ಭಾನುವಾರ, ಅಕ್ಟೋಬರ್ 24, 2021
25 °C
ಆಹಾರದ ಗುಣಮಟ್ಟಕ್ಕಿಲ್ಲ ಆದ್ಯತೆ, ಅಗ್ಗದ ಊಟ, ಉಪಾಹಾರಕ್ಕೂ ಗ್ರಾಹಕರ ತಾತ್ಸಾರ

ಶಿವಮೊಗ್ಗ: ಬಡವರಿಗೆ ವರವಾಗದ ಇಂದಿರಾ ಕ್ಯಾಂಟೀನ್‌ಗಳು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ದುಡಿಮೆ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡವರಿಗೆ, ಬೀದಿ ಬದಿಯಲ್ಲೇ ಜೀವನ ಕಳೆಯುವ ಅಲೆಮಾರಿಗಳಿಗೆ, ಕೂಲಿಕಾರ್ಮಿಕರಿಗೆ, ಭಿಕ್ಷುಕರಿಗೆ ‘ಇಂದಿರಾ ಕ್ಯಾಂಟೀನ್‌’ಗಳು ವರದಾನವಾಗಿವೆ. ಆದರೆ, ಈಚಿನ ದಿನಗಳಲ್ಲಿ ಕ್ಯಾಂಟೀನ್‌ಗಳಲ್ಲಿ ಅತಿ ಕಡಿಮೆ ದರಕ್ಕೆ ಸಿಗುವ ಆಹಾರ ಸೇವನೆಗೂ ಜನರು ಹಿಂದೇಟು ಹಾಕುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

2013ರಲ್ಲಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ನಂತರ ತಮಿಳುನಾಡಿನ ‘ಅಮ್ಮ ಕ್ಯಾಂಟೀನ್‌’ಗಳ ಮಾದರಿಯಲ್ಲಿ ರಾಜ್ಯದಲ್ಲೂ ಬಡವರಿಗೆ ಅತಿ ಕಡಿಮೆ ದರಕ್ಕೆ ಉಪಾಹಾರ, ಊಟ ಪೂರೈಸಲು ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿದ್ದರು. ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ವಿನೋಬನಗರ ಶಿವಾಲಯದ ಬಳಿ, ಬಿ.ಎಚ್‌.ರಸ್ತೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣ, ಸಾಗರ ರಸ್ತೆಯ ಎಪಿಎಂಸಿ ಆವರಣ ಹಾಗೂ ಖಾಸಗಿ ಬಸ್‌ನಿಲ್ದಾಣದ ಹಿಂಭಾಗ ನಾಲ್ಕು ಕ್ಯಾಂಟೀನ್ ಆರಂಭಿಸಲಾಗಿತ್ತು.

ಅಂದು ಅವಧಿಗೂ ಮೊದಲೇ ಖಾಲಿಯಾಗುತ್ತಿತ್ತು ಆಹಾರ: ಬೆಳಗಿನ ಉಪಾಹಾರಕ್ಕೆ ಬೆಳಿಗ್ಗೆ 7.30ರಿಂದ 10.30ರವರೆಗೆ ಅವಕಾಶ ನೀಡಲಾಗಿದೆ. ₹ 5ಕ್ಕೆ ಸಿಗುತ್ತಿದ್ದ ಇಡ್ಲಿ, ಉಪ್ಪಿಟ್ಟು, ಚಿತ್ರನ್ನ, ರೈಸ್‌ಬಾತ್‌ ಸವಿಯಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ಒಂದು ಹೊತ್ತಿಗೆ 500 ಜನರಿಗಷ್ಟೇ ಅವಕಾಶ ನೀಡಿದ್ದ ಕಾರಣ ಬೆಳಿಗ್ಗೆ 9ಕ್ಕೆ ಎಲ್ಲ ಉಪಾಹಾರ ಖಾಲಿಯಾಗುತ್ತಿತ್ತು. ಮಧ್ಯಾಹ್ನ 2.30ಕ್ಕೆ ಹಾಗೂ ರಾತ್ರಿ 7.30ರಿಂದ ಆರಂಭವಾಗುತ್ತಿದ್ದ ಊಟಕ್ಕೂ ಜನರು ಸರದಿ ನಿಲ್ಲುತ್ತಿದ್ದರು. ₹ 10ಕ್ಕೆ ಸಿಗುತ್ತಿದ್ದ ಅನ್ನ ಸಾಂಬಾರ್, ಮೊಸರನ್ನ ಸವಿಯುತ್ತಿದ್ದರು. ಇಂದು ಅಷ್ಟೇ ದರಕ್ಕೆ ಉಪಾಹಾರ, ಊಟ ಸಿಗುತ್ತಿದ್ದರೂ ಜನರು ಅತ್ತ ಸುಳಿಯುತ್ತಿಲ್ಲ.

ಕ್ಯಾಂಟೀನ್‌ ನಿರ್ವಹಣೆಯಲ್ಲೂ ರಾಜಕೀಯ: ಕಾಂಗ್ರೆಸ್‌ ಸರ್ಕಾರ ಆರಂಭಿಸಿದ್ದ ಮಾಜಿ ಪ್ರಧಾನಿ ಇಂದಿರಾ ಹೆಸರಿನ ಕ್ಯಾಂಟೀನ್‌ ಮುಂದುವರಿಸುವುದು ಈಗನ ಬಿಜೆಪಿ ಸರ್ಕಾರಕ್ಕೆ ಇಷ್ಟವಾಗುತ್ತಿಲ್ಲ. ನಿರ್ವಹಣೆಯ ಗುತ್ತಿಗೆ ಪಡೆದವರಿಗೆ ಐದಾರು ತಿಂಗಳಾದರೂ ಜಿಲ್ಲಾಡಳಿತ, ನಗರ ಪಾಲಿಕೆ ತಮ್ಮ ಪಾಲಿನ ಹಣ ಪಾವತಿಸುತ್ತಿಲ್ಲ. ಇದರಿಂದ ಅಲ್ಲಿ ಕೆಲಸ ಮಾಡುವ ಅಡುಗೆ ಭಟ್ಟರು, ಸಹಾಯಕರು, ಆಹಾರ ವಿತರಕರಿಗೆ ವೇತನ ನೀಡಲು ಆಗುತ್ತಿಲ್ಲ. ಇದರಿಂದ ಸಿಬ್ಬಂದಿ ಬದಲಾಗುತ್ತಿದ್ದಾರೆ. ಆಹಾರದ ಗುಣಮಟ್ಟ ಕಾಪಾಡಿಕೊಳ್ಳುತ್ತಿಲ್ಲ. ನಿಯಮಿತವಾಗಿ ಬಾಗಿಲು ತೆರೆಯುವುದಿಲ್ಲ. ಇದರಿಂದ ಜನರು ಬೇಸತ್ತಿದ್ದಾರೆ. ಕ್ಯಾಂಟೀನ್‌ಗಳಿಂದ ವಿಮುಖರಾಗುತ್ತಿದ್ದಾರೆ ಎನ್ನುತ್ತಾರೆ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್.

ಹಣಕ್ಕಾಗಿ ಗುತ್ತಿಗೆದಾರರರ ಅಲೆದಾಟ: ಕ್ಯಾಂಟೀನ್‌ಗಳನ್ನು ನಡೆಸಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ ಜಿಲ್ಲಾಡಳಿತ, ನಗರ ಪಾಲಿಕೆ ಐದಾರು ತಿಂಗಳಾದರೂ ಹಣ ಪಾವತಿಸುತ್ತಿಲ್ಲ. ಪ್ರತಿ ದಿನ ಗ್ರಾಹಕರಿಂದ ₹ 25 ಸಂಗ್ರಹವಾದರೆ, ಅಷ್ಟೇ ಮೊತ್ತದ ಹಣ ಸರ್ಕಾರ ನೀಡುತ್ತದೆ. ನಗರ ಪಾಲಿಕೆ ವ್ಯಾಪ್ತಿಯ ಕ್ಯಾಂಟೀನ್‌ಗಳ ಬಾಕಿ ಹಣ ಪಾಲಿಕೆ ಭರಿಸುತ್ತದೆ. ಸಮಯಕ್ಕೆ ಸರಿಯಾಗಿ ಹಣ ನೀಡದ ಕಾರಣ ಸಿಬ್ಬಂದಿ ವೇತನವಿಲ್ಲದೆ ಪರಿತಪಿಸುತ್ತಿದ್ದಾರೆ. ಗುತ್ತಿಗೆದಾರರು ನಿರ್ವಹಣೆಯ ಕಡೆ ಗಮನಹರಿಸದೆ ಪಾಲಿಕೆ, ಜಿಲ್ಲಾಡಳಿತದ ಕಚೇರಿಗಳಿಗೆ ಅಲೆಯುವ ಕೆಲಸ ಮಾಡುತ್ತಿದ್ದಾರೆ.

‘ಕೊರೊನಾ ಸಂಕಷ್ಟ ಆರಂಭವಾದ ನಂತರ ಗ್ರಾಹಕರ ಕೊರತೆ ಎದುರಾಗಿದೆ. ಲಾಕ್‌ಡೌನ್‌ ನಂತರ ಸರ್ಕಾರಿ ರಜಾ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತದೆ. ಕ್ಯಾಂಟೀನ್‌ಗಳ ಸಮೀಪ ಬೀದಿಬದಿ ತಿಂಡಿಗಾಡಿಗಳು, ಫುಡ್ ಕೋರ್ಟ್‌ಗಳು ಇವೆ. ಅಲ್ಲೂ ಕಡಿಮೆ ದರದಲ್ಲಿ ಆಹಾರ ಪದಾರ್ಥ ಸಿಗುತ್ತಿರುವ ಕಾರಣ ಜನರು ಮುಖ ಮಾಡುತ್ತಿಲ್ಲ’ ಎನ್ನುತ್ತಾರೆ ಕ್ಯಾಂಟೀನ್‌ಗಳ ಸಿಬ್ಬಂದಿ.

ಪ್ರಸ್ತುತ ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಿಗ್ಗೆಯ ಉಪಾಹಾರಕ್ಕೆ ಇಡ್ಲಿ, ಉಪ್ಪಿಟ್ಟು, ರೈಸ್ ಬಾತ್ ನೀಡಲಾಗುತ್ತಿದೆ. ಇದನ್ನು ವಿಸ್ತರಿಸಿ ವಡೆ, ಚಪಾತಿ ಹಾಗೂ ರವಾ ಇಡ್ಲಿ, ದೋಸೆ ನೀಡಿದರೆ, ಟೀ ಅಥವಾ ಕಾಫಿ ದೊರಕುವಂತಾದರೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎನ್ನುತ್ತಾರೆ ಗ್ರಾಹಕರು.

***

ಲಾಕ್‌ಡೌನ್‌ ಅವಧಿಯ ಅನ್ನಕೇಂದ್ರ

ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರ ಇಂದಿರಾ ಕ್ಯಾ‌ಂಟೀನ್‌ಗಳಲ್ಲಿ ಉಚಿತ ಊಟಕ್ಕೆ ವ್ಯವಸ್ಥೆ ಮಾಡಿತ್ತು. ಆ ಅವಧಿಯಲ್ಲಿ ಸಾಕಷ್ಟು ಜನರ ಹಸಿವು ನೀಗಿಸುವಲ್ಲಿ ಕ್ಯಾಂಟೀನ್‌ ಆಸರೆಯಾಗಿತ್ತು. ನಗರದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ವಿವಿಧ ಭಾಗಗಳಿಂದ ವಲಸೆ ಬಂದ ಜನರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಉಚಿತ ಊಟ, ಉಪಾಹಾರ ಸೇವಿಸುತ್ತಿದ್ದರು.

***

ಇವರು ಏನಂತಾರೆ?

ಕಾಂಗ್ರೆಸ್‌ ಸರ್ಕಾರ ಬಡವರಿಗೆ ನೀಡಿದ ಬಹುದೊಡ್ಡ ಕೊಡುಗೆ. ಕಡಿಮೆ ದರಕ್ಕೆ ಹಸಿದವರಿಗೆ ಅನ್ನ ನೀಡುವ ಇಂತಹ ಯೋಜನೆ ಸ್ಥಗಿತಗೊಳಿಸಲು ಈಗಿನ ಸರ್ಕಾರ ಪಿತೂರಿ ಮಾಡುತ್ತಿದೆ. ಸಮಯಕ್ಕೆ ಸರಿಯಾಗಿ ಹಣ ನೀಡದೆ, ಗುಣಮಟ್ಟಕ್ಕೆ ಆದ್ಯತೆ ನೀಡದೆ ಜನರನ್ನು ನಿಧಾನವಾಗಿ ಕ್ಯಾಂಟೀನ್‌ಗಳಿಂದ ವಿಮುಖ ಮಾಡುತ್ತಿದೆ. ನಂತರ ಜನರೇ ಬರುತ್ತಿಲ್ಲ ಎಂಬ ಕಾರಣ ನೀಡಿ ಬಾಗಿಲು ಮುಚ್ಚುವ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

– ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕ

ಕೊರೊನಾ ಸಂಕಷ್ಟದ ನಂತರ ಇಂದಿರಾ ಕ್ಯಾಂಟೀನ್‌ಗಳಿಗೆ ಜನರು ಬರುವುದು ಕಡಿಮೆಯಾಗಿದೆ. ಲಾಕ್‌ಡೌನ್‌ನಲ್ಲಿ ನಿತ್ಯವೂ ಉಚಿತ ಊಟ ನೀಡುತ್ತಿದ್ದೆವು. ಗುಣಮಟ್ಟ, ಸ್ವಚ್ಛತೆಯ ದೂರುಗಳು ಬಂದಾಗ ಪಾಲಿಕೆಯ ತಂಡದ ಜತೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಎಚ್ಚರಿಕೆ ನೀಡಿದ್ದೇವೆ. ಲಾಕ್‌ಡೌನ್‌ ನಂತರ ಬೀದಿಬದಿ ವ್ಯಾಪಾರಿಗಳೂ ಕಡಿಮೆ ದರಕ್ಕೆ ಆಹಾರ ನೀಡುತ್ತಿರುವ ಕಾರಣ ಜನರು ವಿಮುಖರಾಗುತ್ತಿರಬಹುದು.

–ಸುನಿತಾ ಅಣ್ಣಪ್ಪ, ಮೇಯರ್, ನಗರ ಪಾಲಿಕೆ

ಸಿದ್ದರಾಮಯ್ಯ ಬಡವರಿಗಾಗಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗ ಊಟದ ವ್ಯವಸ್ಥೆ ಸರಿ ಇಲ್ಲ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ಗಳಿಂದ ಊಟ ವಿತರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲಿನ ಕಳಪೆ ಆಹಾರ ಸೇವಿಸಲು ಅವರೂ ನಿರಾಕರಿಸಿದ್ದಾರೆ.

–ರೇಖಾ ರಂಗನಾಥ್, ನಗರ ಪಾಲಿಕೆ ಸದಸ್ಯೆ

ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ₹ 6,500 ಸಂಬಳ ಕೊಡುತ್ತಾರೆ. ನಾಲ್ಕೈದು ತಿಂಗಳಿಗೆ ಒಮ್ಮೆ ಸಂಬಳ ಕೊಡುತ್ತಾರೆ. ಇಎಸ್‌ಐ, ಪಿಎಫ್‌ ಸೌಲಭ್ಯಗಳಿಲ್ಲ. ವೇತನಕ್ಕೆ ಒತ್ತಾಯ ಮಾಡಿದರೆ ಕೆಲಸ ಬಿಡಿ ಎನ್ನುತ್ತಾರೆ.

–ಸುಮಿತ್ರಾ ಬಾಯಿ, ವಿನೋಬನಗರ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿ

ಇಂದಿರಾ ಕ್ಯಾಂಟೀನ್‌ಗಳು ಬಡವರಿಗೆ ವರದಾನವಾಗಿವೆ. ನಿರ್ಗತಿಕರಿಗೆ, ಹೊರಗಿನಿಂದ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರಿಗೆ ವರದಾನವಾಗಿದೆ. ಇಂತಹ ಯೋಜನೆ ಸ್ಥಗಿತಗೊಳಿಸಬಾರದು.

–ಸಂತೋಷ್‌, ಕಾರು ಚಾಲಕ, ವಿನೋಬನಗರ

ತಿಂಡಿ ಎಲ್ಲ ಚೆನ್ನಾಗಿರುತ್ತದೆ. ಉಪ್ಪಿಟ್ಟು, ಸಾಂಬಾರು ನೀರಾಗಿರುತ್ತದೆ. ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.

–ಬಾಬು, ನಾಗರಿಕ, ಎಪಿಎಂಸಿ

₹ 10ಕ್ಕೆ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೇವೆ. ಅಷ್ಟೇ ಸಾಕು ನಮಗೆ. ಇಂದಿರಾ ಕ್ಯಾಂಟೀನ್ ದೇವರಿದ್ದಂತೆ. ಅಲ್ಲಿನ ಸಿಬ್ಬಂದಿ ಅಣ್ಣತಮ್ಮಂದಿರಂತೆ ನೋಡಿಕೊಳ್ಳುತ್ತಾರೆ.

–ವೆಂಕಟೇಶ್, ಕೂಲಿ ಕಾರ್ಮಿಕ, ಬಸ್‌ನಿಲ್ದಾಣ

ಕೊರೊನಾ ಹೆಚ್ಚಳಕ್ಕೂ ಮೊದಲು ಚೆನ್ನಾಗಿ ನಡೆಯುತ್ತಿತ್ತು. ಈಗ ಜನರು ಕಡಿಮೆಯಾಗಿದ್ದಾರೆ. ಶಾಲಾ, ಕಾಲೇಜುಗಳು ಪುನರಾರಂಭವಾಗಿದ್ದು, ಮತ್ತೆ ವ್ಯಾಪಾರ ಹೆಚ್ಚಾಗಬಹುದು.

–ರಾಧಾ, ಡಿಡಿಪಿಐ ಕಚೇರಿ ಆವರಣದ ಕ್ಯಾಂಟೀನ್ ಸಿಬ್ಬಂದಿ

ಬೆಳಿಗ್ಗೆ 7ಕ್ಕೆ ಬರುತ್ತೇವೆ. ಉಪಾಹಾರ ಬರುತ್ತದೆ. ಒಂದು ಹೊತ್ತಿಗೆ 80, 90 ಜನರು ಬರುತ್ತಾರೆ ಅಷ್ಟೇ.

–ವಿಜಯಮ್ಮ, ಎಪಿಎಂಸಿ ಕ್ಯಾಂಟೀನ್‌ ಸಿಬ್ಬಂದಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು