ಭಾನುವಾರ, ಫೆಬ್ರವರಿ 28, 2021
31 °C
ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯ 113 ಪಂಚಾಯಿತಿಗಳಲ್ಲೂ ಶಾಂತಿಯುತ ಮತದಾನ

ಶಿವಮೊಗ್ಗದ 3,284 ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಗಳಲ್ಲಿ ಭದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹಲವು ಕಡೆ ಹಣ ಹಂಚಿಕೆ, ಸಣ್ಣಪುಟ್ಟ ಮಾತಿನ ಚಕಮಕಿ, ಊಟ, ಉಪಾಹಾರದ ವ್ಯವಸ್ಥೆ, ಮತಗಟ್ಟೆಯ ಬಳಿಯೂ ಮತದಾರರ ಮನವೊಲಿಕೆಗೆ ಕಸರತ್ತು, ಮತಪಟ್ಟಿಯಲ್ಲಿ ಹೆಸರಿಲ್ಲದೆ ಪರಿತಪಿಸಿದ ಪ್ರಕರಣಗಳನ್ನು ಬಿಟ್ಟರೆ ಜಿಲ್ಲೆಯ ಮೂರು ತಾಲ್ಲೂಕುಗಳ ವ್ಯಾಪ್ತಿಯ 1,128 ಸ್ಥಾನಗಳಿಗೆ ಮಂಗಳವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಬಹುತೇಕ  ಶಾಂತಿಯುತವಾಗಿತ್ತು.

ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ತಾಲ್ಲೂಕು ವ್ಯಾಪ್ತಿಯ 113 ಗ್ರಾಮ ಪಂಚಾಯಿತಿಗಳಿಗೆ ಆಯ್ಕೆ ಬಯಸಿ 3,284 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಎಲ್ಲರ ಭವಿಷ್ಯ ಸಂಜೆಯ ನಂತರ ಮತಪೆಟ್ಟಿಗೆ ಸೇರಿದವು. ಮತಪೆಟ್ಟಿಗೆಗಳು ರಾತ್ರಿವೇಳೆಗೆ ಆಯಾ ತಾಲ್ಲೂಕು ಕೇಂದ್ರಗಳ ಭದ್ರತಾ ಕೊಠಡಿ ತಲುಪಿದವು.

ಶಿವಮೊಗ್ಗ ತಾಲ್ಲೂಕಿನ ಅಬ್ಬಲಗೆರೆ, ಕುಂಚೇನಹಳ್ಳಿ, ಹರಮಘಟ್ಟ, ಕೊಮ್ಮನಾಳು ಸೇರಿ ಹಲವು ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ವಾಹನಗಳಲ್ಲಿ ಮತದಾರರನ್ನು ಕರೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಯಸ್ಸಾದವರು, ದುರ್ಬಲರನ್ನು ಮತಗಟ್ಟೆಗೆ ಕರೆದುಕೊಂಡು ಬರುತ್ತಿದ್ದವರು ಸಹಾಯ ಮಾಡುವ ನೆಪದಲ್ಲಿ ಅವರ ಮತಗಳನ್ನು ತಾವೇ ಹಾಕುತ್ತಿದ್ದರು.

ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಪನಹಳ್ಳಿ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ಬಹಿರಂಗವಾಗಿ ₹ 200ರಿಂದ ₹ 500 ಹಂಚುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು. ತಮ್ಮಡಿಹಳ್ಳಿ‌ ಗ್ರಾಮ‌ದಲ್ಲಿ‌ ಮತ ಕೇಂದ್ರದ ಬಳಿಯೇ ಹಣ ಹಂಚಿಕೆ ನಡೆದರೂ, ಪೊಲಿಸರು ತಡೆಯಲಿಲ್ಲ ಎಂದು ಕೆಲವರು ಆರೋಪಿಸಿದರು.

ಭದ್ರಾವತಿ ತಾಲ್ಲೂಕು ಕಾಚಗೊಂಡನಹಳ್ಳಿಯಲ್ಲಿ ಎರಡು ಗುಂಪುಗಳ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಗುಂಪುಗಳನ್ನು ಚದುರಿಸಿದರು.

ತೀರ್ಥಹಳ್ಳಿ ತಾಲ್ಲೂಕಿನ ಹಲವು ಪಂಚಾಯಿತಿಗಳಲ್ಲಿ ಮತದಾರರಿಗೆ ಹೊಸ ಗುರುತಿನ ಚೀಟಿ ನೀಡಿದ್ದರೂ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತಚಾಲಾಯಿಸಲು ಆಗದೇ ಬಹುತೇಕರು ಹಿಂದಿರುಗಿದರು. ದಶಕಗಳಿಂದ ಅದೇ ಊರಿನಲ್ಲಿ ನೆಲೆಸಿದ್ದವರ ಹೆಸರುಗಳೂ ಕೈಬಿಟ್ಟು ಹೋಗಿದ್ದವು.

ವಿಧಾನಸಭಾ ಚುನಾವಣೆಗಿಂತಲೂ ಜಿದ್ದಾಜಿದ್ದಿ: ಹಲವು ಪಂಚಾಯಿತಿಗಳಲ್ಲಿ ಮತದಾನ ಬಿರುಸಿನಿಂದ ಕೂಡಿತ್ತು. ವಿಧಾನಸಭಾ ಚುನಾವಣಾ ಸಮಯದಲ್ಲಿ ಕಾಣುವ ಜಿದ್ದಾಜಿದ್ದಿನ ಪ್ರಚಾರ, ಓಡಾಟ, ಓಲೈಕೆಗಳಿಗೆ ಗ್ರಾಮಗಳು ಸಾಕ್ಷಿಯಾದವು. ಮತಗಟ್ಟೆಗಳ ಬಳಿ ಉದ್ದುದ್ದದ ಸರದಿ ಸಾಲುಗಳು ಕಂಡುಬಂದವು. ಹೊಲ, ಗದ್ದೆಗಲಿಗೆ ಹೋದವರನ್ನು ವಾಹನಗಳಲ್ಲಿ ಕರೆತಂದು ಮತ ಚಲಾಯಿಸಿದ ನಂತರ ಮತ್ತೆ ಬಿಟ್ಟು ಬರುತ್ತಿದ್ದ ದೃಶ್ಯಗಳು ಎಲ್ಲೆಡೆ ಕಾಣುತ್ತಿದ್ದವು. ಶಿವಮೊಗ್ಗ ತಾಲ್ಲೂಕಿನ ತುಪ್ಪೂರು ಸೇರಿ ಹಲವು ಗ್ರಾಮಗಳಲ್ಲಿ ಕೃಷಿ ಕೆಲಸ ಮುಗಿಸಿ ಸಂಜೆ ಒಮ್ಮೆಗೇ ಜನರು ಮತಗಟ್ಟೆಗೆ ಬಂದ ಪರಿಣಾಮ ರಾತ್ರಿವರೆಗೂ ಮತದಾನ ನಡೆಯಿತು. ಬೆಂಗಳೂರು ಸೇರಿ ಹೊರ ಜಿಲ್ಲೆಗಳಿಗೆ ಕೆಲಸ ಹುಡುಕಿಕೊಂಡು ಹೋಗಿದ್ದ ಮತದಾರರೂ ಗ್ರಾಮಕ್ಕೆ ಮರಳಿ ಮತ ಚಲಾಯಿಸಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್ ನಾಯ್ಕ ಕುಟುಂಬ ಸಮೇತ ಹಸೂಡಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ, ತೂದೂರು, ಬೆಜ್ಜುವಳ್ಳಿ, ಕುಡುಮಲ್ಲಿಗೆ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಯು.ಆರ್. ಅನಂತಮೂರ್ತಿ ಪ್ರೌಢಶಾಲೆ ತೆರಳಿ ಭದ್ರತಾ ಕೊಠಡಿಗಳನ್ನು ಪರಿಶೀಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ತಹಶೀಲ್ದಾರ್ ನಾಗರಾಜ್ ಅವರು ಶಿವಮೊಗ್ಗದ ಎಚ್.ಎಸ್. ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಮತ್ತು ಭದ್ರಾವತಿಯ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜುಗಳ ಭದ್ರತಾ ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧಾ ಅವರು ಶಿವಮೊಗ್ಗ ತಾಲ್ಲೂಕಿನ ಅತಿಸೂಕ್ಷ್ಮ ಮತಗಟ್ಟೆಗಳಾದ ಕಾಚಿನಕಟ್ಟೆ, ಲಕ್ಕಿನಕೊಪ್ಪ, ಉಂಬಳೇಬೈಲು, ಹುರುಳಿಹಳ್ಳಿ, ಸಂತೇಕಡೂರು ಮತಗಟ್ಟೆಗಳಿಗೆ ಭೇಟಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು