ಶನಿವಾರ, ಡಿಸೆಂಬರ್ 3, 2022
19 °C
ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಈಶ್ವರಪ್ಪ

ಹಿಂದುತ್ವದ ಮೊದಲ ಪ್ರತಿಪಾದಕ ಕನಕದಾಸರು: ಕೆ.ಎಸ್.ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹಿಂದುತ್ವದ ಮೊದಲ ಪ್ರತಿಪಾದಕರೇ ಕನಕದಾಸರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. 

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿಗಳ ನಡುವಿನ ಬಡಿದಾಟವನ್ನು 535 ವರ್ಷಗಳ ಹಿಂದೆಯೇ ಕನಕದಾಸರು ಒಂದೇ ವಾಕ್ಯದಲ್ಲಿ ವಿರೋಧಿಸಿದ್ದರು. ಆ ನಿಟ್ಟಿನಲ್ಲಿ ಕುಲ ಕುಲವೆಂದು ಬಡಿದಾಡದಿರಿ ಎಂದು ಹಾಡಿದ್ದರು. ಹಿಂದೂ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಹೊಡೆದಾಟ ಬೇಡ ಎಲ್ಲರೂ ಒಂದಾಗಬೇಕೆಂದು ಹೇಳಿದ್ದರಿಂದ ಹಿಂದುತ್ವದ ಪ್ರತಿಪಾದಕರ ಸಾಲಿನಲ್ಲಿ ಕನಕದಾಸರು ಮೊದಲಿಗರಾಗುತ್ತಾರೆ ಎಂದು ತಿಳಿಸಿದರು.

535 ವರ್ಷಗಳ ಹಿಂದೆ  ಜಾತಿಗಳ ವ್ಯವಸ್ಥೆ ಹೇಗಿತ್ತೋ ಆ ವ್ಯವಸ್ಥೆ ಇನ್ನೂ ಹಾಗೆಯೇ ಮುಂದುವರೆದಿದೆ. ಅದು ಮುಂದುವರೆಯಬಾರ ಹೀಗೆಯೇ ಮುಂದುವರೆದರೆ ಈ ದೇಶವನ್ನು ವಿಶ್ವವೇ ಗೌರವಿಸುವುದಿಲ್ಲ. ನಮ್ಮನ್ನೂ ಗೌರವಿಸುವುದಿಲ್ಲ. ಸಾಮಾಜಿಕ ನ್ಯಾಯದ ಮಾತುಗಳು ಕೇವಲ ಭಾಷಣಗಳಿಗೆ ಸೀಮಿತಗೊಳ್ಳುತ್ತದೆ. ಹಾಗಾಗಿ ಹಿಂದೂಗಳ ನಡುವೆ ವೈಮನಸ್ಸು  ಬೆಳೆಯದಂತೆ  ನೋಡಿಕೊಳ್ಳಬೇಕು ಎಂದರು.

'ಕನಕ ದಾಸರ ಜಯಂತಿಯ ದಿನದಂದು ರಜೆ ಘೋಷಿಸುವ ನಿರ್ಣಯ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕಲ್ಬುರ್ಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೆ ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದರು. 

ಎಲ್ಲೋ ಕೋಮು ಗಲಭೆಯಂತಹ ಘಟನೆಗಳು ನಡೆದು ಯಾರೊ ಅಮಾಯಕರು ಹತ್ಯೆಯಾಗುತ್ತಾರೆ. ಇದಕ್ಕೆ ಗಾಳಿ ಸುದ್ದಿ ಕಾರಣವಾಗಿರುತ್ತದೆ. ಹಾಗಾಗಿ ಘಟನೆ ನಡೆದ ತಕ್ಷಣ ಸಾರ್ವಜನಿಕರು ಪೊಲೀಸರಿಗೆ ತಿಳಿಸುವ ಮೂಲಕ ಗಲಭೆಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.   

ಮೇಯರ್ ಶಿವಕುಮಾರ್, ಕಾಂಗ್ರೆಸ್ ವಿರೋಧ ಪಕ್ಷದ ನಾಯಕಿ ರೇಖಾರಂಗನಾಥ್, ಸದಸ್ಯ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಭಾಗಿಯಾಗಿದ್ದರು.

***

‘ಕನಕರ ಚಿಂತನೆ ಬದುಕಿಗೆ ಅಳವಡಿಸಿಕೊಳ್ಳೋಣ’

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶ್ರೇಷ್ಠ ದಾಸ ಸಾಹಿತಿ ಕನಕದಾಸರು ಕುಲಕುಲವೆಂದು ಬಡಿದಾಡುವಿರೇಕೆ ಎಂಬ ಚಿಂತನೆಯನ್ನು ಮಾನವ ಕುಲಕ್ಕೆ ಒಳ್ಳೆಯದಾಗಲು ನೀಡಿದ್ದಾರೆ. ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಅರ್ಥಪೂರ್ಣವಾಗುತ್ತದೆ ಎಂದರು.

ಕನಕದಾಸರ ಜಯಂತಿಗೆ ರಜೆಯ ಅಗತ್ಯವಿಲ್ಲ. ಅಂದು ನಾವೆಲ್ಲ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಕಾಗಿನೆಲೆ ಪೀಠದ ಶ್ರೀಗಳು ಹೇಳಿದ್ದಾರೆ. ಸರ್ಕಾರಕ್ಕೂ ವಿನಂತಿಯನ್ನು ಸಲ್ಲಿಸಿದ್ದಾರೆ ಎಂಬುದನ್ನು ರಾಘವೇಂದ್ರ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು