ಮಂಗಳವಾರ, ಜುಲೈ 5, 2022
21 °C

ಚೆನ್ನಾಗಿ ಓದಿದ್ದರೆ ರಾಜಕಾರಣಿ ಆಗುತ್ತಿರಲಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೆಲಸ ಮಾಡುವಾಗ ಲೋಪಗಳು ಸಹಜ. ಕೆಲವು ಪೊಲೀಸರು ಮಾಡುವ ತಪ್ಪಿನಿಂದ ಇಲಾಖೆಗೆ ಕೆಲವೊಮ್ಮೆ ಕೆಟ್ಟ ಹೆಸರು ಬಂದಿದೆ. ಆದರೆ, ಹೆಚ್ಚಿನ ಪೊಲೀಸರು ದಕ್ಷರು, ಪ್ರಾಮಾಣಿಕರು, ತ್ಯಾಗಜೀವಿಗಳಾಗಿರುವುದರಿಂದಲೇ ಸಮಾಜ ನೆಮ್ಮದಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.

ಸಮಾಜದ ನೆಮ್ಮದಿಗೆ, ಶಾಂತಿ, ಸುವ್ಯಸ್ಯೆಗೆ ಪೊಲೀಸರ ಕೊಡುಗೆ ಅಪಾರ. ಅವರ ಸೇವೆ ಅನನ್ಯ ಎಂದು ಬಣ್ಣಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ ಹಾವಳಿ ವ್ಯಾಪಕವಾಗಿತ್ತು. ದಿನದ 24 ಗಂಟೆಯೂ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿದ ಪರಿಣಾಮ ನಿಯಂತ್ರಣಕ್ಕೆ ಬರುತ್ತಿದೆ. ದಶಕಗಳಿಂದಲೂ ವಿಶಾಖಪಟ್ಟಣಂ ಸುತ್ತಮುತ್ತ ಭಾರಿ ಪ್ರಮಾಣದ ಗಾಂಜಾ ಬೆಳೆಯುತ್ತಿದ್ದಾರೆ. ಅಲ್ಲಿಂದ ರಾಜ್ಯಕ್ಕೆ ಸರಬರಾಜಾಗುತ್ತಿತ್ತು. ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ, ಅಲ್ಲಿನ ಸರ್ಕಾರದ ಗಮನಕ್ಕೂ ತಂದಿದ್ದಾರೆ. ಎಚ್ಚೆತ್ತುಕೊಂಡ ಆಂಧ್ರಪ್ರದೇಶ ಸರ್ಕಾರ ಕಡಿವಾಣ ಹಾಕುತ್ತಿದೆ. ಹಿಂದೆಲ್ಲ ಗಾಂಜಾ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಈಗ ಸೇವಿಸಿದವರ ವಿರುದ್ಧವೂ ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದ ಗಾಂಜಾ ಹಾವಳಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ವಿವರ ನೀಡಿದರು.

ಜಿಲ್ಲೆಯಲ್ಲಿ 38 ಕಲ್ಲುಕ್ವಾರಿಗಳನ್ನು ಅಧಿಕೃತ ಎಂದು ಘೋಷಿಸಲಾಗಿದೆ. ಅಕ್ರಮ ಕ್ವಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಮರುಳು ಸಾಗಣೆ ವಿರುದ್ಧವೂ ಪೊಲೀಸರು ಕ್ರಮ ಜರುಗಿಸುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆರಂಭವಾಗಿವೆ. ಹಾಗಾಗಿ, ಮರಳು, ಜಿಲ್ಲೆಯ ಆವಶ್ಯಕತೆ ಹೆಚ್ಚಾಗಿದೆ ಎಂದು ವಿವರ ನೀಡಿದರು.

ಜಿಲ್ಲೆಗಿಲ್ಲ ಪೊಲೀಸ್‌ ಕಮೀಷನರೇಟ್‌: ಶಿವಮೊಗ್ಗದಲ್ಲಿ ಪೊಲೀಸ್‌ ಕಮೀಷನರೇಟ್‌ ಆರಂಭಿಸಲು ತಾಂತ್ರಿಕ ಸಮಸ್ಯೆಗಳಿವೆ. ಜನ ಸಂಖ್ಯೆ ಕಡಿಮೆ ಇರುವುದೂ ತೊಡಕಾಗುತ್ತದೆ. ಹಾಗಾಗಿ, ಸದಸ್ಯಕ್ಕೆ ಅವಕಾಶ ಇಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸುವ ಕುರಿತು ಚರ್ಚಿಸಲಾಗುವುದು. ₹ 4.5 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ ಪೊಲೀಸ್‌ ಠಾಣೆ ಕಟ್ಟಡ ನಿರ್ಮಿಸಲಾಗುತ್ತಿದೆ. 40 ವಸತಿ ಗೃಹಗಳನ್ನು ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೇಕೆದಾಟು ಸೇರಿದಂತೆ ಯಾವುದೇ ನೀರಾವರಿ ಯೋಜನೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಎಲ್ಲ ಯೋಜನೆಗಳನ್ನೂ ಕಾಲಮಿತಿಯ ಒಳಗೆ ಹಂತಹಂತವಾಗಿ ಅನುಷ್ಠಾನಗೊಳಿಸಲು ಬದ್ಧವಾಗಿದೆ. ವಿಳಂಬ ಪ್ರಶ್ನೆಯೇ ಇಲ್ಲ. ಸುಮ್ಮನೆ ಪಾದಯಾತ್ರೆ ಮಾಡಿ ಕಾಂಗ್ರೆಸ್‌ ಮುಖಂಡರು ಆಭಾಗದ ಜಿಲ್ಲೆಗಳಲ್ಲಿ ಕೊರೊನಾ ಹರಡಿದರು ಎಂದು ದೂರಿದರು.

ಚೆನ್ನಾಗಿ ಓದಿದ್ದರೆ ರಾಜಕಾರಣಿ ಆಗುತ್ತಿರಲಿಲ್ಲ

ಶಾಲೆ, ಕಾಲೇಜು ದಿನಗಳಲ್ಲಿ ಚೆನ್ನಾಗಿ ಓದಿದ್ದರೆ ರಾಜಕಾರಣಿ ಆಗುತ್ತಿರಲಿಲ್ಲ. ಈಗ ಸಾಕಷ್ಟು ಅಧ್ಯಯನ ಮಾಡುತ್ತಿರುವೆ. ಒಂದು ಸೋಲಿಗೆ ನೇಪಥ್ಯಕ್ಕೆ ಸರಿದ ಸಾಕಷ್ಟು ರಾಜಕಾರಣಿಗಳು ಇದ್ದಾರೆ. ನಾನು ಹಲವು ಸೋಲುಗಳನ್ನು ಕಂಡರೂ ಹಿಂಜರಿಯದೇ ಗೆಲವು ಕಂಡವನು. ತಡವಾಗಿ ಬಂದರೂ ಅಡವಾಗಿ ಸಿಕ್ಕಂತೆ ಗೃಹ ಸಚಿವ ಸ್ಥಾನ ಒಲಿದು ಬಂದಿದೆ. ನಾನು ಸಾಮಾನ್ಯ ಕುಟುಂಬದಿಂದ ಬಂದವನು. ಯಾವ ಗಾಢಫಾದರ್‌ಗಳೂ ಇಲ್ಲ. ಪಕ್ಷ, ಸಂಘಟನೆ, ಹೋರಾಟದಿಂದ ಬೆಳದವನು. ಇದ್ದಷ್ಟು ಸಮಯ ಪ್ರಾಮಾಣಿಕವಾಗಿ ಕೆಲಸ ಮಡುವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು