ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ದಶಕ ಕಳೆದರೂ ದಲಿತ ಕುಟುಂಬಗಳಿಗಿಲ್ಲ ಭೂಮಿ

ಮಂಜೂರಾದರೂ ಕಂದಾಯ ಇಲಾಖೆ ನಿರ್ಲಕ್ಷ್ಯ: ಆರೋಪ
Last Updated 7 ಜನವರಿ 2022, 4:00 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ನಾಲ್ಕು ದಶಕಗಳ ಹಿಂದೆ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಜೀವನ ಆಧಾರವಾಗಿ ಸರ್ಕಾರ ಮಂಜೂರು ಮಾಡಿದ್ದ ಸಾಗುವಳಿ ಜಮೀನು ದಲಿತ ಕುಟುಂಬಗಳ ಸ್ವಾಧೀನಕ್ಕೆ ಇಂದಿಗೂ ಸಿಕ್ಕಿಲ್ಲ. ಭೂಮಿಯ ಹಕ್ಕು, ಸಾಗುವಳಿ ಚೀಟಿ, ಮಾಲೀಕತ್ವದ ದಾಖಲೆಗಳಿದ್ದರೂ ದಲಿತ ಕುಟುಂಬಗಳಿಗೆ ಜಾಗ ಸಿಗದ ಸ್ಥಿತಿ ಇದೆ.

1970ರ ನಂತರ ಜಾರಿಗೊಂಡ ದರಖಾಸ್ತು ಕಾಯ್ದೆಯಡಿ ಮಂಜೂರಾದ ಸಾಗುವಳಿ ಭೂಮಿ ಬಹುತೇಕ ಬಲಾಢ್ಯರ ಪಾಲಾಗಿದೆ. ದೀರ್ಘಕಾಲದಿಂದ ಶೋಷಣೆಗೆ ತುತ್ತಾದ ಕುಟುಂಬಗಳ ರಕ್ಷಣೆಗಾಗಿ ರೂಪಿಸಿದ್ದ ಕಾನೂನು ಪುಸ್ತಕಕ್ಕೆ ಸೀಮಿತವಾಗಿದೆ. ‘ದೇವರು ಕೊಟ್ಟರು ಪೂಜಾರಿ ಕೊಡ’ ಎನ್ನುವ ಸ್ಥಿತಿ ಇಲ್ಲಿನ ದಲಿತ ಕುಟುಂಬಗಳದ್ದು.

ಅನಕ್ಷರಸ್ಥ, ಅಶಕ್ತರಾದ ದಲಿತ ಕುಟುಂಬಗಳಿಗೆ ಮಂಜೂರಾದ ಜಾಗ ಪ್ರವೇಶಿಸಲು ಸ್ಥಳೀಯ ಬಲಾಢ್ಯರು ಅವಕಾಶ ನೀಡುತ್ತಿಲ್ಲ. ಇದಕ್ಕೆ ಪೂರಕವಾಗಿ ಪ್ರಭಾವಿ ಜನಪ್ರತಿನಿಧಿಗಳು, ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಮಂಜೂರಾದ ಜಮೀನಿನ ದಾಖಲೆಗೆ ಕಂದಾಯ, ಸರ್ವೆ ಇಲಾಖೆಗೆ ಅಲೆದರೂ ಸಿಗದಂತಾಗಿದೆ ಎಂಬುದು ದಲಿತ ಕುಟುಂಬಗಳ ಆರೋಪ.

ಫಲಾನುಭವಿಗಳ ಕೈ ಸೇರದ ಭೂಮಿ: ‘1977ರಲ್ಲಿ ಹಾರೋಗೊಳಿಗೆ ಗ್ರಾಮದ ಸ.ನಂ.83ರಲ್ಲಿ ರಾಗಿಹಕ್ಕಲು, ಗೋರ್‌ಗಲ್‌ ದರಖಾಸ್ತು ಪ್ರದೇಶದಲ್ಲಿ 16 ಕುಟುಂಬಗಳಿಗೆ ತಲಾ 2 ಎಕರೆಯಂತೆ 32 ಎಕರೆ ಭೂ ಮಂಜೂರಾತಿ ನೀಡಲಾಗಿದೆ. ಇವತ್ತಿಗೂ ಈ ಭೂ ಪ್ರದೇಶ ದಲಿತರ ಕೈಗೆ ಸೇರಿಲ್ಲ. ಹಣ, ರಾಜಕೀಯ ಪ್ರಭಾವದಿಂದ ಬಲಾಢ್ಯರು ಜಮೀನು ವಶಪಡಿಸಿಕೊಳ್ಳುವ ಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ. ದಲಿತರನ್ನು ಬೆದರಿಸಿ ಬಲತ್ಕಾರದಿಂದ ಭೂ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ಮನೆ ಕಟ್ಟಿ ದಲಿತ ಕುಟುಂಬಗಳಿಗೆ ಸವಾಲು ಹಾಕುತ್ತಿರುವ ಪ್ರಕರಣಗಳು ಹಲವು ಇವೆ ಎಂದು ದೂರುತ್ತಾರೆ ಹಾರೋಗೊಳಿಗೆ ಗ್ರಾಮದ ಭೂ ವಂಚಿತ ಯಲ್ಲಪ್ಪ.

‘ಹೊಸ ಅಗ್ರಹಾರ ಗ್ರಾಮದ 9 ಕುಟುಂಬಗಳಿಗೆ 18 ಎಕರೆ, ಕಸಬಾ ಹೋಬಳಿ, ಸಾಲೂರು ಗ್ರಾಮದ ಸ.ನಂ. 110 ಮತ್ತು 116/17ರಲ್ಲಿ ಸುಮಾರು 13 ಕುಟುಂಬಗಳಿಗೆ ವಿವಿಧ ವಿಸ್ತೀರ್ಣದಲ್ಲಿ ಭೂ ಮಂಜೂರಾತಿ ನೀಡಲಾಗಿದೆ. ಕಸಬಾ ಹೋಬಳಿ ಶಿರುಪತಿ ಗ್ರಾಮದ ಸ.ನಂ. 11, 12ರಲ್ಲಿ 10 ಕುಟುಂಬಗಳಿಗೆ 34 ಎಕರೆಗೂ ಹೆಚ್ಚು ಪ್ರದೇಶ ಮಂಜೂರು ಮಾಡಲಾಗಿದೆ. ಆದರೆ ಮಂಜೂರಾದ ಪ್ರದೇಶಕ್ಕೆ ಕಾಲಿಡದ ಪರಿಸ್ಥಿತಿ ಎದುರಾಗಿದೆ. ದಲಿತ ಕುಟುಂಬಗಳಿಗೆ ಮಂಜೂರಾದ ಭೂಮಿ ಬಲಾಢ್ಯರ ವಶವಾದ ಮಾಹಿತಿ ಕಂದಾಯ ಇಲಾಖೆಗೆ ಇದ್ದರೂ ಕಾನೂನು ಪ್ರಕಾರ ನ್ಯಾಯ ಸಿಗುತ್ತಿಲ್ಲ’ ಎಂದು ಆರೋಪಿಸುತ್ತಾರೆ ಅವರು.

ಪೂರಕ ದಾಖಲೆ ನಾಶ: ‘1980ರ ನಂತರ ದರಖಾಸ್ತು ಭೂ ಸುಧಾರಣೆ ಕಾಯ್ದೆಯ ಹೆಚ್ಚುವರಿ ಭೂ ಪ್ರದೇಶವನ್ನು ಸರ್ಕಾರ ದಲಿತ ಕುಟುಂಬಗಳಿಗೆ ಮಂಜೂರು ಮಾಡಿದೆ. ಬಲಾಢ್ಯರ ದೌರ್ಜನ್ಯಕ್ಕೆ ಹೆದರಿ ಪ್ರಶ್ನೆಮಾಡದಂತಹ ಪರಿಸ್ಥಿತಿ ಇದೆ. ರಾಜಕೀಯ ಹಸ್ತಕ್ಷೇಪ ಅತಿಯಾಗಿದ್ದು, ಬಲಾಡ್ಯರ ಗುಂಪು ಮೇಲುಗೈ ಸಾಧಿಸುತ್ತಿದೆ. ಕೆಲವು ದಾಖಲೆಗಳು ದಲಿತರ ಕೈಗೆ ಸಿಗದಂತೆ ನಾಶ ಮಾಡಲಾಗಿದೆ’ ಎಂದು ದೂರುತ್ತಾರೆ ಗ್ರಾಮದ ಶ್ರೀಮತಿ.

‘ಭೂ ವಿವಾದದ ಕುರಿತು ನ್ಯಾಯಾಲಯ, ಕಂದಾಯ, ಪೊಲೀಸ್‌ ಇಲಾಖೆಯಲ್ಲಿ ವ್ಯಾಜ್ಯಗಳು ದಾಖಲಾಗಿದೆ. ಹಾರೋಗೊಳಿಗೆ, ಶಿರುಪತಿ, ಸಾಲೂರು, ಯಮರವಳ್ಳಿ, ಗ್ರಾಮದ ವಿವಾದ ಕುರಿತುಕಂದಾಯ ಇಲಾಖೆ ಕಾನೂನುಪಾಲನೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು ದಸಂಸತಾಲ್ಲೂಕು ಸಂಚಾಲಕ ಕೀಗಡಿ ಕೃಷ್ಣಮೂರ್ತಿ.

ತಾಲ್ಲೂಕಿನ ಹಲವು ಗ್ರಾಮದಲ್ಲಿ ಭೂ ಮಂಜೂರಾತಿ ಆಗಿದೆ. ಕೆಲವು ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲ. ಪೂರ್ವ ನಿರ್ಧರಿತವಾಗಿ ಸಮಸ್ಯೆ ಬಗೆಹರಿಸುವುದು ಸಾಧ್ಯವಿಲ್ಲ. ಇದು ಸಿವಿಲ್‌ ವ್ಯಾಜ್ಯವಾಗಿದ್ದು ಪರಿಶೀಲನೆ ಮಾಡಬೇಕಿದೆ.</p>
ಡಾ.ಎಸ್.ಬಿ. ಶ್ರೀಪಾದ್‌, ತಹಶೀಲ್ದಾರ್‌

ಸರ್ಕಾರದ ಉತ್ತಮ ಯೋಜನೆ ಪ್ರಯೋಜನಕ್ಕೆ ಸಿಗುತ್ತಿಲ್ಲ. ದಲಿತ ಕುಟುಂಬಗಳಿಗೆ ಮಂಜೂರಾದ ಭೂಮಿ ಸಿಗಬೇಕು. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಕೀಗಡಿ ಕೃಷ್ಣಮೂರ್ತಿ, ತಾಲ್ಲೂಕು ಸಂಚಾಲಕ, ದಸಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT