ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಜನೆಯ ಸದುಪಯೋಗಕ್ಕೆ ಕರೆ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

ಬೆಳ್ಳೂರಿನಲ್ಲಿ ಜಿಲ್ಲಾಧಿಕಾರಿ ಡಾ.ಆರ್‌. ಸೆಲ್ವಮಣಿ ಗ್ರಾಮ ವಾಸ್ತವ್ಯ
ಫಾಲೋ ಮಾಡಿ
Comments

ಬೆಳ್ಳೂರು (ರಿಪ್ಪನ್‌ಪೇಟೆ): ಬೆಳ್ಳೂರು ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ಶುಕ್ರವಾರ ಅಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿ ನಡಿಗೆ–ಹಳ್ಳಿ ಕಡೆಗೆ’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಳ್ಳಿ ನಡಿಗೆಯಿಂದ ಸರ್ಕಾರಿ ಅಧಿಕಾರಿಗಳೇ ಖುದ್ದು ಜನ ಸಾಮಾನ್ಯರ ಬಳಿ ತೆರಳಿ ಕುಂದು ಕೊರತೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಕಲ್ಪಿಸುವ ನೂತನ ಯೋಜನೆಯಾಗಿದೆ. ಪ್ರತಿಯೊಬ್ಬ ನಾಗರಿಕನೂ ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ರಾಜ್ಯಕ್ಕೆ ಬೆಳಕು ನೀಡುವ ನಿಟ್ಟಿನಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ನೆಲೆಯಾದ ಈ ಪಂಚಾಯಿತಿ ವ್ಯಾಪ್ತಿಯ ಮಜರೆ ಹಳ್ಳಿಗಳಾದ ಮತ್ತಿಕೊಪ್ಪ–ಹೊರಬೈಲ್‌, ಕಾಳನ ಕೆರೆ, ದೊಂಬೆ ಕೊಪ್ಪ, ಮಸ್ಕಾನಿ, ಹಿರೇಸಾನಿ, ವಾಟೆಸರ ಸೇರಿ ಗ್ರಾಮೀಣ ಭಾಗದ ರಸ್ತೆ, ಶುದ್ಧ ಕುಡಿಯುವ ನೀರು ಕಲ್ಪಿಸಲು ಆದ್ಯತೆ ಮೇರೆಗೆ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.

ಮಲೆನಾಡಿನ ಈ ಭಾಗದಲ್ಲಿ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಕಾನೂನು ಅರಿವಿನ ಕೊರತೆಯಿಂದ ಕೂಡು ಕುಟುಂಬಗಳಲ್ಲಿ ಭೂಮಿ ವ್ಯಾಜ್ಯದ ಸಮಸ್ಯೆಗಳು ಹೆಚ್ಚಾಗಿವೆ. ಅಭಿವೃದ್ಧಿ ಕಾರ್ಯಗಳಿಗೆ ಕಾಯಕಲ್ಪ ನೀಡುವುದು ಈ ಯೋಜನೆಯ ಮುಖ್ಯ ಗುರಿ ಎಂದು ಹೇಳಿದರು.

ಅಂಗನವಾಡಿ, ಶಾಲೆಗಳ ದುರಸ್ತಿ, ವಿದ್ಯುತ್‌ ಇಲ್ಲದೆ ಬೆಳೆ ಒಣಗುತ್ತಿರುವುದು ಇತರ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಅಗತ್ಯ ಕ್ರಮ ಕೈಗೊಳುವಂತೆ ತಾಕೀತು ಮಾಡಿದರು.

ಇದೇ ಸಂದರ್ಭದಲ್ಲಿ ಬೆಳ್ಳೂರು, ಅರಸಾಳು, ಕೆಂಚನಾಲ ಹಾಗೂ ಹೊಂಬುಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಮಾಡಳಿತದ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಹೊಂಬುಜ ಗ್ರಾಮ ಪಂಚಾಯಿತಿ ಸದಸ್ಯೆ ಯಶಸ್ವತಿ ವೃಷಭರಾಜ್‌ ಜೈನ್‌ ಮನವಿ ಸಲ್ಲಿಸಿದರು.

ಬೆಳ್ಳೂರು ಗ್ರಾಮದ ಮಜರೆ ಹಳ್ಳಿಗಳ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ಗಾಂಜಾ ದುಶ್ಚಟಕ್ಕೆ ಯುವಕರು ಬಲಿಯಾಗುತ್ತಿದ್ದಾರೆ ಎಂದು ಕೆಲವರು ದೂರಿದರು.

ಬಗರ್‌ಹುಕುಂ ಸಾಗುವಳಿ ಪತ್ರ ಕುರಿತು ಮನವಿ ಬಂದಿದೆ. ಈ ಕುರಿತು ಅರ್ಜಿ ಪರೀಶಿಲನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ದಿವಾಕರ್‌ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರು, ಉಪ ತಹಶೀಲ್ದಾರ್ ಎಚ್.ಟಿ. ಹುಚ್ಚರಾಯಪ್ಪ, ಸುಧೀರ್‌ ಕುಮಾರ್, ಶ್ರೀಕಾಂತ್, ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ನಾಡ ಕಚೇರಿ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT