ಭಾನುವಾರ, ಮಾರ್ಚ್ 26, 2023
23 °C

ಲಸಿಕೆ ದೊರೆಯದೆ ವಾಪಸಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲು ಇಲ್ಲಿನ ದೇವರಾಜ ಅರಸು ಸಭಾಭವನಕ್ಕೆ ಮಂಗಳವಾರ ಬಂದಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಲಸಿಕಾ ಕೇಂದ್ರದಲ್ಲಿ ಲಸಿಕೆ ಸಂಗ್ರಹವಿಲ್ಲದ ಕಾರಣ ಮನೆಗೆ ಮರಳಬೇಕಾಯಿತು.

ಕಾಗೋಡು ತಿಮ್ಮಪ್ಪ ಅವರಿಗೆ ಎರಡನೇ ಡೋಸ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಮಂಗಳವಾರ ಬರುವಂತೆ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗಿತ್ತು. ಆ ಪ್ರಕಾರ ಅವರು ಲಸಿಕಾ ಕೇಂದ್ರಕ್ಕೆ ಬಂದರೆ ‘ಲಸಿಕೆ ಸಂಗ್ರಹವಿಲ್ಲ’ ಎಂಬ ಫಲಕ ನೋಡಿ ವಾಪಸ್ ಹೋಗಬೇಕಾಯಿತು.

ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲರಿಗೂ ಉಚಿತವಾಗಿ ಕೋವಿಡ್ ತಡೆ ಲಸಿಕೆ ಹಾಕುವುದಾಗಿ ವ್ಯಾಪಕ ಪ್ರಚಾರ ನೀಡಿದೆ. ಆದರೆ, ಅಗತ್ಯ ಪ್ರಮಾಣದಲ್ಲಿ ಲಸಿಕಾ ಕೇಂದ್ರಗಳಿಗೆ ಲಸಿಕೆ ಸರಬರಾಜು ಆಗದೆ ಇರುವುದು ದುರದೃಷ್ಟಕರ’ ಎಂದರು.

‘ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗದ ಜನರಿಗೂ ಲಸಿಕೆ ಕೊರತೆ ಸಮಸ್ಯೆ ಕಾಡುತ್ತಿದೆ. ಲಸಿಕಾ ಕೇಂದ್ರಗಳಿಗೆ ಸುರಿಯುವ ಮಳೆಯಲ್ಲಿ ಬರುವ ಜನರು ಲಸಿಕೆ ಸಿಗದೆ ನಿರಾಶರಾಗಿ ಮರಳುತ್ತಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

‘ಲಸಿಕೆ ಸರಬರಾಜಿನಲ್ಲಿ ಕೊರತೆ ಇರುವುದು ನಿಜ. ಸರ್ಕಾರ ತುರ್ತಾಗಿ ಲಸಿಕೆ ಸರಬರಾಜು ಮಾಡದೆ ಇದ್ದರೆ ಅಗತ್ಯವಿರುವ ಎಲ್ಲರಿಗೂ ಲಸಿಕೆ ನೀಡುವುದು ಸಾಧ್ಯವಿಲ್ಲ. 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ನೀಡುವ ಸಂಬಂಧ ಇನ್ನೂ ಸರ್ಕಾರದ ಆದೇಶ ಬಂದಿಲ್ಲ’ ಎಂದು ಲಸಿಕಾ ಕೇಂದ್ರದ ಸಂಯೋಜಕ ಮ.ಸ.ನಂಜುಂಡಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು