ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲೂಕು ಪಂಚಾಯಿತಿ ಸದಸ್ಯೆಯಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ!

Last Updated 17 ಡಿಸೆಂಬರ್ 2020, 3:08 IST
ಅಕ್ಷರ ಗಾತ್ರ

ಹೊಸನಗರ: ತಾಲ್ಲೂಕು ಪಂಚಾಯಿತಿ ಸದಸ್ಯೆ ಅಶ್ವಿನಿ ಪಾಟೀಲ್ ಮರಳಿ ಗ್ರಾಮ ಪಂಚಾಯಿತಿಗೆ ಉಮೇದುವಾರಿಕೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ತಾಲ್ಲೂಕಿನ ನಗರ ಕ್ಷೇತ್ರದ ಬಿಜೆಪಿ ಸದಸ್ಯೆಯಾದ ಅಶ್ವಿನಿ ಪಾಟೀಲ್ ಬುಧವಾರ ಇಲ್ಲಿನ ಕರಿಮನೆ ಗ್ರಾಮದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಅಶ್ವಿನಿ ಪಾಟೀಲ್ 2014ರಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಕಂಡಿದ್ದರು. ನಂತರ ಎದುರಾದ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಗೆದ್ದು ತಾಲ್ಲೂಕು ಪಂಚಾಯಿತಿ ಸದಸ್ಯೆ ಆದರು. ಇದೀಗ ಮತ್ತೆ ಗ್ರಾಮ ಪಂಚಾಯಿತಿ ಸ್ಥಾನಕ್ಕೆ ಆಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ.

‘ಜನಸೇವೆ ಮಾಡುವಲ್ಲಿ ಗ್ರಾಮ ಪಂಚಾಯತಿ ಸೂಕ್ತ ವೇದಿಕೆ ಆಗಿದೆ. ಇಲ್ಲಿನ ಜನರ ನಾಡಿಮಿಡಿತ ಅರಿತು ಸ್ಥಳೀಯವಾಗಿ ಉತ್ತಮ ಕೆಲಸ ಮಾಡಲು ಸಾಧ್ಯವಿದೆ. ಅಲ್ಲದೆ ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಇದರಲ್ಲಿ ಅಧಿಕಾರದ ಆಸೆ ಇಲ್ಲ’ ಎಂದು ಅಶ್ವಿನಿ ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮತದಾನ ಹಕ್ಕು ಮೊಟಕು: ಈ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮ ಪಂಚಾಯಿತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರದ ಕಾರಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಅಶ್ವಿನಿ ಪಾಟೀಲ್ ಅವರಿಗೆ ಮತದಾನ ಹಕ್ಕು ಮೊಟಕುಗೊಂಡಿತ್ತು.

ಈ ಬಗ್ಗೆ ಆಕ್ಷೇಪ ಸಲ್ಲಿಸಿ ಹೈಕೋರ್ಟ್ ಮೊರೆಹೋಗಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಜಿ. ಚಂದ್ರಮೌಳಿ ಅಧ್ಯಕ್ಷ ಚುನಾವಣೆ ವೇಳೆ ಮತದಾನ ಹಕ್ಕು ನಿರ್ಬಂಧಿಸಿ ಆದೇಶ ತಂದಿದ್ದರು. ಇದರಿಂದ ವಿಚಲಿತಗೊಂಡ ಅಶ್ವಿನಿ ಅಧ್ಯಕ್ಷರ ಚುನಾವಣೆಯಲ್ಲಿ ಚಂದ್ರಮೌಳಿ ಅವರಿಗೆ ಬೆಂಬಲ ಸೂಚಿಸುವುದಾಗಿ ಸಿಂಗದೂರು ದೇವಿ ಹೆಸರಿನಲ್ಲಿ ಆಣೆ ಮಾಡಿದ್ದರು ಎನ್ನಲಾಗಿದೆ.

ನಂತರ ಎರಡನೇ ಅವಧಿಯ ಅಧ್ಯಕ್ಷರ ಚುನಾವಣೆಯಲ್ಲಿ ಈ ಆಣೆ ಪ್ರಮಾಣ ದೊಡ್ಡ ಸುದ್ದಿ ಆಗಿತ್ತು. ಕೊನೆಗೆ ಅಶ್ವಿನಿ ಪಾಟೀಲ್ ಪಕ್ಷದ ಒತ್ತಡಕ್ಕೆ ಮಣಿದು ಬಿಜೆಪಿ ಅಭ್ಯರ್ಥಿ ಆಲುವಳ್ಳಿ ವೀರೇಶ್‌ಗೆ ಮತ ಚಲಾಯಿಸಿದ್ದರು. ಆಗ ಮತ್ತೆ ಪ್ರಕರಣ ದೇವಸ್ಥಾನದ ಮೆಟ್ಟಿಲೇರಿ ಕೌತುಕ ಮೂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT