ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಬೆಳೆ ಪ್ರೋತ್ಸಾಹಿಸಿ: ಬಿ.ಎಸ್‌. ಯಡಿಯೂರಪ್ಪ ಸಲಹೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಲಹೆ
Last Updated 14 ಫೆಬ್ರುವರಿ 2021, 15:58 IST
ಅಕ್ಷರ ಗಾತ್ರ

ಶಿಕಾರಿಪುರ:ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಲಹೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ರೈತರು ಒಂದೇ ಬೆಳೆಯನ್ನು ಅವಲಂಬಿಸದಂತೆ ಮಿಶ್ರಬೆಳೆ ಬೆಳೆಯಲು ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು. ಅಡಿಕೆ, ತೆಂಗು, ಮಾವು ಹಾಗೂ ಇತರೆ ತೋಟಗಾರಿಕೆ ಬೆಳೆಯಲು ಪ್ರೋತ್ಸಾಹ ನೀಡಬೇಕು. ಬೇಸಿಗೆ ಬೆಳೆ ಬೆಳೆಯಲು ಕೆರೆಗಳು ಹಾಗೂ ಜಲಾಶಯಗಳಲ್ಲಿರುವ ನೀರನ್ನು ಮಿತವ್ಯಯವಾಗಿ ಬಳಸಲು ತಿಳಿಸಬೇಕು. ತಾಲ್ಲೂಕಿನ ಕೆರೆಗಳಲ್ಲಿ ನೀರು ತುಂಬಿದ್ದು, ಕೆರೆ ಹೂಳೆತ್ತುವ ಕಾರ್ಯವನ್ನು ಮುಂದೂಡಬೇಕು. ಹೂಳೆತ್ತಲು ಬಿಡುಗಡೆಯಾಗಿರುವ ಅನುದಾನವನ್ನು ಸದ್ಯ ಬಳಸಿಕೊಳ್ಳಬಾರದು ಎಂದು ಸೂಚಿಸಿದರು.

‘ಕಾನೂನು ಚೌಕಟ್ಟಿನಲ್ಲಿ ಮರಳು ಜಲ್ಲಿ ಸಾಗಾಣಿಕೆಗೆ ಮಾಡಲು ಅಧಿಕಾರಿಗಳು ಅಡ್ಡಿ ಮಾಡಬಾರದು. ಕಾನೂನು ಬಾಹಿರವಾಗಿ ನಡೆಯುತ್ತಿರುವ ಸಾಗಾಣಿಕೆಗೆ ಮಾತ್ರ ತಡೆಯಿರಿ. ಕಳಪೆ ಕಾಮಗಾರಿ ನಡೆಸದೇ ಗುಣಮಟ್ಟದ ಕಾಮಗಾರಿ ನಡೆಸಲು ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ತಾಕೀತು ಮಾಡಿದ ಅವರು, ‘ಅಕ್ಕಮಹಾದೇವಿ ಜನ್ಮಸ್ಥಳ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ, ‘ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡಲಾಗಿದೆ. ಆದರೂ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ತಾಲ್ಲೂಕಿಗೆ ಹಿನ್ನಡೆಯಾಗುತ್ತಿದೆ. ಬಡ್ಡಿ ವ್ಯವಹಾರ ಮಾಡಿಕೊಂಡು ಓಡಾಡುತ್ತಿರುವ ಕೆಲವು ಶಿಕ್ಷಕರಿಗೆ ಕಡಿವಾಣ ಹಾಕುವ ಮೂಲಕ ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಮಹೇಶ್‌ ಅವರಿಗೆ ಸೂಚಿಸಿದರು.

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಲು ತಹಶೀಲ್ದಾರ್‌ ಮುಂದಾಗಬೇಕು. ನಕಲಿ ಪಹಣಿ ಪಡೆದು ವ್ಯಕ್ತಿಯೊಬ್ಬ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾನೆ. ನಕಲಿ ಪಹಣಿ ಮಾಡಿದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಬೇಕು. ಈ ರೀತಿ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಎಂ.ಪಿ. ಕವಿರಾಜ್‌, ‘ನಕಲಿ ಪಹಣಿ ಪಡೆದು ಬ್ಯಾಂಕ್‌ಗಳಲ್ಲಿ ಸಾಲ ಪಡೆದ ವ್ಯಕ್ತಿ ವಿರುದ್ಧ ಹಾಗೂ ನಕಲಿ ಪಹಣಿ ಸೃಷ್ಟಿಸಿದ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ’ ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್‌. ಗುರುಮೂರ್ತಿ, ‘2019ರಲ್ಲಿ ಮರಣ ಹೊಂದಿದ ಹೋತನಕಟ್ಟೆ ಗ್ರಾಮದ ಕಾರ್ಮಿಕ ಕುಟುಂಬಕ್ಕೆ ₹ 50 ಸಾವಿರ ಪರಿಹಾರ ಧನ ವಿತರಣೆಯಾಗಿಲ್ಲ. ಶೀಘ್ರದಲ್ಲಿ ಪರಿಹಾರ ಧನ ವಿತರಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಲ್ಲವರು ಕಾರ್ಮಿಕ ಕಾರ್ಡ್‌ ಪಡೆಯುತ್ತಿದ್ದು, ಈ ಅಕ್ರಮವನ್ನು ತಡೆಗಟ್ಟಲು ಅಧಿಕಾರಿಗಳು ಮುಂದಾಗಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎನ್‌. ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಹನುಮಂತಪ್ಪ, ಸದಸ್ಯರಾದ ಮಮತಾಸಾಲಿ ಗದಿಗೆಪ್ಪ, ಅರುಂಧತಿ ರಾಜೇಶ್,‌ ನರಸಿಂಗನಾಯ್ಕ, ಅಕ್ಷತಾ ಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್‌ನಾಯ್ಕ, ಉಪಾಧ್ಯಕ್ಷೆ ಶಿಲ್ಪಾ, ಇಒ ಪರಮೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT