ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಈಶ್ವರಪ್ಪ ಸ್ಥಾನಕ್ಕೆ ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಒತ್ತಡ

ಜಿಲ್ಲೆಗೆ ಸಚಿವ ಸ್ಥಾನ ನೀಡಲು ಹೆಚ್ಚಿದ ಲಾಬಿ
Last Updated 21 ಏಪ್ರಿಲ್ 2022, 4:46 IST
ಅಕ್ಷರ ಗಾತ್ರ

ಸಾಗರ: ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ಪಡೆಯಲು ಬಿಜೆಪಿಯೊಳಗೆ ಪೈಪೋಟಿ ಆರಂಭವಾಗಿದೆ. ತೆರವಾಗಿರುವ ಸ್ಥಾನಕ್ಕೆ ಈ ಜಿಲ್ಲೆಯವರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಸೆ ಪಕ್ಷದೊಳಗೆ ಇರುವುದು ಬಿಜೆಪಿ ಶಾಸಕ ಎಚ್. ಹಾಲಪ್ಪ ಹರತಾಳು ಹಾಗೂ ಕುಮಾರ್ ಬಂಗಾರಪ್ಪ ಅವರಿಗೆ ಅವಕಾಶದ ಬಾಗಿಲು ತೆರೆದೀತೆ ಎಂಬ ಪ್ರಶ್ನೆ ಎದುರಾಗಿದೆ.

ಕೆ.ಆರ್. ಪೇಟೆ ಕ್ಷೇತ್ರದವರಾದ ಸಚಿವ ನಾರಾಯಣ ಗೌಡ ಅವರನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದನ್ನು ಸ್ಥಳೀಯ ಬಿಜೆಪಿ ಮುಖಂಡರು ಒಲ್ಲದ ಮನಸ್ಸಿನಿಂದಲೇ ಸ್ವೀಕರಿಸಿದ್ದಾರೆ. ಮಲೆನಾಡು ಪ್ರದೇಶದ ನಾಡಿಮಿಡಿತ ಅರಿತಿರುವ ವ್ಯಕ್ತಿಯನ್ನೇ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂಬ ಒತ್ತಾಯ ಬಿಜೆಪಿಯೊಳಗೆ ಹರಿದಾಡುತ್ತಿದೆ. ಈ ಅಂಶ ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸಲು ಜಿಲ್ಲೆಯ ಬಿಜೆಪಿ ಶಾಸಕರಿಗೆ ಅವಕಾಶ ಮಾಡಿಕೊಟ್ಟಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮುದಾಯ ಪ್ರಮುಖ ಹಿಂದುಳಿದ ವರ್ಗವಾಗಿದೆ. ರಾಜ್ಯದ ಸಚಿವ ಸಂಪುಟದಲ್ಲಿ ಶ್ರೀನಿವಾಸ್ ಪೂಜಾರಿ ಹಾಗೂ ಸುನೀಲ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ ಎಂಬ ಸಮರ್ಥನೆ ಬಿಜೆಪಿ ವಲಯದಲ್ಲಿದೆ. ಆದರೆ, ಇವರಿಬ್ಬರೂ ಪೂಜಾರಿ ಸಮುದಾಯಕ್ಕೆ ಸೇರಿದ್ದು, ದಕ್ಷಿಣ ಕನ್ನಡ ಜಿಲ್ಲೆಯವರಾಗಿರುವುದರಿಂದ ಈ ಭಾಗದ ಈಡಿಗ ಸಮುದಾಯದ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಿದರೆ ಮಾತ್ರ ಇಲ್ಲಿನ ಈಡಿಗರಿಗೆ ಪ್ರಾತಿನಿಧ್ಯ ದೊರಕಿದಂತಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಹೊರತುಪಡಿಸಿ ಈಡಿಗ ಸಮುದಾಯಕ್ಕೆ ಸೇರಿದ ಉಳಿದ ಶಾಸಕರಿಗೆ ಈವರೆಗೆ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ದೊರಕಿಲ್ಲ. ಅದರಲ್ಲೂ ಬಿಜೆಪಿಯಲ್ಲಿ ಹಿಂದುಳಿದ ವರ್ಗದವರಿಗೆಆಯಕಟ್ಟಿನ ಸ್ಥಾನ ದೊರಕುವುದು ಕಷ್ಟ ಎಂಬ ಅಪವಾದದಿಂದ ಹೊರಬರಲು ಶಿವಮೊಗ್ಗ ಜಿಲ್ಲೆಯ ಈಡಿಗ ಸಮುದಾಯದ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಲು ಸಾಧ್ಯವೇ ಎಂಬ ಲೆಕ್ಕಾಚಾರ ಈಗ ನಡೆಯುತ್ತಿದೆ ಎನ್ನಲಾಗಿದೆ.

ಬಿಜೆಪಿ ವರಿಷ್ಠರ ಈ ಲೆಕ್ಕಾಚಾರ ಅನುಷ್ಠಾನಕ್ಕೆ ಬಂದರೆ ಎಚ್. ಹಾಲಪ್ಪ ಹರತಾಳು ಹಾಗೂ ಕುಮಾರ್ ಬಂಗಾರಪ್ಪ ಇವರಿಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ದೊರಕುವುದು ಖಚಿತ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

‘ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಪಕ್ಷ ಜವಾಬ್ದಾರಿ ನೀಡಿದರೆ ಅದನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ’ ಎನ್ನುವ ಮೂಲಕ ಹಾಲಪ್ಪ ಹರತಾಳು ಅವರು ಪರೋಕ್ಷವಾಗಿ ಸಂಪುಟಕ್ಕೆ ಸೇರುವ ಬಯಕೆಯನ್ನುಹೊರಹಾಕಿದ್ದಾರೆ.

ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪ ಅವರ ನಡುವೆ ಆಯ್ಕೆಯ ಪ್ರಶ್ನೆ ಎದುರಾದರೆ ಯಾರಿಗೆ ಮನ್ನಣೆ ದೊರಕುತ್ತದೆ ಎಂಬ ಚರ್ಚೆ ಕೂಡ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಸೊರಬ ಕ್ಷೇತ್ರದ ಮೂಲ ಬಿಜೆಪಿ ನಾಯಕರೊಂದಿಗೆ ಕುಮಾರ್ ಬಂಗಾರಪ್ಪ ಅವರು ಒಳ್ಳೆಯ ಸಂಬಂಧ ಇಟ್ಟುಕೊಳ್ಳದೆ ಇರುವುದು ಅವರಿಗೆ ಹಿನ್ನಡೆಯಾಗಬಹುದು ಎಂಬ ಪ್ರಶ್ನೆ ಎದುರಾಗಿದೆ.

ಸಾಗರ, ಸೊರಬ, ಹೊಸನಗರ ಈ ಮೂರೂ ಕ್ಷೇತ್ರಗಳಿಂದ ಶಾಸಕರಾಗಿ ಆಯ್ಕೆಯಾಗಿರುವ ಹಾಲಪ್ಪ ಹರತಾಳು ಪಕ್ಷದ ಸ್ಥಳೀಯ ಪದಾಧಿಕಾರಿಗಳ ಜೊತೆಗೆ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಅಂಶ ಹಾಲಪ್ಪ ಅವರಿಗೆ ಸಚಿವ ಸ್ಥಾನ ಪಡೆಯಲು ಸಹಕಾರಿಯಾಗಲಿದೆ ಎಂಬುದು ಅವರ ಬೆಂಬಲಿಗರ ನಿರೀಕ್ಷೆ.

ರಾಜಕೀಯ ಲೆಕ್ಕಾಚಾರಗಳೇನೆ ಇದ್ದರೂ ಈಶ್ವರಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಶಿವಮೊಗ್ಗ ಜಿಲ್ಲೆಯ ಶಾಸಕರನ್ನೇ ಸಚಿವರನ್ನಾಗಿ ನೇಮಿಸಬೇಕು ಎಂಬ ಧ್ವನಿ ಪ್ರಬಲವಾಗಿದೆ. ಈ ಮೂಲಕ ಜಿಲ್ಲೆಯ ಮಟ್ಟಿಗೆ ಸೃಷ್ಟಿಯಾಗಿರುವ ರಾಜಕೀಯ ನಿರ್ವಾತವನ್ನು ಬಿಜೆಪಿ ವರಿಷ್ಠರು ತುಂಬಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT