ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವರ್ಕರ್, ಟಿಪ್ಪು ಫ್ಲೆಕ್ಸ್ ಅಳವಡಿಕೆ ವಿವಾದ: ಶಿವಮೊಗ್ಗ ಉದ್ವಿಗ್ನ

ನಿಷೇಧಾಜ್ಞೆ ಜಾರಿ
Published : 15 ಆಗಸ್ಟ್ 2022, 10:44 IST
ಫಾಲೋ ಮಾಡಿ
Comments

ಶಿವಮೊಗ್ಗ: ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಅವರ ಫ್ಲೆಕ್ಸ್‌ ಅಳವಡಿಸುವ ಕುರಿತು ಸೋಮವಾರ ಇಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಕೆಲಹೊತ್ತು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಬೆನ್ನಲ್ಲೇ ಪ್ರೇಮ್‌ಸಿಂಗ್ ಎಂಬುವವರಿಗೆ ಚೂರಿಯಿಂದ ಇರಿದಿದ್ದು, ಸದ್ದಾಂ ಎಂಬುವವರಿಗೆ ಕಲ್ಲೇಟಿನಿಂದ ಗಾಯವಾಗಿದೆ.

ಇಲ್ಲಿನ ಅಮೀರ್ ಅಹಮದ್ ವೃತ್ತದಲ್ಲಿ ಗುಂಪೊಂದು ವೀರ ಸಾವರ್ಕರ್ ಫ್ಲೆಕ್ಸ್‌ ಅಳವಡಿಕೆಗೆ ಮುಂದಾದಾಗ ಮತ್ತೊಂದು ಗುಂಪು ಆಕ್ಷೇಪಿಸಿತು. ನಾವು ಟಿಪ್ಪು ಸುಲ್ತಾನ್‌ ಫ್ಲೆಕ್ಸ್ ಹಾಕುತ್ತೇವೆ ಎಂದು ಪಟ್ಟುಹಿಡಿಯಿತು. ಉಭಯ ಗುಂಪುಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಬಿಗುವಿನ ಸ್ಥಿತಿ ನಿರ್ಮಾಣವಾಯಿತು.

ಆಗ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದೇ ವೇಳೆ ತರಕಾರಿ ಮಾರುಕಟ್ಟೆ ಬಳಿ ಪ್ರೇಮ್‌ಸಿಂಗ್ ಎಂಬುವವರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದರು. ಈ ಸುದ್ದಿ ಹರಡುತ್ತಿದ್ದಂತೆ ಪ್ರತಿಭಟನೆಯು ತೀವ್ರಗೊಂಡಿತು. ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ನೂಕಾಟವೂ ನಡೆಯಿತು.

ಚೂರಿ ಇರಿತಕ್ಕೆ ಒಳಗಾಗಿರುವ ಪ್ರೇಮ್‌ಸಿಂಗ್‌ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಅವರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಶ್ರೀಧರ್ ತಿಳಿಸಿದ್ದಾರೆ.

ಅಮಿರ್‌ ಅಹಮ್ಮದ್ ವೃತ್ತದಲ್ಲಿ ಎರಡೂ ಗುಂಪಿನವರು ಗಣನೀಯ ಸಂಖ್ಯೆಯಲ್ಲಿ ಸೇರಿದ್ದರಿಂದ, ಪರಸ್ಪರ ಕೈ, ಕೈ ಮಿಲಾಯಿಸುವ ಹಂತವನ್ನು ತಲುಪಿತು. ಗುಂಪುಗಳ ನಡುವೆ ಘರ್ಷಣೆಯನ್ನು ತಪ್ಪಿಸಲು ಪೊಲೀಸರು ಅಲ್ಲಿದ್ದ ಫ್ಲೆಕ್ಸ್‌ ತೆಗೆದು, ರಾಷ್ಟ್ರಧ್ವಜ ಹಾರಿಸಿದರು.

ಇಬ್ಬರ ಬಂಧನ, ನಿಷೇಧಾಜ್ಞೆ ಜಾರಿ
ಪ್ರೇಮ್ ಸಿಂಗ್ ಅವರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಇಬ್ಬರನ್ನು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ. ಇಲ್ಲಿನ ಜೆ.ಸಿ.ನಗರ ಎರಡನೇ ಕ್ರಾಸ್ ನಿವಾಸಿ ನದೀಮ್ ಅಲಿಯಾಸ್‌ ನೌಶಾದ್ ಅಲಿ (25) ಹಾಗೂ ಬುದ್ಧ ನಗರ ಎರಡನೇ ಕ್ರಾಸ್ ನಿವಾಸಿ ಅಬ್ದುಲ್ ರೆಹಮಾನ್ (25) ಬಂಧಿತರು.

ನಿಷೇಧಾಜ್ಞೆ: ಮುಂಜಾಗ್ರತೆಯಾಗಿ ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ಮಂಗಳವಾರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎರಡೂ ನಗರಗಳಲ್ಲಿ ಶಾಲಾ, ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ ಹಾಗೂ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

**

ಎರಡು ಗುಂಪುಗಳ ಮುಖಾಮುಖಿ ತಪ್ಪಿಸಲು ಲಘು ಲಾಠಿ ಪ್ರಹಾರ ಮಾಡಿದ್ದೇವೆ. ಪರಿಸ್ಥಿತಿ ತಹಬದಿಯಲ್ಲಿದೆ. ಯಾರನ್ನೂ ಬಂಧಿಸಿಲ್ಲ.
-ಬಿ.ಎಂ.ಲಕ್ಷ್ಮೀಪ್ರಸಾದ್, ಶಿವಮೊಗ್ಗ ಎಸ್ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT