ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪ್ಪನ್‌ಪೇಟೆ: ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಧಾರಾಕಾರ ಮಳೆ
Last Updated 2 ಸೆಪ್ಟೆಂಬರ್ 2022, 5:54 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಪಟ್ಟಣದಲ್ಲಿ ಗುರುವಾರ ಸಂಜೆ ದಿಢೀರ್‌ ಆಗಿ ಗುಡುಗು ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.

ಪಟ್ಟಣದ ವಿವಿಧ ಬಡಾವಣೆಗಳಾದ ದೊಡ್ಡಿನಕೊಪ್ಪ, ನೆಹರೂ ಬಡಾವಣೆ, ಶ್ರೀರಾಮ ನಗರ, ವಿನಾಯಕ ನಗರ, ಶಬರೀಶ ನಗರ ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ.

ವಿನಾಯಕ ವೃತ್ತದ ಆಟೊ ನಿಲ್ದಾಣದ ಮುಂಭಾಗದ ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿತ್ತು. ಶ್ರೀರಾಂನಗರದಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಹೊಸನಗರ ರಸ್ತೆಯ ಮಾಡರ್ನ್ ರೈಸ್ ಮಿಲ್ ಮುಂಭಾಗದ ಚರಂಡಿ ನೀರು ಉಕ್ಕಿ ಹರಿದ ಪರಿಣಾಮ ಪಟ್ಟಣದ ತ್ಯಾಜ್ಯದ ನೀರು ಭತ್ತದ ಗದ್ದೆಗಳಿಗೆ ನುಗ್ಗಿ ಜಲಾವೃತಗೊಂಡಿದೆ.

ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಾದ ಅರಸಾಳು, ಬೆನವಳ್ಳಿ, ದೂನ, ಬಾಳೂರು, ಹೆದ್ದಾರಿಪುರ, ತಳಲೆ, ಕಲ್ಲೂರು, ವಡಹೊಸಳ್ಳಿ, ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸೆ, ನೇರ್ಲಿಗೆ, ಗುಬ್ಬಿಗಾ, ಅಡ್ಡೇರಿ, ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಕಿ, ಕೋಟೆತಾರಿಗ, ಸಿಡಿಹಳ್ಳ ಸೇರಿ ಅನೇಕ ಹಳ್ಳಿಗಳಲ್ಲಿ ಭಾರಿ ಮಳೆ ಸುರಿದಿದೆ. ನಾಟಿ ಮಾಡಿದ ಭತ್ತದ ಗದ್ದೆಗಳು ಕೊಚ್ಚಿ ಹೋಗಿದ್ದು, ಸಂಪೂರ್ಣ ಜಲಾವೃತಗೊಂಡಿವೆ.

ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ವ್ಯತ್ಯಯ ಉಂಟಾಗಿದೆ.

***

ಭಾರಿ ಮಳೆ

ತುಮರಿ: ಕರೂರು ಹೋಬಳಿಯ ಹಲವೆಡೆ ಗುರುವಾರ ಸಂಜೆ ಭಾರಿ ಮಳೆ ಸುರಿಯಿತು. ರಸ್ತೆ ಮೇಲೆ ನೀರು ಹರಿಯಿತು.

ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದ ಗೌರಿ ಹಬ್ಬದ ಕೊನೆಯ ದಿನ ಸಂಭ್ರಮ ಇಲ್ಲದಂತಾಯಿತು. ಕರೂರು ಹೋಬಳಿಯ ಹಲವೆಡೆ ಗಣೇಶ ಮೂರ್ತಿ ಪೆಂಡಾಲ್‌ಗಳ ಒಳ ಭಾಗದಲ್ಲಿ ನೀರು ನುಗ್ಗಿ ಸಾಕಷ್ಟು ತೊಂದರೆ ಉಂಟಾಗಿದೆ.

ಹೊಳೆಬಾಗಿಲು ಬಳಿ ಸಿಗಂದೂರು ಸೇತುವೆ ನಿರ್ಮಾಣದಲ್ಲಿ ವಾಹನ ಸಂಚಾರಕ್ಕೆ ಹಾಕಲಾಗಿದ್ದ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಸೇತುವೆ ನಿರ್ಮಾಣ ಕಾಮಗಾರಿಯಿಂದ ಕಾರ್ಮಿಕರು ತೊಂದರೆ ಅನುಭವಿಸುವಂತಾಯಿತು. ಸಿಗಂದೂರು ದೇವಸ್ಥಾನದ ಬಳಿ ಆಪಾರ ಮಳೆಯಾಗಿದ್ದು, ಚರಂಡಿಗಳು ಉಕ್ಕಿ ಹರಿದ ಪರಿಣಾಮ ವಾಹನಗಳು ನಿಂತಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇನ್ನು ತುಮರಿಯ ಸಮೀಪದದ ಕುದರೂರು, ಬೆಳಮಕ್ಕಿ ಬಳಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರಿಂದ ಸಿಗಂದೂರು–ಕೊಲ್ಲೂರು ಮಾರ್ಗದಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೊಸಕೊಪ್ಪ ಸಮೀಪದ ನಾಗೋಡಿ ಚೆಕ್ ಪೋಸ್ಟ್ ಸುತ್ತ ಮುತ್ತ ಮಳೆಯಿಂದಾಗಿ ಸಿಬ್ಬಂದಿ ಪರಿತಪಿಸುವಂತಾಗಿತ್ತು.

ಇನ್ನು ಸುಳ್ಳಳ್ಳಿ ಚನ್ನಗೊಂಡ ಗ್ರಾಮದ ಕಟ್ಟಿನಕಾರು, ಬಿಳಿಗಾರು ಭಾಗದಲ್ಲಿ ರಸ್ತೆ ಮಧ್ಯೆ ನೀರು ಹೋಗುವ ದೃಶ್ಯ ಕಂಡುಬಂತು. ಹಲವೆಡೆ ರಸ್ತೆಯ ಚರಂಡಿಗಳು ತುಂಬಿ ಹೋಗಿತ್ತು. ಕಲ್ಲು, ಮಣ್ಣಿನ ರಾಶಿ ಬಂದು ರಸ್ತೆಯಲ್ಲಿ ಶೇಖರಣೆಗೊಂಡ ಪರಿಣಾಮ ಸಂಚಾರಕ್ಕೆ ಅನನುಕೂಲ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT