ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕೊಳಚೆ ನೀರು ಶುದ್ಧೀಕರಿಸುವ ‘ಇನ್‌ಲೈನ್’ ಚರಂಡಿ

ಗ್ರಾಮೀಣ ಭಾಗದಲ್ಲಿ ಚರಂಡಿ ತ್ಯಾಜ್ಯ ನೀರು ನಿರ್ವಹಣೆಗೆ ಹೊಸ ಮಾದರಿ; 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನ
Published 14 ಅಕ್ಟೋಬರ್ 2023, 5:59 IST
Last Updated 14 ಅಕ್ಟೋಬರ್ 2023, 5:59 IST
ಅಕ್ಷರ ಗಾತ್ರ

ನಾಗರಾಜ ಹುಲಿಮನೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ನದಿ ಮೂಲಗಳಿಗೆ ಸೇರುವ ಕೊಳಚೆ ನೀರು ಶುದ್ಧೀಕರಿಸುವ ‘ಇನ್‌ಲೈನ್ ಟ್ರೀಟ್‌ಮೆಂಟ್’ ಮಾದರಿಯ ಚರಂಡಿ ನಿರ್ಮಾಣಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂದಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮನೆ ಹಾಗೂ ಸಣ್ಣ ಕೈಗಾರಿಕಾ ಘಟಕಗಳಿಂದ ಉತ್ಪತ್ತಿಯಾಗುವ ಕೊಳಚೆ ನೀರು ಸಂಸ್ಕರಣೆಯಾಗದೇ ನೇರವಾಗಿ ನದಿ ಮೂಲಗಳಿಗೆ ಸೇರುತ್ತಿದೆ. ಇದರಿಂದ ನದಿ ಮೂಲಗಳು ಮಲೀನಗೊಳ್ಳುವ ಜತೆಗೆ ಜಲಚರಗಳು ಅಪಾಯಕ್ಕೆ ಸಿಲುಕುತ್ತಿವೆ. 

ಭೂಮಿಯನ್ನು ನೀಲಿ ಗ್ರಹ ಎಂದು ಕರೆಯಲಾಗುತ್ತದೆ. ಆದರೆ, ನದಿ ಮೂಲಗಳಿಗೆ ಸೇರುತ್ತಿರುವ ಕಲುಷಿತ ನೀರು ಹಾಗೂ ತ್ಯಾಜ್ಯದಿಂದ ನೀಲಿ ಗ್ರಹ ಕಳಂಕ ಎದುರಿಸುತ್ತಿದೆ. ಈ ಉದ್ದೇಶದಿಂದ ಸರ್ಕಾರವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ಜಾರಿಗೊಳಿಸುತ್ತಿದೆ. 

ಸ್ವಚ್ಚ ಭಾರತ, ನರೇಗಾ ಹಾಗೂ 15ನೇ ಹಣಕಾಸು ಯೋಜನೆಗಳಡಿ ಈ ವೈಜ್ಞಾನಿಕ ಮಾದರಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಹಸೂಡಿ ಫಾರ್ಮ್‌, ಹೊಳೆಹೊನ್ನೂರು, ಗಾಜನೂರು, ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಸೇರಿದಂತೆ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್‌ಲೈನ್ ಮಾದರಿ ಅಳವಡಿಸಲಾಗಿದೆ. ಜೊತೆಗೆ 180 ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೆ ತರಲು ಕ್ರಿಯಾಯೋಜನೆ ರೂಪಿಸಲಾಗಿದೆ. 

ಇನ್‌ಲೈನ್ ವಿಧಾನ ಅನುಷ್ಠಾನದಿಂದ ದುಃಸ್ಥಿತಿಯಲ್ಲಿರುವ ಚರಂಡಿಗಳು ಹೊಸ ರೂಪ ಪಡೆಯಲಿವೆ. ಅದರ ಜೊತೆಗೆ ಗ್ರಾಮೀಣ ಜನರಿಗೆ ತ್ಯಾಜ್ಯ ವಿಲೇವಾರಿ ಬಗ್ಗೆ ಅರಿವು ಮೂಡಿಸುವುದು ಕೂಡ ಯೋಜನೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಇನ್‌ಲೈನ್?: ಗ್ರಾಮದಿಂದ ಚರಂಡಿ ಮೂಲಕ ಹರಿದು ಬರುವ ಕಸ, ತ್ಯಾಜ್ಯ ಹಾಗೂ ಕಲುಷಿತ ನೀರನ್ನು ಹಂತ ಹಂತವಾಗಿ ಶುದ್ಧಿಕರಿಸಲು ಚರಂಡಿಗೆ ವೈಜ್ಞಾನಿಕ ಇಂಗುಗುಂಡಿ ಹಾಗೂ ಕಬ್ಬಿಣದ ಮೆಶ್ ಅಳವಡಿಸಲಾಗುತ್ತದೆ. ಇದು ಕಸವನ್ನು ತಡೆದು, ಶೇಖರಣೆ ಮಾಡುವುದರ ಜೊತೆಗೆ ನೀರು ಭೂಮಿಯಲ್ಲಿ ಇಂಗಲು ಸಹಕಾರಿಯಾಗಿದೆ. ಮೆಶ್‌ನಲ್ಲಿ ಶೇಖರಣೆಗೊಂಡ ಕಸ ವಿಲೇವಾರಿ ಮಾಡಲು ಸ್ಥಳೀಯ ನೀರು ಸರಬರಾಜು ಸಿಬ್ಬಂದಿಗೆ ಸೂಚಿಸಲಾಗಿದೆ. 

ನಗರ ಭಾಗಕ್ಕೂ ವಿಸ್ತರಿಸಲಿ: ನಗರದಲ್ಲಿ 30ಕ್ಕೂ ಹೆಚ್ಚು ರಾಜ ಕಾಲುವೆಗಳಿವೆ. ಆದರೆ, ಕಾಲುವೆ ಮೂಲಕ ಹರಿದು ಬರುವ ತ್ಯಾಜ್ಯ ಹಾಗೂ ಕಲುಷಿತ ನೀರು ಶುದ್ಧಿಕರಿಸಲು ಯಾವುದೇ ವೈಜ್ಞಾನಿಕ ವಿಧಾನ ಪಾಲಿಸುತ್ತಿಲ್ಲ. ಇದರಿಂದ ನೇರವಾಗಿ ತ್ಯಾಜ್ಯ ಹಾಗೂ ಕೊಳಚೆಯ ನೀರು ತುಂಗಾ ಮೂಲ ಸೇರುತ್ತಿದೆ. ಇದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಪರಿಸರಾಸಕ್ತ ನಾಗೇಶ್ ಈಶ್ವರವನ ಕೋರುತ್ತಾರೆ.  

ಜಿಲ್ಲೆಯಾದ್ಯಂತ ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಪಂಚಾಯಿತಿ ಹಂತದಲ್ಲಿ ಯೋಜನೆಯ ಅಂದಾಜು ಮೊತ್ತ ₹1.5 ರಿಂದ ₹2 ಲಕ್ಷ. ಹಳ್ಳಿಗಳ ಅಭಿವೃದ್ಧಿ ಹಾಗೂ ನದಿ ಮೂಲಗಳ ಜೀವಂತಿಕೆ ಕಾಪಾಡುವುದು ಈ ಯೋಜನೆ ಉದ್ದೇಶ
-ಸ್ನೇಹಲ್ ಸುಧಾಕರ್ ಲೋಖಂಡೆ ಜಿ. ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT