ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸಜ್ಜು

ಜಿಲ್ಲೆಯಲ್ಲಿ 2,000ಕ್ಕೂ ಹೆಚ್ಚು ಕಿ.ಮೀ. ವ್ಯಾಪ್ತಿಯಲ್ಲಿ ಬೆಂಕಿ ನಂದಕ ಗೆರೆ ರಚನೆ
ನಾಗರಾಜ ಹುಲಿಮನೆ
Published 16 ಫೆಬ್ರುವರಿ 2024, 5:36 IST
Last Updated 16 ಫೆಬ್ರುವರಿ 2024, 5:36 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನ ಅರಣ್ಯ ಪ್ರದೇಶದ ಒಡಲು ಒಣಗಿದೆ. ಆದ್ದರಿಂದ, ಕಾಡ್ಗಿಚ್ಚಿನಿಂದ ವನ್ಯ ಸಂಪತ್ತಿನ ರಕ್ಷಣಾ ಜವಾಬ್ದಾರಿ ಅರಣ್ಯ ಇಲಾಖೆಯ ಮೇಲೆ ಹೆಚ್ಚಾಗಿದೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಿಸಿಲ ಝಳಕ್ಕೆ ಕಾಡೊಳಗೆ ಒಣಗಿದ ಎಲೆಗಳ ಪ್ರಮಾಣ ಹೆಚ್ಚಿದೆ. ಆದ್ದರಿಂದ ಕಾಡಿಗೆ ಬೆಂಕಿ ತಗುಲುವ ಸಾಧ್ಯತೆ ದುಪ್ಪಟ್ಟಿದೆ.

ಬೇಸಿಗೆ ಬಂತೆಂದರೆ ಮಲೆನಾಡಿನ ಒಡಲನ್ನು ಸುಡುವ ಕಾಡ್ಗಿಚ್ಚನ್ನು ಆರಿಸುವ ದೊಡ್ಡ ಜವಬ್ದಾರಿ ಅರಣ್ಯ ಇಲಾಖೆ ಹೊತ್ತಿದೆ. ಆದರೂ, ಕಿಡಿಗೇಡಿಗಳ ಕೃತ್ಯದಿಂದಾಗಿ ನೂರಾರು ಎಕರೆ ಕಾಡು ಬೆಂಕಿ ಕಿಡಿಗೆ ಆಹುತಿ ಆಗುತ್ತಿದೆ. ಇದನ್ನು ಅರಿತ ಅರಣ್ಯ ಇಲಾಖೆ ಬೇಸಿಗೆಗೂ ಮುನ್ನವೇ ಬೆಂಕಿ ನಂದಕ ಗೆರೆಗಳನ್ನು ರಚಿಸುವ ಕಾರ್ಯದಲ್ಲಿ ತೊಡಗಿದೆ.

ಪ್ರತಿ ವರ್ಷ ಶೆಟ್ಟಿಹಳ್ಳಿ ಅಭಯಾರಣ್ಯ ವಲಯದ ಪ್ರದೇಶ, ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆ, ಮಂಡಗದ್ದೆ ವ್ಯಾಪ್ತಿಯ ಬಸವನಗದ್ದೆ, ಕಳ್ಳಿಗದ್ದೆ, ಕೊಂಬಿನಕೈ, ಸಿಂಧುವಾಡಿ, ಸಕ್ರೆಬೈಲು, ಸಿರಿಗೆರೆ, ತಮ್ಮಡಿಹಳ್ಳಿ ಅರಣ್ಯ ಪ್ರದೇಶ ಸೇರಿ ತಾಲ್ಲೂಕಿನ ಕುಂಸಿ ಹೂಬಳಿಯ ಚೋರಡಿ ವಲಯ ಅರಣ್ಯ ಪ್ರದೇಶದ ಕರಡಿ ಬೆಟ್ಟ, ಕೊರಗಿ ವ್ಯಾಪ್ತಿಯ ನೂರಾರು ಎಕರೆ ಸೂಕ್ಷ್ಮ ಅರಣ್ಯ ಪ್ರದೇಶ ಕಿಡಿಗೇಡಿಗಳ ಕೃತ್ಯದಿಂದ ಅಕ್ಷರಶಃ ಬೆಂಕಿಗೆ ಆಹುತಿ ಆಗುತ್ತಿದೆ. ಆದ್ದರಿಂದ ಇಲ್ಲಿ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

‘ಜಿಲ್ಲೆಯಲ್ಲಿ 2,000ಕ್ಕೂ ಹೆಚ್ಚು ಕಿ.ಮೀ. ವ್ಯಾಪ್ತಿಯಲ್ಲಿ ಬೆಂಕಿ ನಂದಕ ಗೆರೆಗಳನ್ನು (ಫೈರ್‌ಲೈನ್‌) ರಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಣಿಡುವುದರ ಜೊತೆಗೆ ಬೇಸಿಗೆಯಲ್ಲಿ ಜನರಿಗೆ ಅನವಶ್ಯಕವಾಗಿ ಅರಣ್ಯ ಪ್ರವೇಶ ನಿರ್ಬಂಧಿಸಿದೆ. ಬೆಂಕಿ ಪೊಟ್ಟಣ, ಲೈಟರ್‌ನಂತಹ ವಸ್ತುಗಳು ಅರಣ್ಯದೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ’ ಎಂದು ಸಿಸಿಎಫ್ ಕೆ.ಟಿ.ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಪ್ರತಿ ವಲಯ ಅರಣ್ಯಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಬೆಂಕಿ ಆರಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಕಾಡಿಗೆ ಬೆಂಕಿ ಹಚ್ಚುವ ಕಿಡಿಕೇಡಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ದುರ್ಬೀನು ಹಾಗೂ ಫೈರ್ ಅಲರ್ಟ್ ತಂತ್ರಜ್ಞಾನ ಬಳಸಿಕೊಂಡು ಇಲಾಖೆ ಬೆಂಕಿ ಆರಿಸಲು ಸನ್ನದ್ಧವಾಗಿದೆ’ ಎಂದು ಮಾಹಿತಿ ನೀಡಿದರು. 

‘ಗ್ರಾಮಾಂತರ ವ್ಯಾಪ್ತಿಯಲ್ಲಿ ಬೀದಿ ನಾಟಕ, ಜಾಗೃತಿ ಸಭೆ ಹಾಗೂ ಬಿತ್ತಿ ಪತ್ರ ಹಂಚುವ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ರೈತರು ಜಮೀನಿನಲ್ಲಿ ಕಸಕಡ್ಡಿಗಳನ್ನು ಸುಡುವಾಗ ಹೆಚ್ಚು ಗಾಳಿ ಇಲ್ಲದಿರುವ ಸಮಯದಲ್ಲಿ ಸುಡುವುದು ಮತ್ತು ಬೆಂಕಿ ಹರಡದಂತೆ ಎಚ್ಚರಿಕೆಯಿಂದ ಇರಬೇಕು ಎಂಬ ಸೂಚನೆ ನೀಡಲಾಗಿದೆ’ ಎಂದು ಚೋರಡಿ ವಲಯ ಅರಣ್ಯಧಿಕಾರಿ ಜಿ.ಎಸ್.ರವಿಕುಮಾರ್ ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳು ಹಾಗೂ ಸಾರ್ವಜನಿಕರು ಕಾಡನ್ನು ಸಂಪರ್ಕಿಸುವ ರಸ್ತೆ ಮಾರ್ಗ ಮತ್ತು ಸೂಕ್ಷ್ಮ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಒಣಗಿದ ಎಲೆಗಳನ್ನು ಗುಡಿಸಿ ಬೆಂಕಿ ತಡೆಗ‌ಟ್ಟಲು ಬೆಂಕಿ ರೇಖೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಹೊಸನಗರ ವ್ಯಾಪ್ತಿಯ ಗಸ್ತು ಅರಣ್ಯ ಪಾಲಕ ಎಸ್.ಶಶಿಕುಮಾರ್ ತಿಳಿಸಿದರು. 

ಜಿಲ್ಲೆಯಲ್ಲಿ ಹೊಸದಾಗಿ 125 ಫೈರ್ ವಾಚರ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಕಳೆದ ಅವಧಿಗಿಂತ ಈ ಭಾರಿ ಬೆಂಕಿ ಅವಘಡ ತಪ್ಪಿಸಲು ಹೆಚ್ಚು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೆ.ಟಿ.ಹನುಮಂತಪ್ಪ ಸಿಸಿಎಫ್ ಶಿವಮೊಗ್ಗ

ಜನರಲ್ಲಿ ಮೂಢನಂಬಿಕೆ  ‘ಕಾಡಿಗೆ ಬೆಂಕಿ ಹಚ್ಚುವುದರಿಂದ ಮೇವು ಹುಲುಸಾಗಿ ಬೆಳೆಯುತ್ತದೆ. ಇದರಿಂದ ಜಾನುವಾರುಗಳಿಗೆ ಮೇಯಲು ಅನುಕೂಲ ಆಗುತ್ತದೆ ಎನ್ನುವ ಮೂಢನಂಬಿಕೆ ಜನರಲ್ಲಿ ಮನೆ ಮಾಡಿದೆ’ ಎಂದು ಡಿಸಿಎಫ್ ಕೆ.ಎಂ.ಸಂತೋಷ್ ಕೆಂಚಪ್ಪನರ್ ತಿಳಿಸಿದರು. ‘ಅದೇ ರೀತಿ ಕಾಡಿನಲ್ಲಿ ಗಿಡ–ಗುಂಟೆಗಳು ಬೆಳೆದರೆ ಕಾಡು ಪ್ರಾಣಿಗಳು ಬೀಡು ಬಿಡುತ್ತವೆ. ಇದರಿಂದ ಅವು ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತವೆ. ಜನರು ಕಾಡಿನೊಂದಿಗೆ ಹೆಚ್ಚು ನಂಟು ಹೊಂದಿರುವುದರಿಂದ ಕಾಡಿನಲ್ಲಿ ಹುಳ– ಹುಪ್ಪಟೆಗಳು ಸೇರಿಕೊಂಡು ತೊಂದರೆ ಮಾಡಬಹುದು ಎನ್ನುವ ಭಯದಿಂದ ಕೆಲವರು ಬೆಂಕಿ ಹಚ್ಚಲು ಮುಂದಾಗುತ್ತಾರೆ. ಇದು ತಪ್ಪು; ಹೀಗೆ ಮಾಡಬೇಡಿ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT