ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಪಂಚಾಯಿತಿ ಚುನಾವಣೆ ಚುನಾವಣೆ ಮತಗಳ ಎಣಿಕೆ

ಸಂಜೆಯ ವೇಳಗೆ 6,973 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Last Updated 29 ಡಿಸೆಂಬರ್ 2020, 12:10 IST
ಅಕ್ಷರ ಗಾತ್ರ

ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.30ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ. ಸಂಜೆಯ ವೇಳೆಗೆ ಫಲತಾಂಶ ಹೊರಬೀಳಲಿದೆ. 6,973 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಚುನಾವಣೆ ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಮತದಾರರ ಬಳಿ ಮತಯಾಚನೆ ಮಾಡಿದ್ದ ಅಭ್ಯರ್ಥಿಗಳು ಈಗ ದೇವರ ಮೊರೆ ಹೋಗಿದ್ದಾರೆ. ಮತ ಎಣಿಕೆಗೆ ಕ್ಷಣಗಣನೆ ಹತ್ತರವಾಗುತ್ತಿದ್ದಂತೆ ಅಭ್ಯರ್ಥಿಗಳ ಎದೆಯಲ್ಲಿ ಈಗ ಅಳುಕು, ಆತಂಕ ಎದುರಾಗಿದೆ. ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.

ಮತ ಲೆಕ್ಕಚಾರಕ್ಕೆ ಇಳಿದ ಅಭ್ಯರ್ಥಿಗಳು:ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಮುಗಿದಿದೆ. ಅಭ್ಯರ್ಥಿಗಳು ಮತದಾರರ ಪಟ್ಟಿ ತಿರುವಿ ಹಾಕುತ್ತಾ ಮತ ಲೆಕ್ಕಚಾರನಡೆಸಿದ್ದಾರೆ. ಜಿಲ್ಲೆಯ 244 ಗ್ರಾಮ ಪಂಚಾಯಿತಿ ಒಟ್ಟು 1192 ಕ್ಷೇತ್ರಗಳಿಂದ 2450 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಕೆಲವು ಅಭ್ಯರ್ಥಿಗಳು ಖಾಸಗಿ ಸಾಲ ಪಡೆದು, ಕೆಲವರು ಜಮೀನು ಗುತ್ತಿಗೆ ನೀಡಿ, ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಪಡೆದು ಚುನಾವಣೆಗೆ ಖರ್ಚು ಮಾಡಿದ್ದಾರೆ.

ಅಧಿಕಾರದ ಗದ್ದುಗೆ ಏರಲು ರಣತಂತ್ರ ರೂಪಿಸಿರುವ ಪಕ್ಷಗಳ ಮುಖಂಡರ ತಲೆಬಿಸಿ ಮಾಡಿಕೊಂಡಿದ್ದಾರೆ. ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಅಡಿಗಲ್ಲು ಎಂಬ ಕಾರಣಕ್ಕೆ ರಾಜಕೀಯ ವಲಯದಲ್ಲೂ ಕುತೂಹಲ ಮನೆ ಮಾಡಿದೆ.

ಏಕಕಾಲಕ್ಕೆ ಮತ ಏಣಿಕೆ

155 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 6,973 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮತ ಏಣಿಕೆ ನಡೆಯಲಿದೆ. ಶಿವಮೊಗ್ಗದ ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು, ಭದ್ರಾವತಿಯ ಸಂಚಿ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು, ತೀರ್ಥಹಳ್ಳಿಯ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ, ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರದದ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಕೇಂದ್ರಗಳಲ್ಲಿ ಮತ ಎಣಿಕೆ ನಡೆಲಿದೆ.

ಶಿವಮೊಗ್ಗದ 40 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯಕ್ಕೆ 70 ಎಣಿಕೆ ಮೇಲ್ವಿಚಾರಕರು ಹಾಗೂ 140 ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಒಟ್ಟು 172 ಚುನಾವಣಾ ಕ್ಷೇತ್ರಗಳ ಮತಎಣಿಕೆಗೆ 70 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಭದ್ರಾವತಿಯ 35 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯಕ್ಕೆ 75 ಎಣಿಕೆ ಮೇಲ್ವಿಚಾರಕರು ಹಾಗೂ 150 ಸಹಾಯಕರನ್ನು ನಿಯೋಜಿಸಲಾಗಿದೆ. ಒಟ್ಟು 154ಚುನಾವಣಾ ಕ್ಷೇತ್ರಗಳ ಮತಎಣಿಕೆಗೆ 75 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ ಉಪ ವಿಭಾಗಾಧಿಕಾರಿ ಪ್ರಕಾಶ್ ಟಿ.ವಿ. ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ತೀರ್ಥಹಳ್ಳಿಯ 38 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯಕ್ಕೆ 57 ಮೇಲ್ವಿಚಾರಕರು ಹಾಗೂ 114 ಸಹಾಯಕರನ್ನು ನಿಯೋಜಿಸಲಾಗಿದೆ. ಒಟ್ಟು 169 ಚುನಾವಣಾ ಕ್ಷೇತ್ರಗಳ ಮತಎಣಿಕೆಗೆ 57 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ ಅರಣ್ಯ ವ್ಯವಸ್ಥಾಪನಾಧಿಕಾರಿ ನಫೀಸಾ ಬೇಗಂ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಸಾಗರದ 35 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯಕ್ಕೆ 66 ಮೇಲ್ವಿಚಾರಕರು ಹಾಗೂ 132 ಸಹಾಯಕರನ್ನು ನಿಯೋಜಿಸಲಾಗಿದೆ. ಒಟ್ಟು 244 ಚುನಾವಣಾ ಕ್ಷೇತ್ರಗಳ ಮತ ಎಣಿಕೆಗೆ 66 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಸಾಗರದ ಉಪ ವಿಭಾಗಾಧಿಕಾರಿ ಪ್ರಸನ್ನ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಶಿಕಾರಿಪುರದ 39 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯಕ್ಕೆ 60 ಮೇಲ್ವಿಚಾರಕರು ಹಾಗೂ 120 ಸಹಾಯಕರನ್ನು ನಿಯೋಜಿಸಲಾಗಿದೆ. ಒಟ್ಟು 165 ಚುನಾವಣಾ ಕ್ಷೇತ್ರಗಳ ಮತಎಣಿಕೆಗೆ 60 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೂಕಪ್ಪ ಎಂ.ಕರಭೀಮಣ್ಣನವರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಸೊರಬದ 27 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯಕ್ಕೆ 45 ಮೇಲ್ವಿಚಾರಕರು ಹಾಗೂ 90 ಸಹಾಯಕರನ್ನು ನಿಯೋಜಿಸಲಾಗಿದೆ. ಒಟ್ಟು 137 ಚುನಾವಣಾ ಕ್ಷೇತ್ರಗಳ ಮತಎಣಿಕೆಗೆ 45 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಶಿವಕುಮಾರ್ ಎಚ್.ಕೆ. ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಹೊಸನಗರದ 30 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯಕ್ಕೆ 60 ಮೇಲ್ವಿಚಾರಕರು ಹಾಗೂ 120 ಸಹಾಯಕರನ್ನು ನಿಯೋಜಿಸಲಾಗಿದೆ. ಒಟ್ಟು 151 ಚುನಾವಣಾ ಕ್ಷೇತ್ರಗಳ ಮತಎಣಿಕೆಗೆ 60 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶ್ರೀಧರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಜಿಲ್ಲೆಯ 244 ಗ್ರಾಮ ಪಂಚಾಯಿತಿಗಳ 1192 ಚುನಾವಣಾ ಕ್ಷೇತ್ರಗಳಿಗೆ 433 ಟೇಬಲ್‍ಗಳನ್ನು ಸಜ್ಜುಗೊಳಿಸಲಾಗಿದೆ. 433 ಮೇಲ್ವಿಚಾರಕರನ್ನು ಹಾಗೂ 866 ಸಹಾಯಕರನ್ನು ನಿಯೋಜಿಸಲಾಗಿದೆ.

ಮತಎಣಿಕೆ ಕೇಂದ್ರದೊಳಗೆ ಮೊಬೈಲ್‌ ನಿಷೇಧಿಸಲಾಗಿದೆ. ಎಣಿಕೆ ಕೇಂದ್ರಕ್ಕೆ ಹಾಜರಾಗುವ ಅಭ್ಯರ್ಥಿಗಳ ಅಥವಾ ಏಜೆಂಟರು ಪಾಸ್‌ ಪಡೆದಿರುವುದು ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT