ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಹಣಗೆರೆ ಸುತ್ತ ಹೆಚ್ಚಿದ ಅನೈತಿಕ ಚಟುವಟಿಕೆ?

ಅಕ್ರಮ, ಅವ್ಯವಹಾರ ನಿರಂತರ; ಕಣ್ಮುಚ್ಚಿ ಕುಳಿತ ಆಡಳಿತ; ಸ್ಥಳೀಯರ ಆರೋಪ
Published 8 ಏಪ್ರಿಲ್ 2024, 7:32 IST
Last Updated 8 ಏಪ್ರಿಲ್ 2024, 7:32 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿರುವ ಹಣಗೆರೆಕಟ್ಟೆ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತಾರಾಯ ಚೌಡೇಶ್ವರಿ ದೇವಸ್ಥಾನಗಳಿಂದ ಪ್ರಸಿದ್ಧವಾಗಿದೆ. ಆದರೆ ಈ ಸುತ್ತಮುತ್ತಲ ಪ್ರದೇಶದಲ್ಲಿ ನಿರಂತರವಾಗಿ ಅಕ್ರಮಗಳು ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.

ಮುಜರಾಯಿ ಇಲಾಖೆಗೆ ಸೇರಿದ ಭೂತರಾಯ ಚೌಡೇಶ್ವರಿ ದೇವಸ್ಥಾನದ ಖಾತೆಯಲ್ಲಿ ಅಂದಾಜು ₹12 ಕೋಟಿ ಠೇವಣಿ ಇದೆ. ಪ್ರತೀ ವರ್ಷ ₹2 ಕೋಟಿಗೂ ಹೆಚ್ಚು ಆದಾಯ ಲಭಿಸುತ್ತಿದೆ. ‘ಮುಜರಾಯಿ ಇಲಾಖೆ ಅಧಿಕಾರಿಗಳು ಹುಂಡಿ ಎಣಿಕೆಗೆ ಮಾತ್ರ ಬರುತ್ತಿದ್ದು, ದೇವಸ್ಥಾನದ ಅಭಿವೃದ್ಧಿಗೆ ಕಿಂಚಿತ್ತೂ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಪೊಲೀಸ್‌ ಗಸ್ತು ವ್ಯವಸ್ಥೆ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ಸಿಸಿಟಿವಿ ಕ್ಯಾಮೆರಾ ಇಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ವಿಶೇಷವಾಗಿ ಹುಣ್ಣಿಮೆ, ಅಮಾವಾಸ್ಯೆಯಂದು ಸಾಗರೋಪಾದಿಯಲ್ಲಿ ಭಕ್ತರ ದಂಡು ಜಮಾವಣೆಗೊಳ್ಳುತ್ತದೆ. ದೇವರ ದರ್ಶನಕ್ಕೆ ತೆರಳುವ ಸಂದರ್ಭ ನೂಕುನುಗ್ಗಲು ಏರ್ಪಡುತ್ತಿದ್ದಂತೆಯೇ ಭಕ್ತಾದಿಗಳ ಮೊಬೈಲ್ ಫೋನ್‌, ಪರ್ಸ್, ಬಂಗಾರದ ಸರ, ಬೆಲೆಬಾಳುವ ವಸ್ತುಗಳು ಕಳ್ಳತನ ಪ್ರಕರಣ ವರದಿಯಾಗುತ್ತಿವೆ. 

‘ಹಣಗೆರೆ ಭಾಗದಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆಯ ಹಾವಳಿ ಮಿತಿ ಮೀರಿದೆ. ಬೆಜ್ಜವಳ್ಳಿ-ಆಯನೂರು ಮಾರ್ಗದ ಸಂಪರ್ಕ ರಸ್ತೆಯಲ್ಲಿ ಚಲಿಸುವ ವಾಹನ ಅಡ್ಡಗಟ್ಟಿ ಪುಂಡರ ಗುಂಪುಗಳು ಕಿರಿಕಿರಿ ಉಂಟು ಮಾಡುತ್ತಿವೆ. ಗಾಂಜಾ ಜಾಲದ ಮಾಹಿತಿ ಇದ್ದರೂ ಪೊಲೀಸ್‌ ಇಲಾಖೆ ಕೈಕಟ್ಟಿ ಕೂರುವಂತೆ ರಾಜಕಾರಣಿಗಳೂ ಬೆಂಬಲಿಸುತ್ತಿದ್ದಾರೆ’ ಎಂಬ ಗಂಭೀರ ಆರೋಪಗಳು ಇವೆ. ಇದಕ್ಕೆ ಪುಷ್ಠಿ ನೀಡುವಂತೆ, ಈಗಾಗಲೇ 6 ಗ್ರಾಮಸ್ಥರನ್ನು ರೌಡಿ ಶೀಟರ್‌ ಪಟ್ಟಿಗೆ ಸೇರಿಸಲಾಗಿದೆ. ಗಾಂಜಾ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಆದರೆ ಮಾದಕವಸ್ತು ಜಾಲ ತಡೆಗೆ ಗಂಭೀರ ಯತ್ನ ನಡೆಯುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. 

ಸೌಹಾರ್ದ ಧಾರ್ಮಿಕ ಕೇಂದ್ರದಲ್ಲಿ ನೈತಿಕ ವ್ಯವಹಾರದ ಕಲ್ಪನೆ ಮರೆಯಾಗಿದೆ.

ಹಣಗೆರೆ ಸುತ್ತಮುತ್ತಲ ಗ್ರಾಮದಲ್ಲಿ ಮೊಬೈಲ್ ಫೋನ್ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಕಳ್ಳ ವ್ಯವಹಾರಕ್ಕೆ ವರದಾನವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಲಾಡ್ಜ್‌ಗಳಲ್ಲಿ ಅನೈತಿಕ ಚಟುವಟಿಕೆ: 

‘ಹಣಗೆರೆಯ ಲಾಡ್ಜ್‌ನಲ್ಲಿ ಕಾನೂನು ರೀತಿ ವ್ಯವಹಾರಗಳು ನಡೆಯುತ್ತಿಲ್ಲ. ವಾಸ್ತವ್ಯ ಹೂಡುವವರಿಂದ ಯಾವುದೇ ಮಾಹಿತಿ ಪಡೆಯುತ್ತಿಲ್ಲ. ಮೋಜು, ಮಸ್ತಿಯ ಜೊತೆಗೆ ಅನೈತಿಕ ಚಟುವಟಿಕೆ ನಡೆಸುವವರಿಗೆ ಸುಲಭವಾಗಿ ಲಾಡ್ಜ್‌ ಬಾಡಿಗೆಗೆ ದೊರೆಯುತ್ತಿವೆ. ಕ್ರಿಮಿನಲ್‌ ಹಿನ್ನೆಲೆ ಹೊಂದಿದವರ ಅಡಗುತಾಣವಾಗಿ ಮಾರ್ಪಟ್ಟಿವೆ. 

ಮಹಿಳೆ ಕೊಲೆ ಶಂಕೆ: 

ಇಲ್ಲಿನ ಖಾಸಗಿ ಲಾಡ್ಜ್‌ ಒಂದರಲ್ಲಿ 30 ವರ್ಷದ ಮಹಿಳೆಯ ಮೃತದೇಹ ಬುಧವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣವನ್ನು ಪೊಲೀಸ್‌ ಇಲಾಖೆ ಕೊಲೆ ಪ್ರಕರಣ ಎಂದು ಪರಿಗಣಿಸಿ ತನಿಖೆ ನಡೆಸುತ್ತಿದೆ. ಮುಖ, ತಲೆ, ಮೈಗೆ ಆಯುಧದಿಂದ ಬಲವಾಗಿ ಹೊಡೆದಿರುವ ಗುರುತುಗಳಿವೆ. ಮೂರು ದಿನಗಳ ಹಿಂದೆ ಮೃತಪಟ್ಟ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಲಾಡ್ಜ್‌ನಲ್ಲಿ ಕೊಠಡಿ ಪಡೆದವರ ಮಾಹಿತಿ ಸಂಗ್ರಹಿಸದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಕೊಳೆತ ಸ್ಥಿತಿಯಲ್ಲಿ ‌ಮಹಿಳೆಯ ಶವ ಪತ್ತೆಯಾದ ಹಣಗೆರೆಯ ಖಾಸಗಿ ಲಾಡ್ಜ್ ಮುಂಭಾಗ
ಕೊಳೆತ ಸ್ಥಿತಿಯಲ್ಲಿ ‌ಮಹಿಳೆಯ ಶವ ಪತ್ತೆಯಾದ ಹಣಗೆರೆಯ ಖಾಸಗಿ ಲಾಡ್ಜ್ ಮುಂಭಾಗ
ಒಂಟಿ ಮನೆ ಇರುವ ಗ್ರಾಮಗಳಲ್ಲಿ ಬದುಕು ಕಷ್ಟಕರವಾಗಿದೆ. ಹಣಗೆರೆ ಅವ್ಯವಸ್ಥೆ ಸರಿಪಡಿಸಲು ಜಿಲ್ಲಾಡಳಿತಕ್ಕೆ ಎಷ್ಟು ಬಾರಿ ಮನವಿ ಮಾಡಿದರೂ  ಪ್ರಯೋಜನವಾಗಿಲ್ಲ ವಿಜಯ್‌ ಆರ್‌. ಸೊಗೇದ್‌ ಗ್ರಾಮಸ್ಥ ಹಣಗೆರೆ ಅಭಿವೃದ್ಧಿಗೆ ಕ್ರಿಯಾಯೋಜನೆಗೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇವಸ್ಥಾನದ ಒಳಗಿನ ಕೆಲಸಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ
ಬಿ.ಜಿ. ಜಕ್ಕನಗೌಡರ್‌ ತಹಶೀಲ್ದಾರ್‌
ಹಣಗೆರೆಯಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಸಹಕರಿಸಿದ ಪೊಲೀಸರ ಬಗ್ಗೆ ಖಚಿತ ಮಾಹಿತಿಯಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿ ಆಡಳಿತ ಸಹಕರಿಸಿದರೆ ಸಮಸ್ಯೆ ಬಗೆಹರಿಸಲು ಇಲಾಖೆ ಸಿದ್ಧವಿದೆ
ಗಜಾನನ ವಾಮನ ಸುತಾರ ಡಿವೈಎಸ್‌ಪಿ ತೀರ್ಥಹಳ್ಳಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT