ಸಾಗರ: ‘ಗೋಪಾಲಕೃಷ್ಣ ಬೇಳೂರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಸಂತಸ ತಂದಿದೆ. ನನ್ನ ಅಳಿಯನ ಗೆಲುವಿಗೆ ಕ್ಷೇತ್ರದ ಉದ್ದಗಲಕ್ಕೂ ಓಡಾಡುವ ಮೂಲಕ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಕಾಗೋಡು ನಿವಾಸಕ್ಕೆ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಆಶೀರ್ವದಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪಕ್ಷದ ವಿರುದ್ಧ ಬಂಡಾಯ ಎದ್ದಿರುವವರ ಕಾಲು ಹಿಡಿದಾದರೂ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಮನವೊಲಿಸಲಾಗುವುದು. ವ್ಯಕ್ತಿಗಿಂತ ಪಕ್ಷವೇ ಮುಖ್ಯ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಅಭಿಲಾಷೆ ಇದ್ದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಮುಖ್ಯ’ ಎಂದರು.
‘ಸಾಗರ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ನಿಂತ ನೀರಾಗಿದೆ. ಗಣಪತಿ ಕೆರೆಯ ಒಂದು ಭಾಗದಲ್ಲಿ ದಂಡೆ ನಿರ್ಮಿಸಿ ಅದನ್ನೇ ಅಭಿವೃದ್ಧಿ ಎನ್ನುತ್ತಿರುವುದು ವಿಚಿತ್ರ. ಅಲ್ಲಿ ದಂಡೆ ನಿರ್ಮಿಸಲು ಬೇರೆ ಯಾವುದಾದರೂ ಹೊಳೆ ಹರಿದು ಬರುವ ಸಾಧ್ಯತೆ ಇದೆಯಾ ಎಂಬುದನ್ನು ಶಾಸಕರು ತಿಳಿಸಬೇಕು’ ಎಂದು ಒತ್ತಾಯಿಸಿದರು.
‘ನಾನು ಶಾಸಕನಾಗಿದ್ದಾಗ ಕ್ಷೇತ್ರಕ್ಕೆ ತಂದ ಅನುದಾನಗಳ ಕಾಮಗಾರಿ ಹಲವು ವರ್ಷಗಳ ನಂತರ ಮುಕ್ತಾಯಗೊಂಡಿದೆ. ಅದನ್ನೇ ಅಭಿವೃದ್ಧಿ ಎಂದು ಶಾಸಕ ಹಾಲಪ್ಪ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.
‘ಭೀಷ್ಮನ ರೀತಿಯಲ್ಲಿ ಕಾಗೋಡು ತಿಮ್ಮಪ್ಪ ಅವರು ಜೊತೆಯಲ್ಲಿ ಇರುವುದರಿಂದ ಆನೆಬಲ ಬಂದಂತಾಗಿದೆ. ಪಕ್ಷ ಎಂದ ಮೇಲೆ ಕೆಲವು ಸಣ್ಣಪುಟ್ಟ ಗೊಂದಲಗಳು ಇರುವುದು ಸಹಜ’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಹೇಳಿದರು.
ಬಿ.ಎ.ಇಂದೂಧರ ಗೌಡ, ಅಶೋಕ್ ಬೇಳೂರು, ತಾರಾಮೂರ್ತಿ, ಮೈಕೆಲ್ ಡಿಸೋಜ, ಡಿ.ದಿನೇಶ್, ಗಣಪತಿ ಮಂಡಗಳಲೆ, ಮಹಾರಾಜ ಕೆಳದಿ, ಗಲ್ಲಿ ವೆಂಕಟೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.