ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗಕ್ಕೆ ಬರಲು ಹೂಡಿಕೆದಾರರ ಹಿಂದೇಟು: ಡಿಕೆಶಿ

ವಿಮಾನ ನಿಲ್ದಾಣ ಇದ್ದರೂ ₹5,000 ಕೋಟಿ ಬಂಡವಾಳ ಬರಲಿಲ್ಲ: ಆರೋಪ
Last Updated 29 ನವೆಂಬರ್ 2022, 7:05 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಮಾನ ನಿಲ್ದಾಣ ಮಾಡಿದರೂ ಯಡಿಯೂರಪ್ಪ ಅವರಿಗೆ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಶಿವಮೊಗ್ಗಕ್ಕೆ ₹ 5,000 ಕೋಟಿ ಬಂಡವಾಳ ತರಲು ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.

ನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಜನಾಕ್ರೋಶ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೊಲೆ, ಕೋಮುಗಲಭೆಗಳಿಂದ ಶಿವಮೊಗ್ಗ ನಲುಗಿದೆ. ಹೀಗಾಗಿ ಯಾವೊಬ್ಬ ಬಂಡವಾಳ ಹೂಡಿಕೆದಾರರು ಇಲ್ಲಿಗೆ ಬರುತ್ತಿಲ್ಲ’ ಎಂದರು.

ಸಂಜೆ 6 ಗಂಟೆಯಾದರೆ ಅಂಗಡಿ ಮುಚ್ಚಬೇಕು. ಬಿಜೆಪಿಗೆ ಮತ ಹಾಕಿದ್ದ
ವರ್ತಕರೇ ಇಂದು ಸಂಕಷ್ಟ ಅನುಭವಿಸು
ತ್ತಿದ್ದಾರೆ. ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ರಾಜ್ಯಕ್ಕೆ ₹ 10 ಲಕ್ಷ ಕೋಟಿ ಬಂಡವಾಳ ಹರಿದುಬಂದಿದೆ ಎಂದು ಸರ್ಕಾರ ಹೇಳಿದರೂ ಶಿವಮೊಗ್ಗಕ್ಕೆ ನಯಾಪೈಸೆ ಬರಲಿಲ್ಲ. ಇದಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ ಕೂಡ ಉತ್ತರಿಸಬೇಕು ಎಂದರು.

ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ 302 ರೈತರಿಗೆ ಇನ್ನೂ ಈ ಸರ್ಕಾರಕ್ಕೆ ನಿವೇಶನ ಕೊಡಲು ಆಗಿಲ್ಲ. ಸಂತ್ರಸ್ತರ ಸಮಸ್ಯೆ ಪರಿಹರಿಸಲಿದ್ದಾರೆಯೇ ಎಂದು ಪ್ರಶ್ನಿಸಿದರು.

‘ಅಧಿಕಾರ ಇರುವುದು ದುಡ್ಡು ಹೊಡೆಯಲು, ಶೋಷಣೆ ಮಾಡಲು ಅಲ್ಲ. ಮಲೆನಾಡಿನಲ್ಲಿ ಸಮಸ್ಯೆಗಳು ಇವೆ. ಅವುಗಳನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ಎಲ್ಲರದ್ದು’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ‘ಒಂದಿಂಚೂ ಬಗರ್‌ಹುಕುಂ ಭೂಮಿ ನಮ್ಮ ಕುಟುಂಬ ಪಡೆದಿಲ್ಲ. ಆದರೂ ನಿಮ್ಮನ್ನು (ಸಂತ್ರಸ್ತರು) ಕೈ ಬಿಡಬಾರದು ಎಂಬುದು ನಮ್ಮ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿದ್ದೇನೆ. ಹೋರಾಟದ ಮೂಲಕ ಮಾತ್ರ ಹಕ್ಕು ಪಡೆಯಲು ಸಾಧ್ಯ ಎಂಬುದನ್ನು ಸಾಬೀತು ಮಾಡೋಣ. ಪಕ್ಷದ ಹಿರಿಯರ ನಿಲುವು ಕೂಡ ಇದೆ’ ಎಂದರು.

ಸಮಾಜವಾದಿಗಳ, ಹುಟ್ಟು ಹೋರಾಟಗಾರರ ನೆಲೆ ಇದು. ಇಲ್ಲಿನ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಅವರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಮುಂದೆ ಬರಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಕೊಟ್ಟಿತ್ತು. ಯಡಿಯೂರಪ್ಪ ಸಿಎಂ ಆದಾಗ ವಿಶೇಷ ಹಕ್ಕು ಕೊಟ್ಟ ಭೂಮಿಗಳನ್ನು ಕಿತ್ತುಕೊಂಡು ಭೂಗಳ್ಳರು ಎಂಬ ಹಣೇಪಟ್ಟಿ ಹಚ್ಚಿತು ಎಂದುಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಕಿಡಿಕಾರಿದರು.

‘ಅಡಿಕೆಗೆ ಅಪಮಾನ ಮಾಡಿದವರು ಬಿಜೆಪಿಯವರು. ವಾಜಪೇಯಿ ಪ್ರಧಾನಿ ಆಗಿದ್ದಾಗ ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ವರದಿ ಕೊಟ್ಟ ಫಲವನ್ನು ಈಗ ಬೆಳೆಗಾರರು ಅನುಭವಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅಡಿಕೆ ಬೆಳೆಗಾರರಿಗೆ ಗೌರವ ತಂದು ಕೊಡುವುದಾಗಿ ಹೇಳುತ್ತಾರೆ ಇನ್ನೊಂದು ಕಡೆ ಅವರದ್ದೇ ಸರ್ಕಾರದ ಆರೋಗ್ಯ ಮಂತ್ರಿ ಅಡಿಕೆ ನಿಷೇಧಿಸುವುದಾಗಿ ಹೇಳುತ್ತಾರೆ. ಇದೇ ಸರ್ಕಾರ ಇದ್ದರೆ ಅಡಿಕೆ ಬೆಳೆಗಾರರನ್ನು ನಾಶಪಡಿಸುತ್ತಾರೆ' ಎಂದುರಮೇಶ ಹೆಗಡೆ ಹೇಳಿದರು.

ಬಿಜೆಪಿಯವರ ಮನೆ ಹಾಳಾಗ: ಸಂಗಮೇಶ್ವರ ಕಿಡಿ

‘ಸಿ.ಟಿ.ರವಿ ಮೊನ್ನೆ ಮೊನ್ನೆ ಕಣ್ಣು ಬಿಟ್ಟಿರುವ ಬಚ್ಚಾ. ಬೇರೆ ಬೇರೆ ಹೆಸರಲ್ಲಿ ಭರ್ಜರಿ ಆಸ್ತಿ ಮಾಡಿದ್ದಾನೆ. ಹೈಕಮಾಂಡ್ ಮೆಚ್ಚಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾನೆ' ಎಂದುಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

‘ಧರ್ಮ ಧರ್ಮದ ಮಧ್ಯೆ ವೈಮನಸ್ಸು ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಿಜೆಪಿಯವರ ಕೆಲಸ. ದೇವಸ್ಥಾನದಲ್ಲಿ ಮುಸ್ಲಿಮರು ವ್ಯಾಪಾರ ಮಾಡುವಂತಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇವರ ಮನೆ ಹಾಳಾಗ’ ಎಂದು ಹಿಡಿಶಾಪ ಹಾಕಿದರು.

‘ಪ್ರಧಾನಿ ನರೇಂದ್ರ ಮೋದಿ ಭದ್ರಾವತಿಯ ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆಗಳನ್ನು ಮುಚ್ಚಲು ಹೊರಟಿದ್ದಾರೆ. ನೆಮ್ಮದಿಯಾಗಿ ಜೀವನ ಮಾಡಬೇಕಿದ್ದರೆ ಕಾಂಗ್ರೆಸ್ ಬೆಂಬಲಿಸಿ’ ಎಂದರು.

ಸ್ಥಳೀಯವಾಗಿ ಎಚ್ಚರವಹಿಸಿ

ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತರ ಹೆಸರನ್ನು ಮತದಾರರ ಪಟ್ಟಿಯಿಂದ ಬಿಜೆಪಿಯವರು ತೆಗೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಕಳೆದ ಆರು ತಿಂಗಳಲ್ಲಿ 27ಲಕ್ಷ ಹೆಸರನ್ನು ತೆಗೆಯುವ ಹಾಗೂ ಸೇರಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಸ್ಥಳೀಯವಾಗಿ ಎಚ್ಚರವಹಿಸುವಂತೆ ಪಕ್ಷದ ಪದಾಧಿಕಾರಿಗಳಿಗೆ ತಿಳಿಸಿದರು.

ಭತ್ತಕ್ಕೆ ಪ್ರೋತ್ಸಾಹ ಧನ ನೀಡುವ ವಿಚಾರದಲ್ಲಿ ಈ ಸರ್ಕಾರ ರೈತಾಪಿ ಸಮುದಾಯವನ್ನೇ ಒಡೆದಿದೆ. ಕೂಡಲೇ ಎಲ್ಲ ರೈತರಿಗೂ ಪ್ರೋತ್ಸಾಹಧನ ಘೋಷಿಸಿ ಆದೇಶ ಮಾಡಲಿ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಬಡ ಕುಟುಂಬಕ್ಕೂ 10 ಕೆ.ಜಿ ಅಕ್ಕಿ ಉಚಿತವಾಗಿ ಕೊಡಲಿದ್ದೇವೆ. ಬಡವರ ಮಕ್ಕಳು ಹೊಟ್ಟೆತುಂಬ ಊಟ ಮಾಡಬೇಕು ಎಂಬ ಆಶಯ ನಮ್ಮದು.

-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT