ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತೈದೆ ಭಾಗ್ಯದ ಮಹತ್ವ ಬಿಜೆಪಿಗೆ ಗೊತ್ತಿಲ್ಲ: ಗೀತಾ ಶಿವರಾಜಕುಮಾರ್

Published 25 ಏಪ್ರಿಲ್ 2024, 15:41 IST
Last Updated 25 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರು ತಾಳಿ ಕಳೆದುಕೊಳ್ಳಬೇಕು ಎಂಬುದಾಗಿ ಬಿಜೆಪಿಯ ಉನ್ನತ ಸ್ಥಾನದಲ್ಲಿರುವ ನಾಯಕರ ಅಸಂಬದ್ಧ ಹೇಳಿಕೆಯು ಮಾತೆಯರ ಗೌರವಕ್ಕೆ ಚ್ಯುತಿ ತಂದಿದೆ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ ಕುರಿತು ಗಂಟೆಗಟ್ಟಲೆ ಭಾಷಣ ಬಿಗಿಯುವವರಿಗೆ ಹೆಣ್ಣಿನ ಮುತ್ತೈದೆ ಭಾಗ್ಯದ ಮಹತ್ವ ತಿಳಿದಿಲ್ಲವೇ ಎಂದು ಟೀಕಿಸಿದ ಅವರು, ‘ತಾಳಿ, ಕಾಲುಂಗುರ, ಹಣೆಯ ಕುಂಕುಮ ಸೂಕ್ಷ್ಮ ವಿಚಾರಗಳು. ಇದು ಭಾರತೀಯ ಸಂಸ್ಕೃತಿಯ ಪ್ರತೀಕ. ಮತ ಗಳಿಕೆಗಾಗಿ, ಭಾವನಾತ್ಮಕ ನಂಟು ಹೊಂದಿದ ಮಹಿಳೆಯರ ಮಂಗಳಸೂತ್ರದ ಕುರಿತು ಕೀಳುಮಟ್ಟದ ಹೇಳಿಕೆ ನೀಡಿರುವುದು ಆ ಪಕ್ಷದ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ’ ಎಂದು ಟೀಕಿಸಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ‘ಕೆ.ಎಸ್.ಈಶ್ವರಪ್ಪ ಅವರಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಬರಗಾಲದ ಬೇಗೆಯಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಈ ಬಗ್ಗೆ ಎಲ್ಲಿಯೂ ಪ್ರಸ್ಥಾಪಿಸಿದ ಈಶ್ವರಪ್ಪ ಅವರ ಕಣ್ಣಿಗೆ ಗೀತಾ ಶಿವರಾಜಕುಮಾರ್ ಅವರು ಹಣೆಯಲ್ಲಿ ಕುಂಕುಮ ಇಲ್ಲ ಎಂಬ ಸುಳ್ಳು ಸುದ್ದಿಯೇ ಪ್ರಮುಖವಾಗಿದೆ. ಹಿರಿಯ ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಬೇಕೇ ವಿನಾ ಕೀಳು ಮಟ್ಟದ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ’ ಎಂದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಬಿಜೆಪಿಯ ಕೇಂದ್ರ ನಾಯಕರಿಗೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಸೋಲಿನ ಭೀತಿಯಿಂದ ಹೊರ ಬಂದಿಲ್ಲ. ಕೇಂದ್ರದಲ್ಲೂ ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಹಾಗಾಗಿ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಟೀಕೆಗೆ ಮುಂದಾಗಿದ್ದಾರೆ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ, ನಟ ಶಿವರಾಜಕುಮಾರ, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ಶ್ವೇತ ಬಂಡಿ ಮತ್ತು ಇತರರು ಇದ್ದರು.

ಭೇಟಿ: ಗರ್ತಿಕೆರೆಯ ಈಡಿಗ ಮಠಕ್ಕೆ ಗೀತಾ ಶಿವರಾಜಕುಮಾರ್ ಅವರು ಗುರುವಾರ ಭೇಟಿ ನೀಡಿ, ಮಠದ ರೇಣುಕಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT