ಮಂಗಳವಾರ, ಜೂನ್ 28, 2022
26 °C
ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತ; ಸೂಕ್ತ ಪರಿಹಾರಕ್ಕೆ ಜನರ ಆಗ್ರಹ

ಶಿವಮೊಗ್ಗ: ಮನೆಗೆ ನುಗ್ಗಿದ ನೀರು, ಸಂಸದರ ಬಳಿ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಕಾಲುವೆಯಲ್ಲಿ ಹೂಳು ತುಂಬಿದೆ. ಚರಂಡಿಯಲ್ಲಿ ನೀರು ಹರಿಯುತ್ತಿಲ್ಲ. ಪ್ರತಿ ವರ್ಷವೂ ಇದೇ ಗೋಳು ಸ್ವಾಮಿ. ಬೇಸಿಗೆಯಲ್ಲೇ ಸಮಸ್ಯೆ ಬಗೆಹರಿಸಿ ಎಂದು ಅಧಿಕಾರಿಗಳನ್ನು ಅಂಗಲಾಚಿದರೂ ಯಾರೂ ಇತ್ತ ತಲೆಹಾಕುವುದಿಲ್ಲ ಸ್ವಾಮಿ. ಈಗ ಮನೆಗೆ ನೀರು ನುಗ್ಗಿದೆ. ನಾವು ಎಲ್ಲಿಗೆ ಹೋಗಬೇಕು ನೀವೇ ಹೇಳಿ’

ಜಲಾವೃತಗೊಂಡ ಬಡಾವಣೆಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರ ಬಳಿ ಸ್ಥಳೀಯರು ಅಳಲು ತೋಡಿಕೊಂಡ ಪರಿ ಇದು.

ಮನೆಗೆ ನೀರು ನುಗ್ಗಿದೆ. ಮನೆಗಳಿಗೆ ಹಾನಿಯಾಗಿದೆ. ಕೆಲವರು ಮಳೆ ನೀರಿಗೆ ಹೆದರಿ ಬೇರೆಡೆಗೆ ಹೋಗಿದ್ದಾರೆ. ಕೆಲವರು ಮನೆಬಿಟ್ಟು ಹೋಗಲಾರದೆ ಮಳೆ ನೀರಿನಲ್ಲೇ ಕಾಲ ಕಳೆದಿದ್ದಾರೆ. ಕೂಲಿನಾಲಿ ಮಾಡಿ ಕಷ್ಟಪಟ್ಟು ತಂದಿದ್ದ ಸಾಮಾಗ್ರಿಗಳು ನೀರು ಪಾಲಾಗಿವೆ. ಇಷ್ಟಾದರೂ ಯಾವ ಅಧಿಕಾರಿಯೂ ಮನೆಗೆ ಬಂದು ಏನಾಗಿದೆ ಎಂದು ವಿಚಾರಿಸಿಲ್ಲ ಎಂದು ಸಂಸದರ ಬಳಿ ಅಧಿಕಾರಿಗಳ ವಿರುದ್ಧ ದೂರಿದರು.

ಅಧಿಕಾರಿಗಳಿಗೆ ತರಾಟೆ: ಲಕ್ಷ್ಮೀ ಚಿತ್ರಮಂದಿರದ ಹಿಂಭಾಗದ ಚಾನೆಲ್ ಬ್ರಿಡ್ಜ್ ಮೇಲೆ ನೀರು ನಿಲ್ಲುತ್ತಿದೆ. ಇಲ್ಲಿ ಗ್ರಿಲ್ ಅಳವಡಿಸುವಂತೆ ಸೂಚಿಸಿದರೂ ಯಾಕೆ ಗ್ರಿಲ್ ಹಾಕಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳು ಕಚೇರಿಯಲ್ಲಿ ಕೂರದೆ ಸ್ಥಳಕ್ಕೆ ಬಂದು ಏನಾಗಿದೆ ಎಂದು ವಿಚಾರಿಸಿ ಹಾನಿಯಾಗಿದ್ದರೆ ಕೂಡಲೇ ಪರಿಹಾರ ನೀಡಬೇಕು ಎಂದು ತಾಕೀತು ಮಾಡಿದರು.

ನಗರದ ನಿರ್ಮಲಾ ನರ್ಸಿಂಗ್ ಹೋಂ ಬಳಿಯ ಚಾನೆಲ್ ದಂಡೆಯ ಅಕ್ಕಪಕ್ಕ, ವೆಂಕಟೇಶ್ ನಗರ, ರಾಜೇಂದ್ರ ನಗರ, ಗಾಂಧಿ ನಗರ, ರವೀಂದ್ರ ನಗರ, ವಿನಾಯಕ ನಗರ, ಬಾಪೂಜಿ ನಗರ, ಶಾಂತಮ್ಮ ಲೇಔಟ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ, ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಆದೇಶಿಸಲಾಗಿದೆ. ವೆಂಕಟೇಶ ನಗರದಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಶಾಶ್ವತ ಪರಿಹಾರ ಸಂಬಂಧ ಭಾನುವಾರ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಮೇಯರ್ ಸುನಿತಾ ಅಣ್ಣಪ್ಪ, ಶಂಕರ್ ಗನ್ನಿ, ಜ್ಯೋತಿ ಪ್ರಕಾಶ್, ಧೀರರಾಜ್ ಹೊನ್ನವಿಲೆ, ಮಾಲತೇಶ್, ಸಂತೋಷ್ ಬಳ್ಳೆಕೆರೆ, ರಾಜೇಶ್ ಕಾಮತ್, ಆಯುಕ್ತ ಮಾಯಣ್ಣ ಗೌಡ, ಸ್ಮಾರ್ಟ್ ಸಿಟಿ ನಿರ್ದೇಶಕ ಚಿದಾನಂದ ವಠಾರೆ ಇದ್ದರು.

ಮೊದಲ ಮಳೆಯ ಅವಾಂತರ
ನಗರದಲ್ಲಿ ಮೊದಲ ಮಳೆಗೆ ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮನೆಗಳ ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಧಾನ್ಯಗಳು ನೀರು ಪಾಲಾಗಿವೆ. ನೀರು ನುಗ್ಗಿದ ಮನೆಗಳ  ಸಂತ್ರಸ್ತರನ್ನು ಬೇರೆಡೆ ಸಾಗಿಸುವ ಕೆಲಸವನ್ನು ರಕ್ಷಣಾ ತಂಡ ನಡೆಸುತ್ತಿದೆ.

ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಡೆಯುತ್ತಿರುವ ಕಡೆ ಶೇ 40ರಷ್ಟು ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿದ್ದರೆ, ಶೇ 60ರಷ್ಟು ನೀರು ರಸ್ತೆಯಲ್ಲಿ ಹರಿಯುತ್ತಿದೆ. ವಿದ್ಯಾನಗರ, ಶಾಂತಮ್ಮ ಲೇಔಟ್‌ನಲ್ಲಿ ರಾಜಕಾಲುವೆ ನಿರ್ಮಾಣದಿಂದಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಲ್ಲೂಕಿನ ಮುದ್ದಿನಕೊಪ್ಪ ಗ್ರಾಮದ ಚಿಕ್ಕೇರಿಯ ಕೆರೆಯ ನೀರಿನ ರಭಸಕ್ಕೆ ಹಸುಗಳು ಕೊಚ್ಚಿಹೋಗಿವೆ.

ಪರಿಹಾರ ಕಲ್ಪಿಸಲು ಆಗ್ರಹ: ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ನೂರಾರು ಮನೆಗಳಿಗೆ ಹಾನಿಯಾಗಿದೆ. ಜನರು ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ನಗರದ ತಗ್ಗು ಪ್ರದೇಶಗಳಲ್ಲಿ ತುಂಬಿರುವ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು. ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಮಿರ್‌ ಅಹಮದ್‌ ಕಾಲೊನಿಯ ನಿವಾಸಿ ಸಿದ್ದಪ್ಪ ಆಗ್ರಹಿಸಿದ್ದಾರೆ.

ಆಹಾರ ಪೊಟ್ಟಣ ವಿತರಣೆ
ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಸಂತ್ರಸ್ತರಾದವರಿಗೆ ಇಕ್ರಾ ವೆಲ್‌ಫೇರ್‌ ಚಾರಿಟಬಲ್ ಟ್ರಸ್ಟ್ ಹಾಗೂ ಜಯಕರ್ನಾಟಕ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಆಹಾರ ಪೊಟ್ಟಣ ನೀಡಲಾಯಿತು.

ಜಲಾಶಯದಿಂದ ನೀರು ಹೊರಕ್ಕೆ
ಶಿವಮೊಗ್ಗ:
ಕಳೆದ ಮೂರ್ನಾಲ್ಕು ದಿನಗಳಿಂದ ಗಾಜನೂರು ತುಂಗಾ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಬಾರಿ ಏರಿಕೆ ಕಂಡಿದೆ. ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ತುಂಗಾ ಜಲಾಶಯದ ಎರಡು ಗೇಟುಗಳನ್ನು ತೆರೆದು ನದಿಗೆ 12 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು.

ಧಾರಾಕಾರ ಮಳೆ ಇದೇ ರೀತಿ ಮುಂದುವರಿದರೆ ಇನ್ನಷ್ಟು ಗೇಟ್‌ಗಳನ್ನು ತೆರೆದು ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗುವುದು. ನದಿ ಪಾತ್ರದ ಜನರು ಜಾನುವಾರು ನದಿಗೆ ಬಿಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ತುರ್ತು ಪರಿಹಾರಕ್ಕೆ ಸೂಚನೆ
ಶಿವಮೊಗ್ಗ:
‘ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾಗಿದ್ದು, ತುರ್ತಾಗಿ ಎಲ್ಲ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

‘ಮಳೆಯಿಂದ ತೊಂದರೆಗೀಡಾದ ಪ್ರದೇಶಗಳು ಮತ್ತು ಜನರಿಗೆ ತುರ್ತಾಗಿ ಪರಿಹಾರ ಒದಗಿಸುವ ಸಲುವಾಗಿ ನಾನು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಆದೇಶಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಮೇ 21ರಿಂದ 3 ದಿನ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಕೈಗೊಂಡಿರುವ ಎಲ್ಲಾ ಪರಿಹಾರ ಕಾರ್ಯಗಳನ್ನು ಪರಿಶೀಲಿಸುತ್ತೇನೆ’ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಪರಿಶೀಲನೆ 
ಶಿವಮೊಗ್ಗ:
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಹಶೀಲ್ದಾರ್, ಕರ್ನಾಟಕ ನೀರಾವರಿ ನಿಗಮ ಮತ್ತು ಇತರೆ ಅಧಿಕಾರಿಗಳೊಂದಿಗೆ ಶುಕ್ರವಾರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತೆರಳಿ, ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುಪುರ ಸಮೀಪದ ಶಾಂತಮ್ಮ ಲೇಔಟ್ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಿಂಗ್‍ರಸ್ತೆ ಸಮೀಪದ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವುದನ್ನು ಪರಿಶೀಲಿಸಿದರು. ಇಸ್ಲಾಪುರದ ಚಾನೆಲ್‍ನಲ್ಲಿನ ನೀರಿನ ಹರಿವು ಹಾಗೂ ಹರಿಗೆ ಕೆರೆಗೆ ಖುದ್ದು ಭೇಟಿ ನೀಡಿದರು.

ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ನಾಗರಾಜ್, ಕೆಎನ್‍ಎನ್‍ಎಲ್ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು