ತುಮರಿ: ಕೈ ತುಂಬಾ ಹಣ ಸಂಪಾದಿಸಿ ಸ್ವಾವಲಂಬಿ ಜೀವನ ಸಾಗಿಸಬಹುದು ಎಂಬ ಆಸೆಯಿಂದ ಶುಂಠಿ ಬೆಳೆಯಲು ಮುಂದಾದ ರೈತರಿಗೆ ಮತ್ತೆ ಮತ್ತೆ ಸಂಕಷ್ಟ ಎದುರಾಗುತ್ತಿದೆ. ಬೆಳೆಗೆ ಬೆಂಕಿ ರೋಗ, ಕೊಳೆ ರೋಗದ ಜೊತೆಗೆ ಈಗ ಎಲೆಚುಕ್ಕಿ ರೋಗವೂ ಬಾಧಿಸುತ್ತಿದೆ.

‘ಶರಾವತಿ ಹಿನ್ನೀರ ಭಾಗದಲ್ಲಿ ಶುಂಠಿ ಬೆಳೆಯಲ್ಲಿ ಈಗ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಇದರ ಜೊತೆಗೆ ಗಿಡದಲ್ಲಿ ಬಿಳಿ ಸುಳಿ ಕಾಣಿಸಿಕೊಂಡು ಸೊರಗುತ್ತಿವೆ. ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುತ್ತಿವೆ. ಬೆಳೆಯು ಬೆಂಕಿ ರೋಗದಿಂದಲೂ ಬಳಲಿ ಬೆಂಡಾಗುತ್ತಿದೆ’ ಎಂದು ರೈತ ಭದ್ರಾನಾಯ್ಕ ಅಳಲು ತೋಡಿಕೊಳ್ಳುತ್ತಾರೆ.

‘ಎಲೆಚುಕ್ಕಿ ರೋಗ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಎರಡು ತಿಂಗಳಿಂದ ಎಡಬಿಡದೇ ಸುರಿದ ಮಳೆಯಿಂದ ವಿಪರೀತ ತೇವಾಂಶ ಉಂಟಾಗಿದ್ದು, ಹಲವು ರೋಗಗಳು ಉಲ್ಬಣವಾಗುತ್ತಿವೆ’ ಎಂದು ಕರೂರು ಹೋಬಳಿಯ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ರಭಸದ ಮಳೆಯಾಗಿ ಬಿಸಿಲಿನ ವಾತಾವರಣವಿದ್ದಿದ್ದರೆ, ಎಂತಹ ರೋಗವಿದ್ದರೂ ನಾಶವಾಗುತ್ತಿತ್ತು. ಮಳೆ ಜೋರಾಗಿ ಸುರಿದಾಗ ಮಾತ್ರ ಗಿಡಗಳಲ್ಲಿರುವ ಕೀಟಗಳು ನಾಶವಾಗುತ್ತವೆ. ತೇವಾಂಶವಿದ್ದರೆ ಕೀಟಗಳ ಸಂತಾನ ವೃದ್ಧಿಯಾಗಿ ಬೆಳೆ ನಾಶವಾಗುತ್ತದೆ. ಮಳೆ ಮತ್ತು ತೇವಾಂಶ ಇರುವುದರಿಂದ ಯಾವುದೇ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.

ರೋಗ ಲಕ್ಷಣ:

ಶುಂಠಿ ಎಲೆಗಳ ಮೇಲೆ ಕಾಣಿಸಿಕೊಳ್ಳುವ ಕಂದು ಮಿಶ್ರಿತ ಬಿಳಿ ಚುಕ್ಕಿಗಳು ಕ್ರಮೇಣ ಎಲ್ಲಾ ಎಲೆಗಳಿಗೂ ಹಬ್ಬುತ್ತವೆ. ರೋಗಬಾಧಿತ ಶುಂಠಿಯ ದಂಟುಗಳಲ್ಲಿ ಚಿಕ್ಕ ಚಿಕ್ಕ ಕಪ್ಪು ಕಲೆಗಳು ನಿರ್ಮಾಣಗೊಂಡು ಬೆಳವಣಿಗೆ ನಿಯಂತ್ರಿಸುವ ಜೊತೆಗೆ ಬೆಳೆಯನ್ನು ಕೃಶಗೊಳಿಸುತ್ತವೆ. ಮೊದಲು ಕೆಲವು ಗಿಡಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ರೋಗ, ಕೆಲವೇ ದಿನಗಳಲ್ಲಿ ಇಡೀ ಪ್ರದೇಶಕ್ಕೆ ವೇಗವಾಗಿ ಆವರಿಸಿಕೊಂಡು ಬಾಧಿಸುತ್ತದೆ.

ಎಲೆಚುಕ್ಕಿ ರೋಗದಿಂದ ಶುಂಠಿ ಗಿಡ ಮತ್ತು ಕಾಂಡದ ಮೇಲೆ ನೀರಿನಿಂದ ಆವೃತವಾದ ಚಿಕ್ಕ ಗಾತ್ರದ ಮಚ್ಚೆಗಳು ಕಾಣಿಸುತ್ತವೆ. ಎಲೆಗಳು ತಿಳಿ ಹಳದಿ ಬಣ್ಣಗಳಿಂದ ಆವೃತವಾಗಿ ಮಧ್ಯದಲ್ಲಿ ಚಿಕ್ಕ ಗಾತ್ರದ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಬೆಳೆ ಕ್ರಮೇಣ ಒಣಗುತ್ತದೆ. ಬೆಂಕಿ ರೋಗವಿದ್ದರೆ ಗಿಡದ ಎಲೆ ಮತ್ತು ಕಾಂಡಗಳ ಮೇಲೆ ವಜ್ರಾಕಾರ ಅಥವಾ ಕಣ್ಣಿನ ಆಕಾರದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.

ಎಲೆಚುಕ್ಕಿ ರೋಗವು ಶಿಲಿಂಧ್ರದಿಂದ ಬರುತ್ತಿದ್ದು, ಸೂಕ್ಷ್ಮಾಣುಗಳು ಎಲೆಯ ಹರಿತ್ತನ್ನು ಸಂಪೂರ್ಣವಾಗಿ ಭಕ್ಷಿಸಿ, ರಸವನ್ನು ಹೀರುತ್ತವೆ. ಇದರಿಂದ ಬಿಳಿಚಿಕೊಂಡ ಬೆಳೆ, ತನ್ನ ಆಹಾರ ತಯಾರಿಸಲಾಗದೆ ನಿತ್ರಾಣಗೊಂಡು ಒಣಗಲು ಆರಂಭಿಸುತ್ತದೆ. ನಂತರ ಕೊಳೆರೋಗಕ್ಕೆ ತುತ್ತಾಗುತ್ತದೆ. ಸೂಕ್ತ ಸಮಯದಲ್ಲಿ ಔಷಧೋಪಚಾರ ಮಾಡದಿದ್ದರೆ ರೈತರು ನಷ್ಟ ಅನುಭವಿಸುವ ಅಪಾಯವಿದೆ.

‘ರೈತರು ಮುಂಜಾಗ್ರತೆಯಿಂದ ಹತೋಟಿ ಕ್ರಮಗಳನ್ನು ಅನುಸರಿಸಿದಲ್ಲಿ ಶುಂಠಿ ಬೆಳೆ ರಕ್ಷಿಸಿಕೊಳ್ಳಬಹುದು. ಶಿಲಿಂಧ್ರ ನಾಶಕವಾದ ಸಿಒಸಿ 3 ಗ್ರಾಂ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹಾಬಲೇಶ್ವರ ತಿಳಿಸಿದ್ದಾರೆ.

ಸಮಶೀತೋಷ್ಣ ಹವಾಮಾನದಲ್ಲಿ ಶುಂಠಿ ಉತ್ತಮವಾಗಿ ಬರುವ ಬೆಳೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆ ಕಡಿಮೆ ತಾಪಮಾನದಿಂದಾಗಿ ಚುಕ್ಕಿ ರೋಗ ಉಲ್ಬಣಗೊಂಡಿದೆ.
ಮಹಾಬಲೇಶ್ವರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ

ನಷ್ಟದ ಭೀತಿ; ಪರಿಹಾರಕ್ಕೆ ಮನವಿ

‘ಉತ್ತಮ ಬೆಳೆ ಬರುವ ನಿರೀಕ್ಷೆಯಿಂದ ಶುಂಠಿ ನಾಟಿ ಮಾಡಿದ್ದೆವು. ಆದರೆ ಎಲೆಚುಕ್ಕಿ ರೋಗ ನನ್ನ ಜಮೀನಿಗೂ ವ್ಯಾಪಿಸಿದೆ. ಅಂಗಡಿಯವರು ಹೇಳಿದ್ದ ಔಷಧ ತಂದು ಸಿಂಪಡಿಸಿದ್ದು ಇನ್ನೂ ಹತೋಟಿಗೆ ಬಂದಿಲ್ಲ. ನಷ್ಟದ ಭಯ ಶುರುವಾಗಿದೆ. ಬೆಳೆ ಸಂಪೂರ್ಣ ನೆಲಕಚ್ಚಿದೆ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತ ಗಣೇಶ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.