ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಧಾರವಾಡ ಮತ್ತು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಕಂಸಾಳೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಆರ್.ಹಾಲೇಶ್, ಟಿ.ಬಿ.ಪ್ರತಿಭಾ, ಸಿ.ಶಿವಕುಮಾರನಾಯ್ಕ, ಜಿ.ಎಸ್.ಹಾಲೇಶಪ್ಪ, ಬಿ.ಭರತ್, ಎನ್.ಬಿ.ಪ್ರವೀಣ್, ಎಸ್.ಎನ್.ಮೇಘನಾ, ಎಂ.ಕೆ.ಸುಶ್ಮಿತಾ, ಯೋಗೀಶ್, ಸಿ.ಪಿ.ಶರತ್ ಅವರನ್ನು ಅಭಿನಂದಿಸಲಾಯಿತು.
‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಠ್ಯದಲ್ಲಷ್ಟೇ ಅಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯ ಹಾಗೂ ಸಹ್ಯಾದ್ರಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ’ ಎಂದು ಪ್ರಾಂಶುಪಾಲ ಕೆ.ಬಿ.ಧನಂಜಯ ಹೇಳಿದರು.
‘ನಮ್ಮ ವಿದ್ಯಾರ್ಥಿಗಳು ಕಂಸಾಳೆ ಕಲಿತು ಬಹುಮಾನ ಜಯಿಸಿದ್ದಾರೆ. ಗ್ರಾಮೀಣ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಕಾಲೇಜಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಸ್ಥಳೀಯ ಕಲೆಗಳನ್ನು ಕರಗತ ಮಾಡಿಕೊಂಡು ಸಾಂಸ್ಕೃತಿಕ ಅರಿವನ್ನು ವಿಸ್ತರಿಸುತ್ತಿದ್ದಾರೆ’ ಎಂದು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್ ತಿಳಿಸಿದರು.
ರಾಜ್ಯದ 105ಕ್ಕೂ ಹೆಚ್ಚು ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಾಧ್ಯಾಪಕ ಜಿ.ಆರ್.ಲವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.