. ಶಿಕ್ಷಣ ಲಾಭದಾಯಕವಾಗಬಾರದು.ಸರ್ಕಾರಿ ಸಂಸ್ಥೆಗಳ ಗುಣಮಟ್ಟ ಖಾಸಗಿ ಶಾಲೆಗಳಿಗಿಂತ ಕಡಿಮೆ ಇರಬಾರದು. ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಸಮಾಜದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ. ಉದ್ಯೋಗಕಷ್ಟೆ ಶಿಕ್ಷಣವಲ್ಲ‌. ಪ್ರಗತಿಗೆ ಪೂರಕ. ವಿಶ್ವದ ಜತೆ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಇಳಿಯಲು ಗುಣಮಟ್ಟವೇ ಮಾನದಂಡವಾಗಬೇಕಿದೆ. ಅದಕ್ಕಾಗಿಯೇ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. ನಿರ್ಣಯ ಸರ್ಕಾರದ್ದಾದರೂ, ಅನುಷ್ಠಾನದ ಹೊಣೆ ಶಿಕ್ಷಕ ಸಮುದಾಯದ ಮೇಲಿದೆ ಎಂದು ವಿಶ್ಲೇಷಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಕ್ಷೇತ್ರದ ಲೋಪದೋಷಗಳನ್ನು ಸರಿಪಡಿಸಿ ಜಾಗತಿಕಮಟ್ಟದ ವಿದ್ಯಾರ್ಥಿಕೇಂದ್ರಿತ ಶಿಕ್ಷಣ ಒದಗಿಸುತ್ತದೆ. ಜಗತ್ತಿನ ಶ್ರೇಷ್ಠ ಶೈಕ್ಷಣಿಕ ಸಂಸ್ಥೆಗಳ ಅತ್ಯುತ್ತಮ ಶಿಕ್ಷಣ ವಿಧಾನ ಅಳವಡಿಸಿಕೊಳ್ಳಲಾಗುತ್ತಿದೆ. ಶಿಕ್ಷಣದ ಮೂಲಕ ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಜಾಗತಿಕ ಮಟ್ಟದ ಶಿಕ್ಷಣ ಮತ್ತು ಕೌಶಲ ದೊರಕಲಿದೆ ಎಂದರು.

ನೂತನ ಶಿಕ್ಷಣ ನೀತಿ ಶಿಕ್ಷಣ ಸಂಸ್ಥೆಗಳಿಗೆ ಜವಾಬ್ದಾರಿಯೊಂದಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು. ಮೂಲ ಸೌಕರ್ಯಗಳು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ, ಅಹವಾಲುಗಳನ್ನು ಸರಿಯಾಗಿ ಆಲಿಸಲು ವೇದಿಕೆ ದೊರೆಯಲಿದೆ. ಪ್ರತಿಯೊಂದು ಸಂಸ್ಥೆಗಳು ಪಡೆಯುವ ಶುಲ್ಕದ ವಿವರಗಳೂ ಸಾರ್ವಜನಿಕವಾಗಿ ಲಭ್ಯವಾಗಲಿವೆ ಎಂದು ವಿವರಿಸಿದರು.

ಕೊನೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಹೊಸ ಶಿಕ್ಷಣ ನೀತಿ ತರಾತುರಿಯಲ್ಲಿ ಅನುಷ್ಠಾನಗೊಳಿಸುತ್ತಿಲ್ಲ. ಏಳು ವರ್ಷಗಳ ಸತತ ಪರಿಶ್ರಮದ ಬಳಿಕ ನೂತನ ಶಿಕ್ಷಣ ನೀತಿ ರೂಪುಸಲಾಗಿದೆ. ಒಂದು ವರ್ಷದ ಪೂರ್ವತಯಾರಿಯ ನಂತರ ಅನುಷ್ಠನಗೊಳಿಸಲಾಗುತ್ತಿದೆ. ಮುಂದಿನ 10 ವರ್ಷಗಳ ಅವಧಿಯಲ್ಲಿ ಹೊಸ ಶಿಕ್ಷಣ ನೀತಿಯ ಪರಿಣಾಮ ಗುರುತಿಸಲು ಸಾಧ್ಯವಾಗಲಿದೆ. ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತಂದ ಪ್ರಥಮ ರಾಜ್ಯ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಸುಪ್ತ ಪ್ರತಿಭೆ ಗುರುತಿಸಿ, ವಿಕಸನಕ್ಕೆ ಅವಕಾಶ ಕಲ್ಪಿಸಲು ನೂತನ ಶಿಕ್ಷಣ ನೀತಿಯಿಂದ ಸಾಧ್ಯ. ಶಿಕ್ಷಣ ಕೌಶಲ ಕಲಿಸುವುದರ ಜತೆಗೆ ನೈತಿಕತೆಗೂ ಒತ್ತು ನೀಡಲಿದೆ ಎಂದರು.

ರಾಜ್ಯ ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಸಚಿವೆ ಜಿ.ಅನುರಾಧಾ, ಪರಿಕ್ಷಾಂಗ ಕುಲಸಚಿವ ಪ್ರೊ.ಸಿ.ಎಂ.ತ್ಯಾಗರಾಜ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ, ಪ್ರಾಂಶುಪಾಲ ಡಾ.ಧನಂಜಯ್, ಸಿಂಟಕೇಟ್‌ ಸದಸ್ಯರಾದ ಬಳ್ಳೆಕೆರೆ ಸಂತೋಷ್‌, ಸುರೇಶ್ ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT