ಶುಕ್ರವಾರ, ಮೇ 20, 2022
20 °C
ಬ್ರಾಸಂ ಸಂಸ್ಥೆಯ ರಜತ ಮಹೋತ್ಸವ ಉದ್ಘಾಟನೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ

ಪ್ರತಿಯೊಂದು ಸಮುದಾಯವೂ ಸಂಘಟಿತವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ‘ಜ್ಞಾನ ಸಂಗ್ರಹದ ಅಭಿರುಚಿ ಬೆಳೆಸುವ ದೃಷ್ಟಿಕೋನ ನಮ್ಮದಾಗಬೇಕು. ಆಗ ಮಾತ್ರ ಭವಿಷ್ಯದ ಬಗ್ಗೆ ಆಶಾಭಾವ ಹೊಂದಲು ಸಾಧ್ಯ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶನಿವಾರ ನಡೆದ ಬ್ರಾಸಂ ಸಂಸ್ಥೆಯ ರಜತ ಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜೀವನದ ದೃಷ್ಟಿಕೋನದ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವುದು ಮೌಲ್ಯಗಳ ಅಧಃಪತನಕ್ಕೆ ಕಾರಣವಾಗಿದೆ. ಜ್ಞಾನದ ದಾಹ ಹೆಚ್ಚಿಸಿಕೊಳ್ಳಲು ಪ್ರಯತ್ನಪೂರ್ವಕ ಹೆಜ್ಜೆ ಇಡುವುದು ಆರೋಗ್ಯವಂತ ಸಮಾಜದ ಲಕ್ಷಣ’ ಎಂದರು.

‘ಸಮಾಜದ ಪ್ರತಿಯೊಂದು ಸಮುದಾಯವೂ ಸಂಘಟಿತವಾಗ
ಬೇಕಿದೆ. ಸಂಘಟಿತರಾಗುವುದು ಎಂದರೆ ಮತ್ತೊಬ್ಬರನ್ನು ದ್ವೇಷಿಸುವುದು ಅಥವಾ ಮತ್ತೊಬ್ಬರಲ್ಲಿ ಕೀಳರಿಮೆ ಬೆಳೆಸುವುದು ಎಂದರ್ಥವಲ್ಲ. ಪರಸ್ಪರ ಪ್ರೀತಿ, ವಿಶ್ವಾಸದ ಕೊಂಡಿ ಬೆಳೆಸಲು ಸಂಘಟನೆಯ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.

‘ಸಾರ್ವಜನಿಕ ಜೀವನದಲ್ಲಿ ಇರುವವರು ಸೇರಿದಂತೆ ಪ್ರತಿಯೊಬ್ಬರೂ ಸಾಮಾಜಿಕ, ರಾಷ್ಟ್ರೀಯ ಜವಾಬ್ದಾರಿಗಳ ಕುರಿತು ಎಚ್ಚರಿಸುವ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ನಮ್ಮ ಕೆಲಸ–ಕಾರ್ಯಗಳಿಗೆ ಸೀಮಿತ ಚೌಕಟ್ಟು ನಿರ್ಮಿಸಿಕೊಂಡರೆ ಯಾಂತ್ರಿಕ ಮನಸ್ಥಿತಿ ನಮ್ಮದಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬ್ರಾಸಂ ಸಂಸ್ಥೆ 25 ವರ್ಷಗಳ ಅವಧಿಯಲ್ಲಿ ಈ ಭಾಗದ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮದ ಕೇಂದ್ರವಾಗಿ ಬೆಳೆದಿರುವುದು ವಿಶಿಷ್ಟ ಸಂಗತಿಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಗಳಿಗೆ ವಲಸೆ ಹೋಗಿರುವುದರಿಂದ ಇಂತಹ ಸಂಸ್ಥೆಗಳನ್ನು ಹೇಗೆ ಉಳಿಸಿ
ಕೊಳ್ಳಬೇಕು’ ಎಂಬ ಸವಾಲು ನಮ್ಮ ಎದುರು ಇದೆ. ಬ್ರಾಸಂ ಸಂಸ್ಥೆಯ ಶತಮಾನೋತ್ಸವದ ಆಚರಣೆಗೆ ತಕ್ಕ ಕಾರ್ಯಯೋಜನೆಯನ್ನು ಈಗಿನಿಂದಲೇ ರೂಪಿಸಬೇಕಿದೆ’ ಎಂದರು.

‘ನಾವು ಹವ್ಯಕರು’ ಕೃತಿಯನ್ನು ಬಿಡುಗಡೆ ಮಾಡಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಷಿ, ‘ತಾವೂ ಬೆಳೆಯುತ್ತ ಇತರ ಸಮುದಾಯವನ್ನು ಬೆಳೆಸುವ ಮನಸ್ಥಿತಿ
ಯನ್ನು ಬ್ರಾಹ್ಮಣ ಸಮುದಾಯ ಯಾವತ್ತೂ ಹೊಂದಿದೆ. ಆಧುನಿಕತೆಯ ನಡುವೆಯೂ ಸಂಪ್ರದಾಯ
ಶೀಲತೆಯನ್ನು ಬಿಡದೇ ಇರುವುದು ಈ ಸಮುದಾಯದ ವಿಶಿಷ್ಟತೆ’ ಎಂದು ಹೇಳಿದರು.

‘ನಾವು ಹವ್ಯಕರು’ ಕೃತಿಯ ಸಂಪಾದಕ ಡಾ.ಜಿ.ಎಸ್. ಭಟ್, ‘ನಾವು ಹವ್ಯಕರು ಎನ್ನುವುದರಲ್ಲಿ ಅಹಂಕಾರವಿಲ್ಲ. ಯಾವುದೇ ಒಂದು ಜನಾಂಗ, ಉಪ ಭಾಷೆಯ ಕುರಿತ ಅಧ್ಯಯನ ಒಟ್ಟೂ ಸಮಾಜದ ಬೆಳವಣಿಗೆಗೆ ಪೂರಕವಾದ ಸಂಗತಿ ಎಂಬ ಎಚ್ಚರದೊಂದಿಗೆ ಕೃತಿಯನ್ನು ರೂಪಿಸಲಾಗಿದೆ’ ಎಂದರು.

‘ಹವ್ಯಕತನವನ್ನು ಇಟ್ಟುಕೊಂಡೇ ಹವ್ಯಕರು ಹೇಗೆ ಪರಿವರ್ತನೆಗೆ ಒಳಗಾಗಿದ್ದಾರೆ ಎಂಬುದರ ಅವಲೋಕನ ಕೃತಿಯಲ್ಲಿದೆ. ಹವ್ಯಕರು ಲೌಕಿಕ-ಅಲೌಕಿಕ, ವೃತ್ತಿ-ಪ್ರವೃತ್ತಿ, ಸನಾತನತೆ–ಆಧುನಿಕತೆ ಇವುಗಳ ನಡುವೆ ಸಮತೋಲನ ಸಾಧಿಸಿರುವ ಬಗೆ ಕೂಡ ಕೃತಿಯಲ್ಲಿ ವ್ಯಕ್ತವಾಗಿದೆ. ಜೊತೆಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕುರಿತ ವಿವರಗಳಿವೆ’ ಎಂದು
ತಿಳಿಸಿದರು.

ಅಪರ ಕರ್ಮ ಕಾರ್ಯದಲ್ಲಿ ತೊಡಗಿರುವ 23 ವಿಪ್ರರನ್ನು ಸನ್ಮಾನಿಸಲಾಯಿತು. ಬ್ರಾಸಂ ಅಧ್ಯಕ್ಷ ಅ.ರಾ. ಲಂಬೋದರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ವಿ. ರವೀಂದ್ರನಾಥ್, ಖಜಾಂಚಿ ಎಂ.ಟಿ. ಪರಮೇಶ್ವರ್ ಇದ್ದರು.

ವಸುಧಾ ಶರ್ಮ ಪ್ರಾರ್ಥಿಸಿದರು. ಎಚ್.ಎಸ್. ಮಂಜಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಕಟ್ಟಿನಕೆರೆ
ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು