ಗುರುವಾರ , ನವೆಂಬರ್ 26, 2020
22 °C

PV Web Exclusive | ಶತಮಾನದತ್ತ ಸಾಗಿದರೂ ಜನಪರವಾಗದ ‘ಕರ್ನಾಟಕ ಸಂಘ’

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅಧಿಕಾರದ ಅವಧಿ ಇರುವಾಗಲೇ ಶಿವಮೊಗ್ಗ ಕರ್ನಾಟಕ ಸಂಘದ ಪ್ರಮುಖ ಪದಾಧಿಕಾರಿಗಳು ರಾಜೀನಾಮೆ ನೀಡಿದರಂತೆ. ಎಂಟು ವರ್ಷಗಳು ಕಾರ್ಯದರ್ಶಿಯಾಗಿ ಕ್ರೀಯಾಶೀಲರಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದ ಎಚ್‌.ಎಸ್‌.ನಾಗಭೂಷಣ ಅವರೂ ಸ್ಥಾನ ತೊರೆದರಂತೆ ಎಂದು ಸ್ನೇಹಿತರು ಮಾಹಿತಿ ನೀಡಿದರು.

ಸಂಘದ ಹಲವರಿಗೆ ಕರೆ ಮಾಡಿ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸಿದಾಗಲೇ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಐಕಾನ್ ಎಂದೇ ಪ್ರಸಿದ್ಧಿ ಪಡೆದಿರುವ ಕರ್ನಾಟಕ ಸಂಘದ ಆಂತರಿಕ ಸಂಘರ್ಷ ತಾರಕಕ್ಕೇರಿರುವ ವಿಷಯ ಖಚಿತವಾಯಿತು. ಅಧ್ಯಕ್ಷ ಕೆ.ಓಂಕಾರಪ್ಪ, ಕಾರ್ಯದರ್ಶಿ ಎಚ್‌.ಎಸ್.ನಾಗಭೂಷಣ್, ಖಜಾಂಚಿ ಡಾ.ಕೆ.ಜಿ.ವೆಂಕಟೇಶ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರಬಂದಿರುವುದನ್ನು ದೃಢಪಡಿಸಿದರು.

ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿದ್ದ ಪ್ರಸಿದ್ಧ ಸಂಸ್ಥೆಯೊಂದು 90 ವರ್ಷಗಳು ಗತಿಸಿದರೂ ಜನಪರವಾಗದೇ ಹೇಗೆ ಉದ್ದೇಶಿತ ಕಾರ್ಯದಿಂದ ವಿಮುಖವಾಗಿದೆ, ಸಂಘರ್ಷದ ತಾಣವಾಗಿ ಬದಲಾಗಿದೆ ಎನ್ನುವುದಕ್ಕೆ ಈ ಸಂಘ ಸಾಕ್ಷಿ.

ನಗರದ ಸಮಾನಮನಸ್ಕ ಸಾಹಿತ್ಯಾಸಕ್ತರು ಸೇರಿ ಕನ್ನಡ ಬಾಷೆ, ಸಾಹಿತ್ಯದ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು 1930ರಲ್ಲಿ ಸಂಘ ಕಟ್ಟುವ ಆಲೋಚನೆ ಮಾಡಿದ್ದರು. ಗುರುರಾವ್‌ ದೇಶಪಾಂಡೆ, ಕೂಡಲಿ ಚಿದಂಬರಂ, ಆನಂದ, ಎಸ್‌.ವಿ.ಕೃಷ್ಣಮೂರ್ತಿ ಶಾಸ್ತ್ರಿ, ಭೂಪಾಳಂ ಚಂದ್ರಶೇಖರಯ್ಯ, ಭೂಪಾಳಂ ಪುಟ್ಟ ನಂಜಯ್ಯ, ದೇವಂಗಿ ಮಾನಪ್ಪ ಸಂಘದ ಸ್ಥಾಪನೆಗೆ ಕಾರಣರಾಗಿದ್ದರು. ಅಂದಿನ ನಗರಾಡಳಿತ ಸಂಘಕ್ಕೆ ಜಾಗ ಮಂಜೂರು ಮಾಡಿತ್ತು. ಭವನ ನಿರ್ಮಾಣಕ್ಕೆ ಹಸೂಡಿ ವೆಂಕಟಶಾಸ್ತ್ರಿಗಳು ₹ 30 ಸಾವಿರ ನೆರವು ನೀಡಿದ್ದರು. 

ರಾಷ್ಟ್ರಕವಿ ಕುವೆಂಪು ಅವರಿಂದ 1930ರಂದು ಉದ್ಘಾಟನೆಗೊಂಡಿತ್ತು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ ಈ ಸಂಸ್ಥೆಯ ಆರಂಭಕ್ಕೆ ಪ್ರೇರಕರು. 1942ರಲ್ಲಿ ಬಿ.ಎಂ.ಶ್ರೀ ಈ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು, ಅನಂತರ ಮೈಸೂರು ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್‌ 1943ರಲ್ಲಿ ಕಟ್ಟಡ ಉದ್ಘಾಟಿಸಿದ್ದರು.

ಐತಿಹಾಸಿಕ ಸಂಸ್ಥೆ ಇಂದಿಗೂ ನಿರಂತರ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ಪುಸ್ತಕ ಬಹುಮಾನಗಳ ಮೂಲಕ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಪ್ರತಿ ವರ್ಷ 12 ಬರಹಗಾರರಿಗೆ ತಲಾ ₹ 10 ಸಾವಿರ ಬಹುಮಾನ ನೀಡುತ್ತಾ ಬಂದಿದೆ. ತಿಂಗಳ ಅತಿಥಿ, ಸಾಹಿತ್ಯ ಸಮಾವೇಶಗಳು, ವಿಶೇಷ ಉಪನ್ಯಾಸಗಳು, ಸಾಹಿತ್ಯ ಶಿಬಿರಗಳು, ಚಿತ್ರಕಲೆ, ನೃತ್ಯ, ಸುಗಮ ಸಂಗೀತ, ನಾಟಕ ಪ್ರಕಾರಗಳಿಗೂ ಆದ್ಯತೆ ನೀಡಿದೆ. ಸಾಧಕರಿಗೆ ಗೌರವ ಸದಸ್ಯತ್ವ, ಇಬ್ಬರು ಹಿರಿಯ ಸಾಹಿತಿಗಳಿಗೆ ಜೀವಮಾನ ಸಾಧನೆಯ ಪ್ರಶಸ್ತಿಗಳ ಮೂಲಕ ಸಾಹಿತ್ಯ ಬೆಳವಣಿಗೆಗೆ ನಿರಂತರ ಕೊಡುಗೆ ನೀಡಿದೆ. 

ಅಂಚೆ ಲಕೋಟೆ, ಹತ್ತು ಹಲವು ಪ್ರಶಸ್ತಿ: ಸಾಹಿತ್ಯ, ಸಂಸ್ಕೃತಿಗಳ ಪ್ರಸಾರ ಹಾಗೂ ಕನ್ನಡ ನಾಡು, ನುಡಿ ಕಟ್ಟುವಲ್ಲಿ ರಚನಾತ್ಮಕವಾಗಿ ಮತ್ತು ಕ್ರಿಯಾತ್ಮಕವಾಗಿ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ಕರ್ನಾಟಕ ಸಂಘದ ಲಕೋಟೆಯನ್ನು ಈಚೆಗೆ ಅಂಚೆ ಇಲಾಖೆ ಬಿಡುಗಡೆ ಮಾಡಿತ್ತು. ಸಂಘದ ಕನ್ನಡ ಕಾರ್ಯ ಹಾಗೂ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆ ಗುರುತಿಸಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಅದರಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ ಪ್ರಶಸ್ತಿ (2006), ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2007), ಜಿಲ್ಲಾ ಕಸಾಪ ಪ್ರಶಸ್ತಿ(2007) ಕಂಪ್ಲಿ ಕರ್ನಾಟಕ ಸಂಘ ಪ್ರಶಸ್ತಿ (2008), ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿ (2008), ಪ್ರೊ.ಎಂ.ರಾಮಚಂದ್ರ ಅಭಿನಂದನಾ ಸಮಿತಿ ಪ್ರಶಸ್ತಿ (2011), ಆಳ್ವಾಸ್‌ ನುಡಿಸಿರಿ ಪ್ರಶಸ್ತಿ (2013)ಸೇರಿ ಹಲವು ಪ್ರಶಸ್ತಿಗಳು ಕರ್ನಾಟಕ ಸಂಘಕ್ಕೆ ಕಾರ್ಯವೈಖರಿಗೆ ಸಂದಿವೆ.

ಒಂದು ಕುಟುಂಬದ ಹಿಡಿತದಲ್ಲಿ ಸಂಘ: ಇಂತಹ ಇತಿಹಾಸ ಹೊಂದಿರುವ ಸಂಘ ಒಂದು ಕಾಲದಲ್ಲಿ ಜಿಲ್ಲೆಯ ಒಂದು ಪ್ರಬಲ ಜಾತಿಗೆ ಸೀಮಿತವಾಗಿದೆ ಎಂಬ ಆಪಾದನೆಗೆ ಒಳಗಾಗಿತ್ತು. ಸಂಘ ನಂತರದ ದಿನಗಳಲ್ಲಿ ಸ್ವಲ್ಪ ಉದಾರವಾದದ ಮಾರ್ಗದಲ್ಲಿ ಸಾಗಿದಂತೆ ಕಂಡುಬಂದಿತ್ತು. ಎಲ್ಲ ಸಿದ್ಧಾಂತ, ಪ್ರಕಾರಗಳ ಸಾಹಿತಿಗಳನ್ನೂ ಕರೆದು ವೈವಿಧ್ಯಮಯ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಹೊಸ ಪರಂಪರೆಗೆ ನಾಂದಿ ಹಾಡಲಾಗಿತ್ತು. ಈಗ ಮತ್ತೆ ಹಳೆಯ ಹಳಿಗೆ ಮರಳುತ್ತಿದೆ. ಒಂದು ಜಾತಿಗೆ ಸೀಮಿತವಾಗಿದ್ದ ಸಂಘ ಈಗ ಒಂದು ಕುಟುಂಬದ ಹಿಡಿತಕ್ಕೆ ಜಾರುತ್ತಿದೆ ಎನ್ನುವುದು ಸಂಘದ ಹಲವು ಸದಸ್ಯರ ಆರೋಪ.

₹ 30 ಲಕ್ಷ ವಾರ್ಷಿಕ ಆದಾಯ: ಕರ್ನಾಟಕ ಸಂಘ ಸಾಹಿತ್ಯ ಬೆಳವಣಿಗೆಗಾಗಿ ಕಟ್ಟಿದ ಸಂಸ್ಥೆಯಾದರೂ ದಾನವಾಗಿ ಪಡೆದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಇದರಿಂದಲೇ ವಾರ್ಷಿಕ ₹ 25 ಲಕ್ಷ ಬಾಡಿಗೆ ಬರುತ್ತದೆ. ಸಭಾಂಗಣದ ಬಾಡಿಗೆ ಸೇರಿದರೆ ವಾರ್ಷಿಕ ₹ 30 ಲಕ್ಷಕ್ಕೂ ಅಧಿಕ ಆದಾಯವಿದೆ. ಎರಡು ವರ್ಷಗಳ ಹಿಂದೆ ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಹೊಸ ಆಡಳಿತ ಮಂಡಳಿ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದನ್ನು ಸಹಿಸದ ಕೆಲವು ಪಟ್ಟಭದ್ರರು ಆಂತರಿಕ ಹಸ್ತಕ್ಷೇಪ ಮಾಡುತ್ತಿದ್ದದ್ದೇ ರಾಜೀನಾಮೆಗೆ ಕಾರಣ ಎಂದು ಸಂಘದ ಮೂಲಗಳು ತಿಳಿಸಿವೆ. 

90 ವರ್ಷಕ್ಕೆ 240 ಸದಸ್ಯರು!: ಸಂಘ ಹುಟ್ಟಿ 9 ದಶಕಗಳು ಕಳೆದರೂ ಸದಸ್ಯರ ಸಂಖ್ಯೆ 240 ದಾಟಿಲ್ಲ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡಲು ಸ್ಥಾಪಿಸಿದ ಸಂಘದಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರಿಗಿಂತ ಒಂದು ಸಮುದಾಯದ ಜನರಿಗೇ ಮನ್ನಣೆ ನೀಡಲಾಗಿದೆ. ಅದರಲ್ಲೂ ಕೆಲವೇ ಕುಟುಂಬಗಳಿಗೆ ಆದ್ಯತೆ ದೊರೆತಿದೆ. ವರ್ಷಕ್ಕೆ ಸದಸ್ಯತ್ವ ಕೋರಿ 100 ಅರ್ಜಿಗಳು ಬಂದರೆ ಅಂಗೀಕಾರ ಇಬ್ಬರಿಗಿಂತ ಹೆಚ್ಚಿರುವುದಿಲ್ಲ.

‘ಒಮ್ಮೆ ಟಿ.ಆರ್‌.ಪಾಂಡುರಂಗ ಅವರು ಅಧ್ಯಕ್ಷರಾಗಿದ್ದರು. ಸಾಹಿತ್ಯ ಚಟುವಟಿಕೆ, ಬರವಣಿಗೆಯಲ್ಲಿ ತೊಡಗಿಕೊಂಡಿದ್ದ ತಮ್ಮಂಥ ಸಾಹಿತ್ಯದ ಪ್ರೀತಿ ಹೊಂದಿದ್ದ ಉತ್ಸಾಹಿ ಯುವಕರನ್ನು ಸದಸ್ಯರಾಗಿ ಮಾಡಿದ್ದರು. ಅವರ ಅವಧಿ ಮುಗಿಯುತ್ತಿದಂತೆ ಕೊನೆಗೊಂದು ದಿನ ಸದಸ್ಯತ್ವದ ಚೆಕ್ ವಾಪಸ್ ಬಂದಿತ್ತು. ಆ ಹಣ ಇಂದಿಗೂ ನಗದು ಮಾಡಿಕೊಂಡಿಲ್ಲ. ಆದರೆ, ನಮ್ಮಲ್ಲಿಯೇ ಇದ್ದ ಪ್ರಬಲ ಜಾತಿಯ ಒಬ್ಬರ ಸದಸ್ಯತ್ವ ಸಿಂಧು ಆಗಿತ್ತು’ ಎಂದು ಅಲ್ಲಿನ ಸದಸ್ಯತ್ವ ಅಭಿಯಾನದ ಇತಿಹಾಸ ಬಿಚ್ಚಿಡುತ್ತಾರೆ ಹಿರಿಯ ಪತ್ರಕರ್ತ, ಬರಹಗಾರ ನಾಗರಾಜ್ ನೇರಿಗೆ. 

ಅಲ್ಲಿ ಸದಸ್ಯರಾಗಲು ಏನು ಅರ್ಹತೆ ಇರಬೇಕು? ಜಾತಿ, ಸಾಹಿತ್ಯ ಸಾಧನೆ, ಸಾಮಾಜಿಕ ಕಾರ್ಯಗಳಿಂದ ಹೆಸರು ಮಾಡಿರಬೇಕಾ? ಇವೆಲ್ಲವೂ ಇದ್ದು ಎಷ್ಟೋ ಸಾಹಿತಿಗಳ, ಸಾಹಿತ್ಯಾಸಕ್ತರ ಅರ್ಜಿಗಳು ತಿರಸ್ಕೃತವಾಗಿವೆ. ಸಂಘದ ಇಂತಹ ನಡೆ ವಿರುದ್ಧ ನಡೆಸಿದ ಹೋರಾಟ, ಎತ್ತಿದ ಧ್ವನಿಯೂ ಸಫಲವಾಗಿಲ್ಲ ಎನ್ನುವುದು ವಕೀಲ ಕೆ.ಪಿ.ಶ್ರೀಪಾಲ್ ಆರೋಪ.

‘ಹಿಂದಿನ ಚುನಾವಣೆಯಲ್ಲಿ ಸೋತಿದ್ದೇ ಒಳ್ಳೆಯದು ಆಯಿತು. ಇಲ್ಲದಿದ್ದರೆ ಈ ಎಲ್ಲಾ ಬೆಳವಣಿಗೆಗಳಿಗೆ ಸಾಕ್ಷಿ ಆಗಬೇಕಾಗಿತ್ತು. ಅಲ್ಲಿರೋರಿಗೆ ಡಾ.ನಾಗಭೂಷಣ ಹೊರ ಹೋಗದು ಬೇಕಿತ್ತು. ಇಲ್ಲಸಲ್ಲದ ಆರೋಪ ಮಾಡಿ ಹೊರಕಳಿಸಿದ್ರು. ಅವರನ್ನು ಮತ್ತೆ ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ದ್ವಂದ್ವ ನಿಲವಿನ ಇಂಥವರಿಂದ ಸಮಸ್ಯೆ ಬಿಗಡಾಯಿಸಿದೆ. ನಾಳೆ ಯಾರ ಬಗ್ಗೆ ಬೇಕಾದ್ರೂ ಒಂದು ಬೇನಾಮಿ ಪತ್ರ ಬರೆದರೂ, ಅವರನ್ನು ಹೊರ ಕಳಿಸಬಹುದು ಅನ್ನೋ ಸಂಪ್ರದಾಯ ಕರ್ನಾಟಕ ಸಂಘದಲ್ಲಿ ಶುರುವಾಗಿದೆ’ ಎನ್ನುತ್ತಾರೆ ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ.

ಹಣಕಾಸು ಬಿಗಿ ನಿರ್ವಹಣೆಗೆ ಬೆಲೆ ತೆತ್ತರು: ‘ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ 8 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದ ಎಚ್‌.ಎಸ್.ನಾಗಭೂಷಣ್‌ ಅವರ ರಾಜೀನಾಮೆ ಪಡೆಯಲು ಸಂಘದ ಒಳಗೆ ಷಡ್ಯಂತ್ರ ನಡೆದಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಅವರ ಮೇಲೆ ಸಂಘದ ಸಿಬ್ಬಂದಿಯಿಂದಲೇ ಜಾತಿ ನಿಂದನೆ ದೂರು ದಾಖಲಿಸುವ ಬೆದರಿಕೆ ಒಡ್ಡಲಾಗಿತ್ತು. ಹಣಕಾಸಿನ ವಿಚಾರದಲ್ಲಿ ಬಿಗಿ ನಿಲುವು ತಳೆದ ಖಜಾಂಚಿ ವೆಂಕಟೇಶ್ ವಿರುದ್ಧ  ಸುಳ್ಳು ಆರೋಪ ಹೊರಿಸಲಾಗಿತ್ತು. ಇಂತಹ ನಡೆಗಳಿಂದ ಮನನೊಂದು ಅವರು ರಾಜೀನಾಮೆ ನೀಡಿದ್ದಾರೆ’ ಎಂದು  ಸಂಘದ ಮಾಜಿ ನಿರ್ದೇಶಕರು ವಿವರ ನೀಡಿದರು.

ಕೆಲವರ ಕಿರುಕುಳ ಎರಡು ವರ್ಷಗಳಿಂದ ಸಹಿಸಿಕೊಂಡು ಬಂದಿದ್ದೆವು. ತಮಗೆ ಅನುಕೂಲವಾಗಲಿಲ್ಲ ಎಂದು ಕೆಲವರು ವಿವಾದ ಹುಟ್ಟುಹಾಕಿದರು. ಸಿಬ್ಬಂದಿ ಬಳಸಿಕೊಂಡು ತೆರೆ ಮರೆಯ ಪಿತೂರಿ ನಡೆಸಿದರು. ವಿಪರೀತಕ್ಕೆ ಹೋದ ಕಾರಣ ರಾಜೀನಾಮೆ ಕೊಟ್ಟು ಹೊರಬಂದಿದ್ದೇವೆ ಎನ್ನುತ್ತಾರೆ ಕರ್ನಾಟಕ ಸಂಘದ ನಿರ್ಗಮಿತ ಕಾರ್ಯದರ್ಶಿ ಎಚ್‌.ಎಸ್.ನಾಗಭೂಷಣ್, ಖಜಾಂಚಿ ಡಾ.ಕೆ.ಜಿ.ವೆಂಕಟೇಶ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು